ಜಿಲ್ಲೆಯ ಮಧುಗಿರಿಯಲ್ಲಿ ಏಪ್ರಿಲ್ ೩ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುವ ಕಾರ್ಯಕ್ರಮಕ್ಕೆ ಉದ್ಘಾಟನೆ/ಶಂಕುಸ್ಥಾಪನೆ ಹಾಗೂ ಘೋಷಣೆಗೆ ಸಂಬಂಧಿಸಿದ ಕಾರ್ಯಗಳನ್ನು ಅಂತಿಮಗೊಳಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಅಶ್ವಿಜ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ, ತುಮಕೂರುಜಿಲ್ಲೆಯ ಮಧುಗಿರಿಯಲ್ಲಿ ಏಪ್ರಿಲ್ ೩ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುವ ಕಾರ್ಯಕ್ರಮಕ್ಕೆ ಉದ್ಘಾಟನೆ/ಶಂಕುಸ್ಥಾಪನೆ ಹಾಗೂ ಘೋಷಣೆಗೆ ಸಂಬಂಧಿಸಿದ ಕಾರ್ಯಗಳನ್ನು ಅಂತಿಮಗೊಳಿಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ವಿ.ಅಶ್ವಿಜ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾ ಪಂಚಾಯತಿಯಲ್ಲಿ ವಿವಿಧ ಹಂತದ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ ಅವರು, ಈಗಾಗಲೇ ಕಾರ್ಯಕ್ರಮದ ವೇದಿಕೆಯ ಜಾಗ, ಇನ್ನಿತರೆ ಪೂರ್ವ ಸಿದ್ಧತೆಗಳ ರೂಪು-ರೇಷೆಗಳನ್ನು ಮಾಡಲಾಗಿದೆ. ಅದರಂತೆ ಮುಖ್ಯಮಂತ್ರಿಯವರು ಉದ್ಘಾಟಿಸಲಿರುವ ಹಾಗೂ ಶಂಕುಸ್ಥಾಪನೆ ನೆರವೇರಿಸಲಿರುವ ಫಲಕಗಳನ್ನು ಶಿಷ್ಟಾಚಾರದಂತೆ ಸಿದ್ಧಪಡಿಸಿ ಸಂಬಂಧಿಸಿದ ಫಲಕದ ಪ್ರತಿಯನ್ನು ಶೀಘ್ರವೇ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ತಿಳಿಸಿದರು. ಕಾರ್ಯಕ್ರಮ ನಡೆಯಲಿರುವ ಮಧುಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 39 ಗ್ರಾಮ ಪಂಚಾಯತಿಗಳಿಂದ ಫಲಾನುಭವಿಗಳನ್ನು ಕಾರ್ಯಕ್ರಮಕ್ಕೆ ಕರೆತರಲು ವಾಹನ ವ್ಯವಸ್ಥೆ ಇತ್ಯಾದಿ ಸಿದ್ಧತೆಗಳನ್ನು ನಿಯೋಜಿತ ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸಿ ಮಾಹಿತಿಯನ್ನು ಒದಗಿಸಬೇಕು. ಅಲ್ಲದೆ, ಕಾರ್ಯಕ್ರಮದಲ್ಲಿ ಭಾಗವಹಿಸುವ ಫಲಾನುಭವಿಗಳಿಗೆ ಹಾಗೂ ಸಾರ್ವಜನಿಕರಿಗೆ ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ ಇತ್ಯಾದಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಅವರು ಸೂಚಿಸಿದರು. ಏಪ್ರಿಲ್ 3 ರಂದು ಮುಖ್ಯಮಂತ್ರಿಗಳು ಹೆಲಿಕಾಪ್ಟರ್ ಮೂಲಕ ಆಗಮಿಸಲಿದ್ದು, ಸೂಕ್ತ ಹೆಲಿಪ್ಯಾಡ್ ವ್ಯವಸ್ಥೆಯನ್ನು ಹಾಗೂ ವೇದಿಕೆ ನಿರ್ಮಾಣ ಇತ್ಯಾದಿ ಜವಾಬ್ದಾರಿಗಳನ್ನು ವಹಿಸಿಕೊಂಡಿರುವ ಲೋಕೋಪಯೋಗಿ ಇಲಾಖೆ ಸಂಬಂಧಿಸಿದ ಕಾಮಗಾರಿಗಳಿಗೆ ದೃಢೀಕರಣ ನೀಡಬೇಕು ಎಂದರು. ಅಲ್ಲದೆ, ವಿವಿಧ ಪ್ರಮುಖ ಇಲಾಖೆಗಳಲ್ಲಿ ಆಗಿರುವ ಪ್ರಮುಖ ಅಭಿವೃದ್ಧಿ ಯೋಜನೆಗಳ ಮಾಹಿತಿಯನ್ನು ಮುಖ್ಯಮಂತ್ರಿಯವರ ಭಾಷಣದ ಕರಡು ತಯಾರಿಸಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಯವರಿಗೆ ಇದೇ ೨೩ರೊಳಗೆ ಒದಗಿಸುವಂತೆಯೂ ಅವರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾದ ಸಂಜೀವಪ್ಪ, ಈಶ್ವರಪ್ಪ, ಯೋಜನಾಧಿಕಾರಿ ಸಣ್ಣಮಸಿಯಪ್ಪ ಸೇರಿದಂತೆ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಅಲ್ಲದೆ, ಮಧುಗಿರಿ ಕ್ಷೇತ್ರ ವ್ಯಾಪ್ತಿಯ ಇಲಾಖೆಗಳ ಅಧಿಕಾರಿಗಳು ವಿಡಿಯೋ ಸಂವಾದದ ಮೂಲಕ ಸಭೆಯಲ್ಲಿ ಭಾಗವಹಿಸಿದ್ದರು.