ವಿಜೃಂಭಣೆಯಿಂದ ಜರುಗಿದ ಚೆಲುವನಾರಾಯಣಸ್ವಾಮಿ ವೈರಮುಡಿ ಉತ್ಸವ

| Published : Mar 22 2024, 01:01 AM IST

ಸಾರಾಂಶ

ದಕ್ಷಿಣದ ಬದರಿ ಕ್ಷೇತ್ರವೆಂದು ಪ್ರಸಿದ್ಧಿಯನ್ನು ಪಡೆದಿರುವ ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ಶ್ರೀ ಚಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ ಶನಿವಾರ ರಾತ್ರಿ ವೈಭವದಿಂದ ನಡೆಯಿತು.

ಶ್ರೀ ಚಲುವನಾರಾಯಣನನ್ನು ಕಣ್ತುಂಬಿಕೊಂಡ ಜನಸಾಗರ । ನಾಲ್ಕು ದಿಕ್ಕಿನಿಂದಲೂ ಭಕ್ತರಿಗೆ ದೇವರ ದರ್ಶನ

ಕನ್ನಡಪ್ರಭ ವಾರ್ತೆ ಮಂಡ್ಯ ದಕ್ಷಿಣದ ಬದರಿ ಕ್ಷೇತ್ರವೆಂದು ಪ್ರಸಿದ್ಧಿಯನ್ನು ಪಡೆದಿರುವ ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ಶ್ರೀ ಚಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವ ಶನಿವಾರ ರಾತ್ರಿ ವೈಭವದಿಂದ ನಡೆಯಿತು.ವೈರಮುಡಿ (ವೈರ ಅಂದರೆ ವಜ್ರ ಮುಡಿ ಎಂದರೆ ಕಿರೀಟ)ವನ್ನು ಭಗವಂತನ ಕಿರೀಟ ಎಂದೇ ಪುರಾತನ ಕಾಲದಿಂದಲೂ ನಂಬಿಕೊಂಡು ಬರಲಾಗಿದೆ. ಈ ವೈರಮುಡಿ ಕಿರೀಟವನ್ನು ಗರುಡಾರೂಢನಾದ ಶ್ರೀ ಚಲುವನಾರಾಯಣನ ಮುಡಿಗೆ ಅಲಂಕರಿಸಲಾಗಿತ್ತು. ರಾತ್ರಿ ಯಾಗಶಾಲೆ ಮತ್ತು ಗರುಡದೇವನ ಮೆರವಣಿಗೆಯ ನಂತರ ಮಹಾಮಂಗಳಾರತಿಯ ಪ್ರಾರ್ಥನೆ ಸಲ್ಲಿಸಿದ ಬಳಿಕ ರಾತ್ರಿ ೮.೩೦ಕ್ಕೆ ಆರಂಭವಾದ ವೈರಮುಡಿ ಉತ್ಸವ ಮುಂಜಾನೆ ೩.೩೦ ಗಂಟೆವರೆಗೂ ಸಾಂಗೋಂಪಾಂಗವಾಗಿ ನಡೆಯಿತು. ದೇವಾಲಯದ ಎಡಭಾಗದಲ್ಲಿ ನಿರ್ಮಿಸಲಾಗಿರುವ ಮಂಟಪದಲ್ಲಿ ಸ್ವಾಮಿಗೆ ಮತ್ತೊಮ್ಮೆ ಮಂಗಳಾರತಿ ಮಾಡಲಾಯಿತು. ನಂತರ ಚತುರ್ವೀದಿಗಳಲ್ಲಿ ವೈರಮುಡಿ ಉತ್ಸವ ಸಂಭ್ರಮದಿಂದ ನೆರವೇರಿತು. ಶ್ರೀ ಚಲುವನಾರಾಯಣಸ್ವಾಮಿಗೆ ವರ್ಷದಲ್ಲಿ ನಡೆಯುವ ಎಲ್ಲಾ ಉತ್ಸವಗಳಿಗಿಂತ ವೈರಮುಡಿ ಉತ್ಸವ ಪ್ರಧಾನವಾದುದು. ವೈರಮುಡಿ ಧರಿಸಿದ ಸ್ವಾಮಿಯನ್ನು ಎಷ್ಟೇ ದೂರದಲ್ಲಿ ಯಾವ ದಿಕ್ಕಿನಲ್ಲಿದ್ದರೂ ಭಕ್ತರು ದರ್ಶನಕ್ಕೆ ಮಾಡಲು ಅನುಕೂಲವಾಗುವಂತೆ ಗರುಡ ವಾಹನದಲ್ಲಿ ವೈರಮುಡಿಯಿಂದ ಅಲಂಕೃತನಾದ ಸ್ವಾಮಿ ಭಕ್ತರನ್ನು ಅನುಕ್ರಗಹಿಸಲೆಂದು ನಾಲ್ಕು ಕಡೆಗೂ ತಿರುಗಿಸುತ್ತಾ ಸೇವೆ ಸಲ್ಲಿಸಲಾಯಿತು.ವೈರಮುಡಿ ಮೆರವಣಿಗೆ: ಮಂಡ್ಯ ಜಿಲ್ಲಾ ಖಜಾನೆಯಿಂದ ಬಿಗಿ ಪೊಲೀಸ್ ಭದ್ರತೆಯಲ್ಲಿ ತರಲಾದ ವೈರಮುಡಿ ಮತ್ತು ರಾಜಮುಡಿ ಕಿರೀಟಗಳನ್ನು ಪಾರ್ವತಿ ಮಂಟಪದ ಬಳಿಯಿಂದ ಬಂಗಾರದ ಪಲ್ಲಕ್ಕಿಯಲ್ಲಿಟ್ಟು ಭವ್ಯ ಮೆರವಣಿಗೆಯಲ್ಲಿ ೫.೩೦ರ ವೇಳೆಗೆ ಶ್ರೀ ಚಲುವನಾರಾಯಣಸ್ವಾಮಿ ದೇವಸ್ಥಾನಕ್ಕೆ ತರಲಾಯಿತು.ಶ್ರೀ ಚಲುವನಾರಾಯಣಸ್ವಾಮಿಯ ಸನ್ನಿಧಿಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ, ಜಿಲ್ಲಾ ಎಸ್ಪಿ ಎನ್.ಯತೀಶ್, ಪಾಂಡವಪುರ ಎಸಿ ಮಾರುತಿ ಅವರ ನೇತತ್ವದ ಅಧಿಕಾರಿಗಳ ತಂಡದ ಉಸ್ತುವಾರಿಯಲ್ಲಿ ವೈರಮುಡಿ ಹಾಗೂ ರಾಜಮುಡಿ ಕೀರೀಟ ಮತ್ತು ಆಭರಣಗಳನ್ನು ಪರಿಶೀಲನೆ (ಪರ್ಕಾವಣೆ) ನಡೆಸಿ ನಂತರ ಪ್ರಧಾನ ಅರ್ಚಕರಿಗೆ ಹಸ್ತಾಂತರಿಸಲಾಯಿತು.ಸಾಕ್ಷಾತ್ ಶ್ರೀಮನ್ನಾರಾಯಣನ ಕಿರೀಟ ಎಂದೇ ನಂಬಿರುವ ವೈರಮುಡಿ ಕಿರೀಟವನ್ನು ಶ್ರೀ ರಾಮಾನುಜಾಚಾರ್ಯರ ಸನ್ನಿಧಿಯಲ್ಲಿ ಗರುಡಾರೂಢನಾದ ಶ್ರೀ ಚಲುವನಾರಾಯಣನ ಮುಡಿಗೆ ಅಲಂಕರಿಸಲಾಯಿತು. ಜಿಲ್ಲಾಧಿಕಾರಿ ಡಾ.ಕುಮಾರ ಅವರು ಸ್ವಾಮಿಗೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು. ರಾತ್ರಿ ಯಾಗಶಾಲೆ ಮತ್ತು ಗರುಡದೇವನ ಮೆರವಣಿಗೆಯ ನಂತರ ಮಹಾಮಂಗಳಾರತಿಯ ಪ್ರಾರ್ಥನೆ ಸಲ್ಲಿಸಿದ ಬಳಿಕ ರಾತ್ರಿ ೮.೩೦ಕ್ಕೆ ವೈರಮುಡಿ ಉತ್ಸವಕ್ಕೆ ಅಣಿಗೊಳಿಸಲಾಯಿತು.ದೇವಾಲಯದ ಚತುರ್ವೀದಿಗಳಲ್ಲೂ ವೈರಮುಡಿ ಉತ್ಸವ ನೋಡಲು ಕಾತರದಿಂದ ಕಾಯುತ್ತಿದ್ದರು. ಬಳಿಕ ಶ್ರೀ ಚಲುವನಾರಾಯಣಸ್ವಾಮಿಯ ವೈರಮುಡಿ ಉತ್ಸವ ರಾಜಬೀದಿಗೆ ಬರುತ್ತಿದ್ದಂತೆ ಭಕ್ತರ ಗೋವಿಂದ ನಾಮಸ್ಮರಣೆಯ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ತಮ್ಮ ಬಳಿಗೆ ಬಂದ ವೈರಮುಡಿ ಕಿರೀಟಧಾರಣೆಯ ಚೆಲುವನ ಸೊಬಗನ್ನು ಭಕ್ತರು ಕಣ್ತುಂಬಿಕೊಂಡು ಪುನೀತರಾದರು. ಹಲವು ಭಕ್ತರು ವೈರಮುಡಿಯಿಂದ ಅಲಂಕೃತನಾದ ಗರುಡಾರೂಢ ಶ್ರೀ ಚಲುವನಾರಾಯಣನನ್ನು ಕಂಡು ಭಾವಪರವಶರಾದದ್ದು ಕಂಡುಬಂತು.ದೀಪಾಲಂಕಾರ:ವೈರಮುಡಿ ಉತ್ಸವದ ಅಂಗವಾಗಿ ಶ್ರೀ ಯೋಗಾನರಸಿಂಹಸ್ವಾಮಿ ದೇವಾಲಯ, ಶ್ರೀ ಚಲುವನಾರಾಯಣಸ್ವಾಮಿ ದೇವಾಲಯ, ಕಲ್ಯಾಣಿ, ಮಂಟಪಗಳಿಗೆ, ಸರ್ಕಾರಿ ಕಚೇರಿ ಕಟ್ಟಡಗಳಿಗೆ ಹಾಗೂ ಮೇಲುಕೋಟೆ ಶ್ರೀ ಯೋಗಾನರಸಿಂಹಸ್ವಾಮಿ ದೇವಸ್ಥಾನದ ಬೆಟ್ಟ ಸೇರಿದಂತೆ ವಿವಿಧೆಡೆ ವಿದ್ಯುತ್ ದೀಪಾಲಂಕಾರ ವ್ಯವಸ್ಥೆ ಮಾಡಲಾಗಿತ್ತು.ಬಿಗಿ ಭದ್ರತೆ: ವೈರಮುಡಿ ಉತ್ಸವದ ಹಿನ್ನೆಲೆಯಲ್ಲಿ ಮೇಲುಕೋಟೆ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ನೇತೃತ್ವದಲ್ಲಿ ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಕಾರಿಗಳು, ೪ ಮಂದಿ ಡಿವೈಎಸ್ಪಿಗಳು, ೧೬ ಇನ್ಸ್‌ಪೆಕ್ಟರ್‌ಗಳು, ೩೧ ಪಿಎಸ್‌ಐಗಳು, ೧೦೦ ಎಎಸ್‌ಐ, ಮುಖ್ಯಪೇದೆ, ಪೇದೆಗಳು, ಮಹಿಳಾ ಸಿಬ್ಬಂದಿಗಳು, ಸೇರಿ ೪೮೬ ಕ್ಕೂ ಹೆಚ್ಚು ಮಂದಿ, ೨ ರಾಜ್ಯ ಸಶಸ್ತ್ರ ಮೀಸಲು ಪಡೆ ಹಾಗೂ ೫ ಜಿಲ್ಲಾ ಸಶಸ್ತ್ರ ಮೀಸಲು ಪಡೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.

ವೈರಮುಡಿ, ರಾಜಮುಡಿಗೆ ಸಾಂಪ್ರದಾಯಿಕ ಪೂಜೆ

ಮಂಡ್ಯ: ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ ಐತಿಹಾಸಿಕ ಶ್ರೀ ವೈರಮುಡಿ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ವಜ್ರಖಚಿತ ವೈರಮುಡಿ, ರಾಜಮುಡಿ ಮತ್ತು ಇತರ ವಜ್ರಾಭರಣಗಳನ್ನು ಜಿಲ್ಲಾ ಖಜಾನೆಯಿಂದ ಗುರುವಾರ ಬೆಳಗ್ಗೆ ಮೇಲುಕೋಟೆಗೆ ಕೊಂಡೊಯ್ಯಲಾಯಿತು.ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿಟ್ಟಿದ್ದ ವೈರಮುಡಿ ಸಹಿತ ವಜ್ರಾಭರಣಗಳ ಎರಡು ಗಂಟುಗಳನ್ನು ಜಿಲ್ಲಾಧಿಕಾರಿ ಡಾ. ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸೀಫ್, ಎಸ್ಪಿ ಎನ್. ಯತೀಶ್, ಎಡಿಸಿ ಡಾ.ಎಚ್.ಎಲ್.ನಾಗರಾಜು ನೇತೃತ್ವದಲ್ಲಿ ಬೆಳಗ್ಗೆ ೭.೪೫ಕ್ಕೆಹೊರ ತೆಗೆಯಲಾಯಿತು. ಬಳಿಕ ಖಜಾನೆ ಮುಖ್ಯದ್ವಾರದಲ್ಲಿ ಆಭರಣಗಳ ಗಂಟುಗಳನ್ನಿಟ್ಟು ಅವುಗಳಿಗೆ ಹಾರ ತೊಡಿಸಿ, ಸಾಂಪ್ರದಾಯಿಕವಾಗಿ ಪ್ರಥಮ ಪೂಜೆ ನೆರವೇರಿಸಲಾಯಿತು. ಈ ವೇಳೆ ಅಧಿಕಾರಿಗಳು ವೈರಮುಡಿ ಮತ್ತು ವಜ್ರಾಭರಣಗಳಿದ್ದ ಗಂಟುಗಳಿಗೆ ಶ್ರದ್ಧಾ-ಭಕ್ತಿಯಿಂದ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಪಾಂಡವಪುರ ಎಸಿ ಮಾರುತಿ, ತಹಸೀಲ್ದಾರ್ ಜಿ.ಎನ್.ಶ್ರೇಯಸ್, ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

ಕೇವಲ ೧೫ ನಿಮಿಷದಲ್ಲಿ ಪೂಜೆ ಮುಗಿಸಿ, ಆಭರಣಗಳ ಗಂಟುಗಳನ್ನು ಶ್ರೀ ಚಲುವನಾರಾಯಣಸ್ವಾಮಿ ದೇವಾಲಯದ ಮೊದಲ ಸ್ಥಾನೀಕಂ ಕರಗಂ ನಾರಾಯಣ ಅಯ್ಯಂಗಾರ್, ಕರಗಂ ರಂಗಪ್ರಿಯ ಅವರಿಗೆ ಹಸ್ತಾಂತರಿಸಲಾಯಿತು. ಬೆಳಗ್ಗೆ ೮ ಗಂಟೆ ಖಜಾನೆ ಆವರಣದಿಂದ ವಾಹನ ಹೊರಟಿತು.ವಾಹನವೇರಿದ ವೈರಮುಡಿ:

ವೈರಮುಡಿ ಉತ್ಸವದ ಅಂಗವಾಗಿ ವರ್ಷಕ್ಕೊಮ್ಮೆ ಮಾತ್ರ ವೈರಮುಡಿ ಕಿರೀಟವನ್ನು ಖಜಾನೆಯಿಂದ ಹೊರತೆಗೆಯಲಾಗುತ್ತದೆ. ಮೈಸೂರಿನ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಸ್ವಾಮಿ ಮಠದ ವಾಹನದಲ್ಲಿ ವೈರಮುಡಿ, ರಾಜಮುಡಿ ಮತ್ತು ವಜ್ರಾಭರಣಗಳನ್ನು ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಮೇಲುಕೋಟೆಗೆ ಕೊಂಡೊಯ್ಯುವುದು ಸಂಪ್ರದಾಯ. ಅದರಂತೆ ಈ ವರ್ಷವೂ ಅದೇ ವಾಹನದಲ್ಲಿ ಪ್ರಯಾಣ ಬೆಳೆಸಲಾಯಿತು.ಖಜಾನೆಯಿಂದ ಹೊರಟ ವಾಹನವು ನಂತರ ನಗರದ ಶ್ರೀ ಲಕ್ಷ್ಮಿಜನಾರ್ದನಸ್ವಾಮಿ ದೇವಾಲಯಕ್ಕೆ ತೆರಳಿತು. ಮಂಗಳವಾದ್ಯಗಳ ಸದ್ದಿನೊಂದಿಗೆ ದೇವಾಲಯ ಅವರಣದಲ್ಲಿ ೮.೧೦ಕ್ಕೆ ವೈರಮುಡಿ ಆಭರಣಕ್ಕೆ ಸ್ವಾಗತ ಕೋರಲಾಯಿತು. ಅಲ್ಲಿನ ಮಂಟಪದಲ್ಲಿ ವೈರಮುಡಿಯನ್ನು ಇಟ್ಟು ಶ್ರೀ ಚಲುವನಾರಾಯಣಸ್ವಾಮಿ ದೇವರ ಒಕ್ಕಲಿನವವರು ಸಾಂಪ್ರದಾಯಿಕ ಪೂಜೆ ನೆರವೇರಿಸಿದರು. ಅಲ್ಲಿಂದ ೮.೨೦ಕ್ಕೆ ವಾಹನವು ಮೇಲುಕೋಟೆಯತ್ತ ಸಾಗಿತು. ಇದೇ ವೇಳೆ ಶ್ರೀ ಲಕ್ಷ್ಮೀಜನಾರ್ದನ ದೇವಾಲಯದ ಪಕ್ಕದಲ್ಲಿನ ಶ್ರೀ ಶ್ರೀನಿವಾಸಸ್ವಾಮಿ ದೇವಾಲಯ ಬಳಿಯೂ ಮಹಿಳೆಯರು ಪೂಜೆ ಸಲ್ಲಿಸಿದರು.

ವೈರಮುಡಿಗೆ ದಾರಿಯುದ್ದಕ್ಕೂ ಸ್ವಾಗತ:ಮೇಲುಕೋಟೆಗೆ ತೆರಳುವ ಮಾರ್ಗಮಧ್ಯೆ ಸಿಗುವ ಇಂಡುವಾಳು, ಸುಂಡಹಳ್ಳಿ, ತೂಬಿನಕೆರೆ, ಕಾಳೇನಹಳ್ಳಿ, ಗಣಂಗೂರು, ಕೆ.ಶೆಟ್ಟಹಳ್ಳಿ, ಬಾಬುರಾಯನಕೊಪ್ಪಲು, ಕಿರಂಗೂರು, ದರಸಗುಪ್ಪೆ, ಪಾಂಡವಪುರ ರೈಲ್ವೆ ನಿಲ್ದಾಣ, ಕೆ.ಬೆಟ್ಟಹಳ್ಳಿ, ಮಾಣಿಕ್ಯನಹಳ್ಳಿ, ಜಕ್ಕನಹಳ್ಳಿ, ಕದಲಗೆರೆ ಸೇರಿದಂತೆ 86 ಹಳ್ಳಿಗಳ ಮಾರ್ಗವಾಗಿ ವೈರಮುಡಿ ಹೊತ್ತ ವಾಹನ ಮೇಲುಕೋಟೆಗೆ ಸಂಜೆ ೫ ಗಂಟೆ ವೇಳೆಗೆ ತಲುಪಿತು. ತಿರುವಾಭರಣ ಬರುವ ಜಾಗಗಳಲ್ಲಿ ಪಿಡಿಒಗಳು, ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳು ಸ್ವಚ್ಛತೆಯೊಂದಿಗೆ ರಸ್ತೆಗಳಲ್ಲಿ ರಂಗೋಲಿ ಇಟ್ಟು, ತಳಿರು, ತೋರಣ, ಚಪ್ಪರ ಹಾಕಿ ವೈರಮುಡಿಗೆ ಭಕ್ತಿಪೂರ್ವಕ ಸ್ವಾಗತ ಕೋರಿದರು. ಅಲ್ಲಲ್ಲಿ ಪಾನಕ, ನೀರು ಮಜ್ಜಿಗೆ ಮತ್ತು ಪ್ರಸಾದ ವಿನಿಯೋಗವೂ ನಡೆಯಿತು.