ಗಾಯಗೊಂಡ ಮಗುವನ್ನು ರಾಹಾ ಗಾಡಿವಾಲೆ ಎಂದು ಗುರುತಿಸಲಾಗಿದೆ. ಮನೆಯಿಂದ ಅಂಗಡಿಗೆ ತೆರಳುತ್ತಿದ್ದ ಮಗುವಿನ ಮೇಲೆ ಏಕಾಏಕಿ ಬೀದಿನಾಯಿ ದಾಳಿ ನಡೆಸಿ ತಲೆಗೆ ಕಚ್ಚಿದೆ.
ಲಕ್ಷ್ಮೇಶ್ವರ: ಬೀದಿ ನಾಯಿ ದಾಳಿ ನಡೆಸಿದ ಪರಿಣಾಮ ಎರಡೂವರೆ ವರ್ಷದ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಂಗಳವಾರ ಪಟ್ಟಣದ ವಾರ್ಡ್ ನಂ. 5ರ ಮಕಾನ ಓಣಿಯಲ್ಲಿ ನಡೆದಿದೆ.
ಗಾಯಗೊಂಡ ಮಗುವನ್ನು ರಾಹಾ ಗಾಡಿವಾಲೆ ಎಂದು ಗುರುತಿಸಲಾಗಿದೆ. ಮನೆಯಿಂದ ಅಂಗಡಿಗೆ ತೆರಳುತ್ತಿದ್ದ ಮಗುವಿನ ಮೇಲೆ ಏಕಾಏಕಿ ಬೀದಿನಾಯಿ ದಾಳಿ ನಡೆಸಿ ತಲೆಗೆ ಕಚ್ಚಿದೆ. ದಾಳಿಯಿಂದ ಮಗು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯರು ತಕ್ಷಣ ಧಾವಿಸಿ ಮಗುವನ್ನು ನಾಯಿಯಿಂದ ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಗುವಿನ ಆರೋಗ್ಯದ ಕುರಿತು ವೈದ್ಯರು ನಿಗಾ ವಹಿಸಿದ್ದಾರೆ.ಕಳೆದ ಕೆಲ ದಿನಗಳ ಹಿಂದೆಯೂ ಇದೇ ರೀತಿಯಾಗಿ ಮತ್ತೊಂದು ಮಗುವಿನ ಮೇಲೆ ಬೀದಿನಾಯಿಗಳು ದಾಳಿ ನಡೆಸಿದ್ದವು. ಆದರೂ ಪಟ್ಟಣದಲ್ಲಿ ಹೆಚ್ಚುತ್ತಿರುವ ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಿಸಲು ಪುರಸಭೆ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕೃಷಿಹೊಂಡದಲ್ಲಿ ಅಪರಿಚಿತ ಮಹಿಳೆ ಶವ ಪತ್ತೆರೋಣ: ತಾಲೂಕಿನ ಮಲ್ಲಾಪುರ ಗ್ರಾಮದ ಅಂದಪ್ಪ ಭೀಮಪ್ಪ ಕೌಜಗೇರಿ ಎಂಬವರ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಮಂಗಳವಾರ ಅಪರಿಚಿತ ಮಹಿಳೆಯೊಬ್ಬರ ಶವ ಪತ್ತೆಯಾಗಿದೆ.ಕೃಷಿ ಹೊಂಡದಲ್ಲಿ ಅಪರಿಚಿತ ಮಹಿಳೆಯ ಮೃತದೇಹ ಇರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು. ಅಂದಾಜು 25ರಿಂದ 28 ವರ್ಷದ ಮಹಿಳೆಯಾಗಿದ್ದು, ಕೊರಳಲ್ಲಿ ತಾಳಿ ಮತ್ತು ಕಲಾವತಿ ಮಾತೆಯ ಫೋಟೋ ಇರುವ ಲಾಕೆಟ್ ಇದೆ. 5 ಅಡಿ ಎತ್ತರ, ಕಪ್ಪು ಮೈಬಣ್ಣ, ದುಂಡು ಮುಖ, ಕಾಲಲ್ಲಿ ಬೆಳ್ಳಿ ಚೈನ್, ಕಾಲುಂಗರವಿದೆ. ಈ ಬಗ್ಗೆ ಯಾರಿಗಾದರೂ ಗುರುತು ಸಿಕ್ಕಲ್ಲಿ ಸಮೀಪದ ಪೊಲೀಸ್ ಠಾಣೆ ಅಥವಾ ರೋಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಸಿಪಿಐ ವಿಜಯಕುಮಾರ ತಿಳಿಸಿದ್ದಾರೆ. ರೋಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.