ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿಲುವು ಪ್ರಕಟಿಸಿದ್ದಾರೆ.ನಗರದ ಹೊರವಲಯದ ಮೇರಿಹಿಲ್‌ನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಕ್ಕೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ನಾನು ಹಣಕಾಸು ಸಚಿವನಾಗಿದ್ದಾಗಲೇ ಪ್ರತಿ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜು ಮತ್ತು ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆಯ ತೀರ್ಮಾನ ಮಾಡಿದ್ದೆ. ಆದರೆ ಇಂದಿಗೂ ದ.ಕ., ಉಡುಪಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮಾಡಲು ಆಗಿಲ್ಲ. ಪ್ರತಿ ಜಿಲ್ಲೆಯಲ್ಲೂ ಸರ್ಕಾರಿ ಮೆಡಿಕಲ್ ಕಾಲೇಜು ಆಗಬೇಕು. ಇದು ಸಾಧ್ಯವಾದರೆ ಮಾತ್ರ ಬಡವರು, ಹಳ್ಳಿಗಾಡಿನ ಮಕ್ಕಳು ಕೂಡ ವೈದ್ಯರಾಗಬಹುದು. ಬಡತನ ಗೊತ್ತಿರುವವರಿಗೆ ಮಾತ್ರ ಬಡವರ ಕಷ್ಟಗಳಿಗೆ ಸ್ಪಂದಿಸಲು, ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಹೇಳಿದರು.ಉಚಿತ ಚಿಕಿತ್ಸೆ:
ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಏಷ್ಯಾ ಖಂಡದಲ್ಲೇ ಅತಿದೊಡ್ಡ ಆರೋಗ್ಯ ವಿವಿ ಎನ್ನುವ ಹೆಗ್ಗಳಿಕೆಯಿದ್ದು, ಬಡವರ ಪರ ಕೆಲಸ ಮಾಡಲಿ ಎಂದು ಆಶಿಸಿದ ಸಿಎಂ, ಸರ್ಕಾರ, ವಿಶ್ವವಿದ್ಯಾನಿಲಯಗಳು, ಆರೋಗ್ಯ ಇಲಾಖೆ ದುರ್ಬಲ ವರ್ಗಗಳಿಗಾಗಿ ಇರೋದು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆ, ನೆಫ್ರಾಲಜಿ ಇನ್ಸ್ಟಿಟ್ಯೂಟ್‌ನಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು ಹಾಗೂ ಎಪಿಎಲ್ ಕಾರ್ಡ್‌ದಾರರಿಗೆ ಅವರ ಜೀವನ ಮಟ್ಟಕ್ಕೆ ತಕ್ಕಂತೆ ಬಿಲ್ ಹೊಂದಾಣಿಕೆ ಮಾಡುವಂತೆ ಸೂಚನೆ ನೀಡಿದ್ದಾಗಿ ಹೇಳಿದರು.ವೈದ್ಯರಿಗೆ ಸಿಎಂ ಪಾಠ:
ಈ ಸಂದರ್ಭ ವೈದ್ಯರು ಮತ್ತು ವೈದ್ಯಕೀಯ ವಿದ್ಯಾರ್ಥಿಗಳಿಗೆ ವೈದ್ಯ ವೃತ್ತಿಯ ಪಾಠ ಮಾಡಿದ ಸಿದ್ದರಾಮಯ್ಯ, ಶ್ರೀಮಂತರು ದುಬಾರಿ ಹಣ ನೀಡಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಬಡವರು ಮತ್ತು ಹಳ್ಳಿಗಾಡಿನ ಜನರ ಆರೋಗ್ಯ ರಕ್ಷಣೆ ಸರ್ಕಾರಿ ಆಸ್ಪತ್ರೆ ವೈದ್ಯರ ಜವಾಬ್ದಾರಿ. ವೈದ್ಯೋ ನಾರಾಯಣೋ ಹರಿಃ ಎಂದು ಹೇಳುವ ಕಾಲವೊಂದಿತ್ತು. ಈಗ ಜನಪರವಾಗಿರುವ ಒಳ್ಳೆಯ ವೈದ್ಯರಿಗೆ ಮಾತ್ರ ಈ ಮಾತನ್ನು ಹೇಳುತ್ತಾರೆ. ಒಳ್ಳೆ ವೈದ್ಯರು ಇರುವಂತೆ ಕೆಟ್ಟ ವೈದ್ಯರೂ ಇರುತ್ತಾರೆ. ಆದರೆ ಬಡವರ ಮೇಲೆ ಕಾಳಜಿ ವಹಿಸಿ ಅವರಿಗೆ ಆರೋಗ್ಯ ಸೇವೆ ನೀಡುವುದು ಮುಖ್ಯ. ಇದು ಸಾಧ್ಯವಾದರೆ ಸರ್ಕಾರಿ ಆಸ್ಪತ್ರೆಗಳನ್ನು ಮಾಡಿದ್ದು ಸಾರ್ಥಕ ಆಗುತ್ತದೆ. ಸರ್ಕಾರಿ ಆಸ್ಪತ್ರೆಗಳು ಹೆಚ್ಚು ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ನಾನು ರಕ್ತನಾಳ ಬ್ಲಾಕ್ ಆದಾಗ ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದೆ. ಕೊರೋನಾ ಬಂದಾಗಲೂ ದಾಖಲಾದದ್ದು ಮಣಿಪಾಲ್ ಆಸ್ಪತ್ರೆಗೆ. ಸರ್ಕಾರಿ ಆಸ್ಪತ್ರೆಗಳಿಗೆ ಎಲ್ಲ ವರ್ಗದ ಜನರು ಬರುವ ರೀತಿ ವ್ಯವಸ್ಥಿತ ಸೇವೆ ನೀಡಿದಾಗ ಮಾತ್ರ ಅವು ಸಮಾಜಮುಖಿಯಾಗಿವೆ ಎನ್ನಬಹುದು. ಎಷ್ಟು ಆಸ್ಪತ್ರೆಗಳಿವೆ ಅನ್ನೋದು ಮುಖ್ಯವಲ್ಲ, ಆಸ್ಪತ್ರೆಗಳು ಎಷ್ಟು ಜನಪರವಾಗಿವೆ ಎನ್ನುವುದು ಮುಖ್ಯ. ವೈದ್ಯರಾದವರು ಈ ಎಲ್ಲ ಸೂಕ್ಷ್ಮತೆಗಳನ್ನು ಅರಿತುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.
ಮಂಗಳೂರಿನಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿವಿಯ ಪ್ರಾದೇಶಿಕ ಕೇಂದ್ರವನ್ನು ಕಳೆದ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದೆ. ಅದರಂತೆ ಈಗ ಶಂಕುಸ್ಥಾಪನೆ ನೆರವೇರಿಸಿದ್ದೇನೆ. ಇನ್ನೂ ಕೆಲವು ಕಡೆಗಳಲ್ಲಿ ಪ್ರಾದೇಶಿಕ ಕೇಂದ್ರಗಳ ಸ್ಥಾಪನೆ ಆಗಲಿದೆ. ಇದರಿಂದ ವಿದ್ಯಾರ್ಥಿಗಳು, ಪೋಷಕರಿಗೆ ಪ್ರತಿಯೊಂದಕ್ಕೂ ವಿವಿಯ ಮುಖ್ಯ ಕಚೇರಿಯನ್ನು ಅವಲಂಬಿಸುವುದು ತಪ್ಪಲಿದೆ ಎಂದು ಸಿಎಂ ಹೇಳಿದರು.ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ಮೆಡಿಕಲ್ ಕಾಲೇಜುಗಳಿರುವುದು ಕರ್ನಾಟಕ ಮತ್ತು ತಮಿಳುನಾಡಿನಲ್ಲಿ. ರಾಜ್ಯದ ವೈದ್ಯ ವಿದ್ಯಾರ್ಥಿಗಳಿಗೆ ಪ್ಲೇಸ್‌ಮೆಂಟ್ ನೀಡಲು ಸರ್ಕಾರ ಬದ್ಧವಾಗಿದೆ ಎಂದರು.
ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಮಾತನಾಡಿ, ದೇಶದ ಯುವ ಜನಾಂಗದ ಕಾರಣದಿಂದ ಭಾರತವು ವಿಶ್ವ ಮಟ್ಟದಲ್ಲಿ ಗೌರವಕ್ಕೆ ಪಾತ್ರವಾಗಿದೆ. ಕೇವಲ ಬುದ್ಧಿಶಕ್ತಿ ಮಾತ್ರ ಇದ್ದರೆ ಸಾಲದು, ಮಾನವೀಯತೆ, ಸಹೋದರತೆಯ ಭಾವ ಕೂಡ ಇದ್ದರೆ ಮಾತ್ರ ದೇಶದ ಭವಿಷ್ಯವನ್ನು ಕಟ್ಟಬಹುದು ಎಂದು ಕಿವಿಮಾತು ಹೇಳಿದರು.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಶಾಸಕ ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಮೇಯರ್ ಮನೋಜ್ ಕುಮಾರ್, ವೈದ್ಯಕೀಯ ಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ. ಅತೀಕ್, ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿ ಡಾ.ಎಂ.ಕೆ. ರಮೇಶ್, ರಿಜಿಸ್ಟ್ರಾರ್ ಪಿ.ಆರ್. ಶಿವಪ್ರಸಾದ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇದ್ದರು.