ಸಾರಾಂಶ
ಲಕ್ಷ್ಮೇಶ್ವರ: ಸಮೀಪದ ಸುವರ್ಣಗಿರಿ ತಾಂಡಾದಿಂದ ಪಟ್ಟಣದ ಉಮಾ ವಿದ್ಯಾಲಯಕ್ಕೆ ಪರೀಕ್ಷೆ ಬರೆಯಲು ಬಸ್ ಮೂಲಕ ಆಗಮಿಸುತ್ತಿದ್ದ ಹೈಸ್ಕೂಲ್ ವಿದ್ಯಾರ್ಥಿನಿಯರ ಮೇಲೆ ಅದೇ ಗ್ರಾಮದ ಯುವಕರು ಸಗಣಿ, ಮೊಟ್ಟೆ, ಗೊಬ್ಬರ ಮತ್ತು ರಾಸಾಯನಿಕ ಮಿಶ್ರಿತ ಬಣ್ಣ ಎರಚಿದ್ದರಿಂದಟಾ ವಿದ್ಯಾರ್ಥಿನಿಯರು ಉಸಿರಾಟ ಸಮಸ್ಯೆಯಿಂದ ಅಸ್ವಸ್ಥಗೊಂಡ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಗೌರಿ ಪೂಜಾರ, ದಿವ್ಯಾ ಲಮಾಣಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರಗೆ ಕಳುಹಿಸಿ ಕೊಡಲಾಗಿದ್ದು, ಅಂಕಿತಾ ಲಮಾಣಿ, ತನುಷಾ ಲಮಾಣಿ ಪಟ್ಟಣದ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಘಟನೆ ವಿವರ:
ಸಮೀಪದ ಸುವರ್ಣಗಿರಿ ತಾಂಡಾದಿಂದ 10ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಲಕ್ಷ್ಮೇಶ್ವರದ ಉಮಾ ವಿದ್ಯಾಲಯಕ್ಕೆ ಪರೀಕ್ಷೆ ಬರೆಯಲು ಆಗಮಿಸುತ್ತಿದ್ದರು. ಈ ವೇಳೆ ಅಲ್ಲಿನ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ವಿದ್ಯಾರ್ಥಿನಿಯರ ಮೇಲೆ ಅದೇ ಗ್ರಾಮದ ಕೆಲ ಯುವಕರು ಹೋಳಿ ಹಬ್ಬದ ಅಂಗವಾಗಿ ಬಣ್ಣ ಹಚ್ಚಲು ಮುಂದಾಗಿದ್ದಾರೆ. ಆಗ ಆ ವಿದ್ಯಾರ್ಥಿನಿಯರು ನಾವು ಪರೀಕ್ಷೆ ಬರೆಯಲು ಹೊರಟಿದ್ದೇವೆ, ಬಣ್ಣ ಹಚ್ಚದಂತೆ ಮನವಿ ಮಾಡಿದ್ದಾರೆ. ಆ ವೇಳೆ ಬಸ್ ಬಂದಿದೆ. ಬಸ್ ಹತ್ತುವ ಗಡಿಬಿಡಿಯಲ್ಲಿದ್ದ ವಿದ್ಯಾರ್ಥಿನಿಯರ ಮೇಲೆ ಕೆಲ ಯುವಕರು ಬಣ್ಣ ಎರಚಿದ್ದಾರೆ. ಬಸ್ಸಿನ ಡ್ರೈವರ್ ಮತ್ತು ನಿರ್ವಾಹಕರು ಬಣ್ಣ ಹಚ್ಚದಂತೆ ಬುದ್ಧಿ ಹೇಳಿದರೂ ಯುವಕರು ಅವರ ಮಾತಿಗೆ ಕಿವಿಗೊಡದೆ ಬಣ್ಣ ಎರಚಿದ್ದಾರೆ.ರಾಸಾಯನಿಕ ಮಿಶ್ರಣದ ಬಣ್ಣ ವಿದ್ಯಾರ್ಥಿನಿಯರ ಮೇಲೆ ಬಿದ್ದಿದ್ದರಿಂದ ಉಸಿರಾಟದ ಸಮಸ್ಯೆ ಹಾಗೂ ವಾಂತಿ ಮಾಡಿಕೊಳ್ಳಲು ಆರಂಭಿಸಿದ ಅವರು ಪಟ್ಟಣದ ಉಮಾ ವಿದ್ಯಾಲಯದ ಬಳಿ ಇಳಿದುಕೊಂಡಿದ್ದಾರೆ. ಆಗ ವಿದ್ಯಾರ್ಥಿನಿಯರ ಕಿರುಚಾಟ ಹಾಗೂ ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದರಿಂದ ಸ್ಥಳೀಯರು ಅವರನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ವಿದ್ಯಾರ್ಥಿನಿಯರನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ.ಈ ವೇಳೆ ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವ ವಿಷಯ ತಿಳಿದ ಶಾಲೆಯ ಶಿಕ್ಷಕರು, ಪೊಲೀಸರು ಆಸ್ಪತ್ರೆ ದೌಡಾಯಿಸಿದರು. ನಂತರ ವೈದ್ಯರು ತೀವ್ರ ಎದೆ ನೋವು, ಉಸಿರಾಟದ ಸಮಸ್ಯೆಯಿಂದ ಅಸ್ವಸ್ಥಗೊಂಡ ಗೌರಿ ಪೂಜಾರ, ದಿವ್ಯಾ ಲಮಾಣಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ಕಳಿಸಿಕೊಡಲಾಗಿದೆ.
ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಅಂಕಿತಾ ಲಮಾಣಿ, ತನುಷಾ ಲಮಾಣಿ ಎಂಬ ವಿದ್ಯಾರ್ಥಿನಿಯರು ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪೋಷಕರ ಆಗ್ರಹ: ನಮ್ಮ ಮಕ್ಕಳ ಮೇಲೆ ಬಣ್ಣ ಎರಚಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ಮತ್ತೆ ಇಂತಹ ಘಟನೆ ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಪಾಲಕ ಬಸವರಾಜ ಪೂಜಾರ ಆಗ್ರಹಿಸಿದ್ದಾರೆ.