ಸಾರಾಂಶ
ಸಿಂಧೂರ ಗಣೇಶನನ್ನು ಛಬ್ಬಿ ಗ್ರಾಮದ ಕಲಾವಿದರೇ ತಯಾರಿಸುತ್ತಾರೆ. ಪೂರ್ವಾಭಿಮುಖವಾಗಿ ಪ್ರತಿಷ್ಠಾಪನೆಯಾಗುವ ಮೂರ್ತಿಯ ಬಲಗೈಯಲ್ಲಿ ಮುರಿದ ದಂತ, ಎಡಗೈಯಲ್ಲಿ ಈಶ್ವರ ಲಿಂಗು ಹಾಗೂ ಉಳಿದೆರಡು ಕೈಗಳಲ್ಲಿ ಆಯುಧ ಹೊಂದಿರುತ್ತದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ:ಹುಬ್ಬಳ್ಳಿಯಿಂದ 17 ಕಿಲೋ ಮೀಟರ್ ದೂರದಲ್ಲಿರುವ ಇಷ್ಟಾರ್ಥ ಸಿದ್ಧಿ ಗಣಪನೇಂದೆ ಪ್ರಖ್ಯಾತಿ ಹೊಂದಿರುವ ''''ಛಬ್ಬಿಯ ವಿಘ್ನೇಶ್ವರನಿ''''ಗೆ ಬರೋಬ್ಬರಿ 198 ವರ್ಷಗಳ ಇತಿಹಾಸವಿದೆ. ಅಂದಿನಿಂದ ಆ ಗ್ರಾಮದ ಕುಲಕರ್ಣಿ ಮನೆತನದವರು (7 ಮನೆಗಳಲ್ಲಿ) ಕೆಂಪು(ಸಿಂಧೂರ) ಗಣೇಶ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರುತ್ತಿದ್ದು, ರಾಜ್ಯದ ವಿವಿಧ ಭಾಗದಿಂದ ಲಕ್ಷಾಂತರ ಭಕ್ತರು ಬರುತ್ತಾರೆ.
ಗ್ರಾಮದ ಕುಲಕರ್ಣಿ ಮನೆತನದ ತಮ್ಮಪ್ಪ ಕುಲಕರ್ಣಿ ಎಂಬುವರಿಗೆ ಸಂತಾನ ಭಾಗ್ಯ ಇರಲಿಲ್ಲ. 1827ರಲ್ಲಿ ಹಳೇ ಹುಬ್ಬಳ್ಳಿಯ ಕೃಷ್ಣೇಂದ್ರಸ್ವಾಮಿ ಮಠದ ಕೃಷ್ಣೇಂದ್ರ ಶ್ರೀಗಳು ಲೋಕಕಲ್ಯಾಣಾರ್ಥ ಪಾದಯಾತ್ರೆ ಕೈಗೊಂಡ ವೇಳೆ ಛಬ್ಬಿ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಆಗ ತಮ್ಮಪ್ಪ, ಸಂತಾನಭಾಗ್ಯವಿಲ್ಲದಿರುವ ವಿಷಯವನ್ನು ಶ್ರೀಗಳಿಗೆ ತಿಳಿಸುತ್ತಾರೆ. ಆಗ ಕೃಷ್ಣೇಂದ್ರ ಶ್ರೀಗಳು ನಿಮ್ಮ ಮನೆಯಲ್ಲಿ ಸಿಂಧೂರ (ಕೆಂಪು) ಬಣ್ಣದ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಲು ತಿಳಿಸುತ್ತಾರೆ. ಪೂಜಿಸಿದ ವರ್ಷವೇ ತಮ್ಮಪ್ಪರಿಗೆ ಪುತ್ರ ಸಂತಾನ ಪ್ರಾಪ್ರಿಯಾಗುತ್ತದೆ. ಅಂದಿನಿಂದ ಇಂದಿನ ವರೆಗೂ ಪ್ರತಿವರ್ಷ ಸಿಂಧೂರ ವರ್ಣದ ಗಣಪನನ್ನು ಪ್ರತಿಷ್ಠಾಪಿಸುತ್ತಾ ಬರಲಾಗುತ್ತಿದೆ.7 ಮನೆಗಳಲ್ಲಿ ಪ್ರತಿಷ್ಠಾಪನೆ:
ಕಾಲಾಂತರದಲ್ಲಿ ಕುಲಕರ್ಣಿ ಮನೆತನದವರು ಬೇರೆ ಬೇರೆಯಾಗುತ್ತಾರೆ. ಮೊದಮೊದಲು ಒಂದೇ ಮನೆಯಲ್ಲಿ ಸಿಂಧೂರ ವರ್ಣದ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ, ಈಗ ಇದೇ ಮನೆತನದವರಾದ ರಾಮಚಂದ್ರ ಅನಂತ ಕುಲಕರ್ಣಿ, ಮೋಹನರಾವ್ ಹನುಮಂತರಾವ್ ಕುಲಕರ್ಣಿ, ವಿನಾಯಕ ಕಾಶಿನಾಥ ಕುಲಕರ್ಣಿ, ನಾರಾಯಣ ರಾಮಚಂದ್ರರಾವ್ ಕುಲಕರ್ಣಿ, ಸೋಮರಾವ್ ಶ್ರೀಪಾದರಾವ್ ಕುಲಕರ್ಣಿ, ವಿಶ್ವನಾಥ ವಾಸುದೇವ ಕುಲಕರ್ಣಿ, ಮಾಲತೇಶ ಶಂಕರ ಕುಲಕರ್ಣಿ ಮನೆಗಳಲ್ಲಿ ಮೂರ್ತಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ.ವೈಶಿಷ್ಟ್ಯತೆಯಿಂದ ಕೂಡಿದ ಗಣಪ:
ಸಿಂಧೂರ ಗಣೇಶನನ್ನು ಛಬ್ಬಿ ಗ್ರಾಮದ ಕಲಾವಿದರೇ ತಯಾರಿಸುತ್ತಾರೆ. ಪೂರ್ವಾಭಿಮುಖವಾಗಿ ಪ್ರತಿಷ್ಠಾಪನೆಯಾಗುವ ಮೂರ್ತಿಯ ಬಲಗೈಯಲ್ಲಿ ಮುರಿದ ದಂತ, ಎಡಗೈಯಲ್ಲಿ ಈಶ್ವರ ಲಿಂಗು ಹಾಗೂ ಉಳಿದೆರಡು ಕೈಗಳಲ್ಲಿ ಆಯುಧ ಹೊಂದಿರುತ್ತದೆ. ಇಂತಹ ಗಣಪತಿಯನ್ನು ಮೈಸೂರು ಹಾಗೂ ಇಂದೂರಿನ ಅರಮನೆಗಳಲ್ಲಿ ಮಾತ್ರ ಕಾಣಬಹುದು.ಮೂರು ದಿನ ಉತ್ಸವ:
ಪ್ರತಿ ವರ್ಷವೂ ಮೂರು ದಿನ ಛಬ್ಬಿ ಗ್ರಾಮದಲ್ಲಿ ಗಣೇಶ ಉತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಈ ವರ್ಷ ಸೆ. 7ರಿಂದ 9ರ ವರೆಗೆ ಆಚರಿಸಲಾಗುತ್ತಿದೆ. ಸೆ. 7ರಂದು ಚಂದ್ರೋದಯದ ಪೂರ್ವದಲ್ಲಿ ಬೃಹತ್ ಮೆರವಣಿಗೆಯ ಮೂಲಕ 7 ಮನೆತನಗಳ ಮೂರ್ತಿಗಳನ್ನು ತಂದು ಪ್ರತಿಷ್ಠಾಪಿಸಲಾಗುತ್ತದೆ. ಅಂದು ರಾತ್ರಿ 8.30 ನಂತರ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸೆ. 9ರಂದು ಮಧ್ಯರಾತ್ರಿ 12ರ ನಂತರ ಅದ್ಧೂರಿ ಮೆರವಣಿಗೆಯೊಂದಿಗೆ ವಿಸರ್ಜನಾ ಕಾರ್ಯಕ್ರಮ ನೆರವೇರಲಿದೆ.ಇಷ್ಟಾರ್ಥ ಸಿದ್ಧ ಗಣಪ:
ಈ ಗಣಪನ ದರ್ಶನ ಮಾಡುವುದರಿಂದ ಇಷ್ಟಾರ್ಥಗಳೆಲ್ಲ ಈಡೇರಲಿದೆ ಎಂಬ ಪ್ರತೀತಿ ಇದೆ. ಇಲ್ಲಿಗೆ ಬರುವ ಭಕ್ತರು ಅಡಕೆ ಅಥವಾ ರುದ್ರಾಕ್ಷಿ ಒಯ್ದು ಪೂಜೆ ಮಾಡಿಸಿಕೊಂಡು ಬರುತ್ತಾರೆ. ಇಂತಹ ಕಟ್ಟಳೆಗಳು ಇಲ್ಲದಿದ್ದರೂ ಕೆಲವು ಪದ್ಧತಿ ಜನರೇ ರೂಪಿಸಿಕೊಂಡಿದ್ದಾರೆ.ದರ್ಶನಕ್ಕೆ ಆಗಮಿಸುವ ಲಕ್ಷಾಂತರ ಭಕ್ತರು:
3 ದಿನ ನಡೆಯುವ ಉತ್ಸವದಲ್ಲಿ ಲಕ್ಷಾಂತರ ಭಕ್ತರು ಗ್ರಾಮಕ್ಕೆ ಭೇಟಿ ನೀಡುವುದು ವಿಶೇಷ. ಧಾರವಾಡ, ಬೆಂಗಳೂರು, ಬೀದರ, ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ, ಕಲಬುರಗಿ ಸೇರಿದಂತೆ ಹೊರ ರಾಜ್ಯಗಳಿಂದಲೂ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಗ್ರಾಪಂಯಿಂದ ವಾಹನಗಳಿಗೆ ಪಾರ್ಕಿಂಗ್, ಕುಡಿಯುವ ನೀರು, ಸ್ವಚ್ಛತೆ, ಪೊಲೀಸ್ ಬಂದೋಬಸ್ತ್ ಹಾಗೂ ಉತ್ಸವದ ಇತರ ವ್ಯವಸ್ಥೆಗಳನ್ನು ಮಾಡುತ್ತದೆ. ಸಾರಿಗೆ ಸಂಸ್ಥೆಯಿಂದಲೂ ಛಬ್ಬಿ ಗ್ರಾಮಕ್ಕೆ ವಿಶೇಷ ಬಸ್ ವ್ಯವಸ್ಥೆ ಮಾಡಲಾಗುತ್ತದೆ.6 ತಲೆಮಾರುಗಳಿಂದ ನಮ್ಮ ಮನೆಯಲ್ಲಿ ಸಿಂಧೂರ ಗಣಪತಿ ಪ್ರತಿಷ್ಠಾಪಿಸಿಕೊಂಡು ಬರಲಾಗುತ್ತಿದೆ. ಹಲವು ಭಕ್ತರು ಇಲ್ಲಿಗೆ ಆಗಮಿಸಿ ಇಷ್ಟಾರ್ಥ ಸಿದ್ಧಿಗಾಗಿ ಅಡಕೆ, ರುದ್ರಾಕ್ಷಿ ತೆಗೆದುಕೊಂಡು ಹೋಗಿ ಪೂಜಿಸುತ್ತಾರೆ. ಇವರ ಇಷ್ಟಾರ್ಥಗಳು ಈಡೇರಿವೆ ಎಂದು ವಿನಾಯಕ ಕುಲಕರ್ಣಿ ಹೇಳಿದರು.