ಸಾರಾಂಶ
ಶಿರಸಿ: ಹಳ್ಳಿಯಲ್ಲಿದ್ದೂ ಸಾಧನೆ ಮಾಡಲಾಗದು ಎಂಬ ಮನಸ್ಥಿತಿಯವರಿಗೆ ರಾಣಿ ಚೆನ್ನಭೈರಾದೇವಿ ಅವರ ದಿಟ್ಟ ಸಾಧನೆ ನಮಗೆ ಮಾದರಿಯಾಗುತ್ತದೆ. ಅಂಥ ಪಟ್ಟಣವಲ್ಲದ ಊರಿನಲ್ಲೂ ಆ ಕಾಲದಲ್ಲೇ ನೆಲದ ಅಸ್ಮತೆ ಉಳಿಸಿಕೊಟ್ಟವಳು ಚೆನ್ನಭೈರಾದೇವಿ ಎಂದು ಖ್ಯಾತ ಕಾದಂಬರಿಕಾರ, ಚೆನ್ನಭೈರಾದೇವಿ ಕಾದಂಬರಿಯ ಕರ್ತೃ ಗಜಾನನ ಶರ್ಮಾ ತಿಳಿಸಿದರು.
ಶುಕ್ರವಾರ ಎಂಇಎಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಸಹಕಾರದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಸಂಸ್ಥೆಯು ಹಮ್ಮಿಕೊಂಡ ಹೇಳದೇ ಉಳಿದ ಕಥೆಗಳು ಕಾರ್ಯಕ್ರಮದಲ್ಲಿ ಮಾತನಾಡಿದರು.ಸಿಕ್ಕ ಮಾಹಿತಿ ಬಳಸಿಕೊಂಡು ಬರೆದರೂ ಒಂದಿಷ್ಟು ಕಾದಂಬರಿಯಲ್ಲಿ ಉಳಿಯುತ್ತದೆ ಹಾಗೂ ಕಾದಂಬರಿಯಲ್ಲಿ ಒಂದಿಷ್ಟು ಉಳಿಸಿಕೊಳ್ಳಬೇಕಿದೆ ಎಂದ ಅವರು, ಚೆನ್ನಭೈರಾದೇವಿ ಅವಳ ವೈಯಕ್ತಿಕ ಬದುಕು ಅವಳ ಸಾಧನೆ ಮುಂದೆ ಅವೆಲ್ಲ ಏನೂ ಅಲ್ಲ. ನಮ್ಮ ನೆಲ, ನಮ್ಮ ಅಸ್ಮಿತೆ ಉಳಿಸಿಕೊಡುವಲ್ಲಿ ಚೆನ್ನಭೈರಾದೇವಿ ಕೊಡುಗೆ ದೊಡ್ಡದು ಎಂದರು.
ಚೆನ್ನಭೈರಾದೇವಿ ೧೬ನೇ ಶತಮಾನದ ಹಾಡುವಳ್ಳಿ, ಗೇರುಸೊಪ್ಪೆ ಕೇಂದ್ರವಾಗಿಟ್ಟುಕೊಂಡು ಆಳಿದವಳು. ಕರಿಮೆಣಸಿನ ಮೇಲೆ ಹಿಡಿತ ಸಾಧಿಸಿದ ಮಹಿಳೆ. ಬಂಗಾರದ ಮೂಲಕ ವ್ಯವಹಾರ ಮಾಡುತ್ತಿದ್ದ ಕಾಲದಲ್ಲಿ ಬೆಳ್ಳಿ ಮೂಲಕ ವ್ಯವಹಾರ ಮಾಡಿದ್ದಳು. ವಿಜಯನಗರದ ಸಾಮ್ರಾಜ್ಯಕ್ಕೆ ಅನೇಕ ಸರಕು ಕೊಡುತ್ತಿದ್ದವಳು ಇವಳು. ೫೪ ವರ್ಷ ಆಳಿದಾಕೆ. ೧೮ ವರ್ಷದ ಹಳ್ಳಿ ಹೆಣ್ಣುಮಗಳು ರಾಜ್ಯ ಆಳಲು ಆರಂಭಿಸಿದವಳು. ಯುರೋಪಿನಲ್ಲಿ ರಾಣಿ ಜತೆಗೆ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ, ಗೌರವದಿಂದ ಮಾಡುವಂತೆ ಸೂಚಿಸುತ್ತಿದ್ದರು ಎಂದರು.ಪತ್ರಕರ್ತ ರವೀಂದ್ರ ಭಟ್ಟ ಐನಕೈ ಮಾತನಾಡಿ, ಸಮಾಜದ ಕಡೆಯ ವ್ಯಕ್ತಿ, ರಾಷ್ಟ್ರಪತಿಗಳ ಜತೆಗೂ ಕುಳಿತು ಮಾತನಾಡುವ ಅವಕಾಶ ಇರುವುದು ಪತ್ರಕರ್ತರಿಗೆ ಮಾತ್ರ. ಇತಿಹಾಸ, ವರ್ತಮಾನ, ಭವಿಷ್ಯದ ಅರಿವು ಇರಬೇಕು ಎಂದು ನಮ್ಮ ಯಕ್ಷಗಾನ ಕಲ್ಪನೆ ಕಲಿಸಿದೆ. ಪತ್ರಕರ್ತರಾಗಬೇಕಾದವರು ಓದುವ ಕ್ರಿಯೆಗೆ ಒಪ್ಪಿಸಿಕೊಳ್ಳಬೇಕು ಎಂದರು.
ಸೆಲ್ಕೋ ಇಂಡಿಯಾದ ಸಿಇಒ ಮೋಹನ ಭಾಸ್ಕರ ಹೆಗಡೆ ಅವರು, ಅಧಿಕೃತತೆ, ಅನ್ವೇಷಣೆ, ಆಧಾರ ಇಟ್ಟು ಧ್ಯಾನಸ್ಥರಾಗಿ ಕೆಲಸ ಮಾಡಿದವರು ಗಜಾನನ ಶರ್ಮಾ. ಕಾದಂಬರಿ ಹಾಗೂ ವಾಸ್ತವ ಚಿತ್ರಣ ವಿಶ್ಲೇಷಣೆ ಮಾಡಬಲ್ಲವರು ಎಂದ ಅವರು, ಇಂದಿನ ಯುವ ಸಮುದಾಯ ಆತ್ಮವಿಶ್ವಾಸ ಉಳಿಸಿಕೊಳ್ಳಬೇಕು. ರಾಣಿ ಚೆನ್ನಭೈರಾದೇವಿ ಓದಿದರೆ ಚೈತನ್ಯ ಹಾಗೂ ಆತ್ಮವಿಶ್ವಾಸ ಹೆಚ್ಚುತ್ತದೆ. ಇತಿಹಾಸ ಓದಿದರೆ ಅಜ್ಜನ ಕಷ್ಟ ಅರ್ಥ ಆಗುತ್ತದೆ. ಜೀವನ ಪ್ರೀತಿಸಬೇಕು. ಆ ಪ್ರೀತಿ ಬೆಳೆಸಿಕೊಳ್ಳಬೇಕು. ಮಹನೀಯರ ಜೀವನ ಅಧ್ಯಯನ ಮಾಡಬೇಕು ಎಂದರು.ಕಾಲೇಜು ಉಪ ಸಮಿತಿ ಅಧ್ಯಕ್ಷ ಎಸ್.ಕೆ. ಭಾಗ್ವತ್ ಮಾತನಾಡಿ, ನಮಗೆ ನಮ್ಮ ನೆಲದ ಸಾಹಸಗಾಥೆ ಚೆನ್ನಭೈರಾದೇವಿ ಕಾದಂಬರಿ ನೀಡಿದೆ ಎಂದರು.
ಸಂಗೀತ ವಿಭಾಗದ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ಭಟ್ಟ ಹಾಗೂ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ. ಟಿ.ಎಸ್. ಹಳೆಮನೆ ಪರಿಚಯಿಸಿದರು. ರಾಘವೇಂದ್ರ ಬೆಟ್ಟಕೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ್ ಶೇಟ್ ನಿರ್ವಹಿಸಿದರು. ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ರಾಘವೇಂದ್ರ ಜಾಜಿಗುಡ್ಡೆ ವಂದಿಸಿದರು.ಕಾರ್ಯದರ್ಶಿ ಗಾಯತ್ರಿ ರಾಘವೇಂದ್ರ ಇತರರು ಇದ್ದರು. ಕಾರ್ಯಕ್ರಮಕ್ಕೆ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ಇತಿಹಾಸ ವಿಭಾಗ ಸಹಕಾರ ನೀಡಿತ್ತು.