ಸಾರಾಂಶ
ಉಡುಪಿ : ಉಡುಪಿಯೂ ಸೇರಿದಂತೆ ರಾಜ್ಯದ 16 ಜಿಲ್ಲೆಗಳಲ್ಲಿ ನೂತನವಾಗಿ ಆರಂಭಿಸಲಾಗಿರುವ ಕ್ಯಾನ್ಸರ್ ರೋಗಿಗಳಿಗೆ ಉಚಿತವಾಗಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಡೇ ಕೇರ್ ಕಿಮೋ ಥೆರಪಿ ಕೇಂದ್ರಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಶುಕ್ರವಾರ ಮೈಸೂರಿನಿಂದ ವರ್ಚುವಲ್ ಆಗಿ ಉದ್ಘಾಟಿಸಿದರು.
ಈ ಕಾರ್ಯಕ್ರಮವನ್ನು ಉಡುಪಿಯ ಅಜ್ಜರಕಾಡುನಲ್ಲಿರುವ ಜಿಲ್ಲಾಸ್ಪತ್ರೆಯಲ್ಲಿ ವರ್ಚುವಲ್ ಮೂಲಕ ವೀಕ್ಷಿಸಲಾಯಿತು, ಉಡುಪಿ ಜಿಲ್ಲಾಸ್ಪತ್ರೆಯ ಕಿಮೋ ಥೇರಪಿ ಕೇಂದ್ರವನ್ನು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಉದ್ಘಾಟಿಸಿದರು.
ಈ ಸಂದರ್ಭ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಮಾತನಾಡಿ, ಬಡ ರೋಗಿಗಳಿಗೆ ನೆರವಾಗುವ ಉದ್ದೇಶದಿಂದ ಸರ್ಕಾರದ ವತಿಯಿಂದ ಡೇ ಕೇರ್ ಕಿಮೋ ಥೆರಪಿ ಕೇಂದ್ರ ಆರಂಭಿಸಲಾಗಿದೆ. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಸರ್ಜಿಕಲ್ ಆಂಕೋಲಜಿ ಶಸ್ತ್ರಚಿಕಿತ್ಸಕರು ಇದ್ದು, ಅವರು ಈಗಾಗಲೇ ಹಲವು ರೋಗಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಕಿಮೋ ಥೆರಪಿ ಮಾಡಲು ಈಗ ಈ ಕೇಂದ್ರದಿಂದ ಅನುಕೂಲವಾಗಲಿದೆ. ಅದಕ್ಕೆ ಬೇಕಾದ ಎಲ್ಲಾ ಉಪಕರಣಗಳನ್ನು ಸರ್ಕಾರ ಒದಗಿಸಿದೆ ಎಂದು ತಿಳಿಸಿದರು.ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಚ್.ಅಶೋಕ್, ವೈದ್ಯಾಧಿಕಾರಿಗಳಾದ ಡಾ, ನಾಗರತ್ನಾ, ಡಾ.ವಾಸುದೇವ್, ಡಾ. ವೆಂಕಟೇಶ್, ಡಾ. ಸುಜಿತ್ ಮುಂತಾದವರು ಇದ್ದರು.