ಸಾರಾಂಶ
ಬೆಂಗಳೂರು : ಬಡ, ಮಧ್ಯಮ ವರ್ಗದವರಿಗಾಗಿ ಸರ್ಕಾರಿ ಆಸ್ಪತ್ರೆಗಳಲ್ಲೂ ಕೀಮೋಥೆರಪಿ ಸೌಲಭ್ಯ ಒದಗಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಶೀಘ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಭಾನುವಾರ ಸ್ಪರ್ಶ್ ಆಸ್ಪತ್ರೆ ಸಮೂಹ ಸಂಸ್ಥೆಯು ನಗರದ ಹೆಣ್ಣೂರು ರಸ್ತೆಯಲ್ಲಿ ನೂತನವಾಗಿ ಆರಂಭಿಸಿದ ‘ವಿಶೇಷ ಚಿಕಿತ್ಸಾ ಸೌಲಭ್ಯಗಳ 300 ಹಾಸಿಗೆಯ ಸ್ಪರ್ಶ್ ಆಸ್ಪತ್ರೆ ಶಾಖೆ ಉದ್ಘಾಟಿಸಿ ಮಾತನಾಡಿದರು.
ಕ್ಯಾನ್ಸರ್‌ನಿಂದ ಬಳಲುವ ರೋಗಿಗಳು ತಮ್ಮ ಚಿಕಿತ್ಸೆಗೆ ಲಕ್ಷಾಂತರ ರುಪಾಯಿ ವ್ಯಯಿಸುವುದು ಅನಿವಾರ್ಯ. ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸೌಕರ್ಯ ಇರುವುದರಿಂದ ಬಡವರು ಅಲ್ಲಿಗೆ ತೆರಳುತ್ತಾರೆ. ಬಡರೋಗಿಗಳು ಕಿಮೋಥೆರಪಿಗೆ ಸಾವಿರಾರು ರುಪಾಯಿ ವ್ಯಯಿಸುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲೂ ಈ ಸೌಲಭ್ಯ ಒದಗಿಸಿದರೆ ಸಾಕಷ್ಟು ಜನರು ಬರುವಂತಾಗುತ್ತದೆ. ಈ ನಿಟ್ಟಿನಲ್ಲಿ ಕಿಮೋಥೆರಪಿ ಸೌಲಭ್ಯ ಕಲ್ಪಿಸಲು ಮುಂದಾಗಿದ್ದು, ಶೀಘ್ರವೇ ಈ ಸೇವೆಗೆ ಚಾಲನೆ ಸಿಗಲಿದೆ ಎಂದರು.