ಜಿಟಿ ಜಿಟಿ ಮಳೆಯಿಂದ ಮಲೆನಾಡಂತಾದ ಚಿಕ್ಕಬಳ್ಳಾಪುರ

| Published : Jul 24 2024, 12:17 AM IST

ಸಾರಾಂಶ

ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದುದರಿಂದ ಶಾಲೆಗೆ ಹೋಗುವ ಮಕ್ಕಳಿಗೆ, ಕೆಲಸಕ್ಕೆ ಹೋಗುವ ಉದ್ಯೋಗಿಗಳಿಗೆ ಸರ್ಕಾರಿ ನೌಕರರಿಗೆ ಸ್ವಲ್ಪ ತೊಂದರೆಯಾಗುತ್ತಿದೆ. ದ್ವಿಚಕ್ರವಾಹನಗಳಲ್ಲಿ ಸಾಗುತ್ತಿದ್ದವರು ಅನಿವಾರ್ಯವಾಗಿ ಆಟೋಗಳನ್ನು ಅವಲಂಬಿಸಬೇಕಾಗಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಬರದನಾಡು ಚಿಕ್ಕಬಳ್ಳಾಪುರ ಮಲೆನಾಡಿನಂತಾಗಿದೆ. ತಾಲೂಕಿನಾದ್ಯಂತ ಕಳೆದ 15ರ ಸೋಮವಾರ ಬೆಳಿಗ್ಗೆಯಿಂದ ಆರಂಭವಾಗಿರುವ ಮಳೆ ಬಿಟ್ಟು ಬಿಟ್ಟು ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದೊಂದು ವಾರದಿಂದ ನಗರ ಮತ್ತು ತಾಲೂಕಿನ ವಿವಿಧ ಭಾಗಗಳಲ್ಲಿ ಬೆಳಿಗ್ಗೆಯಿಂದ ತುಂತುರು ಮಳೆಯಾಗುತ್ತಿದೆ‌. ಇದರಿಂದಾಗಿ ಶಾಲೆ, ಕಾಲೇಜು ತೆರಳುವ ವಿದ್ಯಾರ್ಥಿಗಳು, ನೌಕರಿಗೆ ತೆರಳುವ ಉದ್ಯೋಗಿಗಳು ಛತ್ರಿಯನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಎದುರಾಗುತ್ತಿದೆ.ಶೀತ ಹವೆ, ಜಿನುಗು ಮಳೆ

ಈ ಮಳೆಯಿಂದ ಮಲೆನಾಡು, ಕರಾವಳಿಯ ವಾತಾವರಣ ತಾಲೂಕಿನಲ್ಲಿ ಕಂಡು ಬರುತ್ತಿದೆ. ಸಮಯ 10 ಗಂಟೆಯಾದರೂ ಶೀತ ಹವೆ ಜನರನ್ನು ಕಾಡುತ್ತಿದೆ. ಮುಂಜಾನೆ 5.30ಗೆ ಆರಂಭವಾಗುವ ಜಿಟಿ ಜಿಟಿ ಮಳೆ ಮುಂದುವರಿದು, ಸ್ವಲ್ಪ ಹೊತ್ತು ಜೋರಾಗಿ ಮಳೆ ಬಂದರೆ, ಬಿಡುವಿನ ಸಂದರ್ಭದಲ್ಲಿ ಸೋನೆ ಮಳೆಯ ರೀತಿಯಲ್ಲಿ ಹನಿಯುತ್ತಲೇ ಇರುತ್ತದೆ.

ಬೆಳಿಗ್ಗೆಯಿಂದಲೇ ಮಳೆ ಸುರಿಯುತ್ತಿದ್ದುದರಿಂದ ಶಾಲೆಗೆ ಹೋಗುವ ಮಕ್ಕಳಿಗೆ, ಕೆಲಸಕ್ಕೆ ಹೋಗುವ ಉದ್ಯೋಗಿಗಳಿಗೆ ಸರ್ಕಾರಿ ನೌಕರರಿಗೆ ಸ್ವಲ್ಪ ತೊಂದರೆಯಾಗುತ್ತಿದೆ. ದ್ವಿಚಕ್ರವಾಹನಗಳಲ್ಲಿ ಸಾಗುತ್ತಿದ್ದವರು ಅನಿವಾರ್ಯವಾಗಿ ಆಟೋಗಳನ್ನು ಅವಲಂಬಿಸಬೇಕಾಗಿದೆ. ವಾರದಿಂದ ನಿರಂತರವಾಗಿ ಬಿಟ್ಟು ಬಿಟ್ಟು ಬೀಳುತ್ತಿರುವ ಮಳೆಯಿಂದಾಗಿ ನಗರ ಮತ್ತು ಗ್ರಾಮಾಂತರದಲ್ಲಿ ಜನಸಾಮಾನ್ಯರ ಓಡಾಟಕ್ಕೂ ತೊಂದರೆಯಾಗುತ್ತಿದೆ.ಬೆಚ್ಚನೆ ಉಡುಗೆ, ಛತ್ರಿ ಬಳಕೆ

ಮಳೆ ಬೀಳು ವ ಲಕ್ಷಣ ಕಂಡು ಬರುತ್ತಿದ್ದುದರಿಂದ ಜನರು ಛತ್ರಿ ಹಿಡಿದುಕೊಂಡು ಓಡಾಡಿದರು. ಚಳಿಯ ವಾತಾವರಣ ಇದ್ದುದರಿಂದ ಸ್ವೆಟರ್‌, ಜಾಕೆಟ್‌ಗಳನ್ನೂ ಧರಿಸಿದ್ದು ಕಂಡು ಬಂತು. ಕಳೆದೊಂದು ವಾರದಿಂದ ನಿರಂತರ ಮಳೆಯಿಂದಾಗಿ ಪರಿಸರದಲ್ಲಿನ ತಾಪಮಾನದ ಪ್ರಮಾಣವು ತೀವ್ರ ಇಳಿಕೆ ಆಗಿದೆ. ಎರಡು ವಾರದ ಹಿಂದಷ್ಟೇ ಗರಿಷ್ಠ 33 ಡಿಗ್ರಿ ಸೆಲ್ಸಿಯಸ್‌ನಷ್ಟು ಉಷ್ಣಾಂಶ ದಾಖಲಿಸಿದ್ದ ಚಿಕ್ಕಬಳ್ಳಾಪುರ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್‌ಗೆ, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್‌ಗೆ ಇಳಿಕೆ ಆಗಿತ್ತು.

ಬೆಳಗ್ಗೆಯಿಂದ ಸಂಜೆವರೆಗೂ ಮೋಡ ಕವಿದ ವಾತಾವರಣ ಇರುತ್ತಿದ್ದು, ಇದ್ದಕ್ಕಿದಂತೆ ಮಳೆ ಕೊಂಚ ಕಾಲದ ಬಿಡುವಿನ ನಂತರ ಮಳೆಬೀಳುತ್ತಿದ್ದು. ಆಗೊಮ್ಮೆ, ಈಗೊಮ್ಮೆ ಜೋರು ಮಳೆ ಸುರಿದು . ಮಲೆನಾಡಿನಂತೆ ತಾಲೂಕು ಗೋಚರವಾಗುತ್ತಿದೆ. ದಿನವಿಡೀ ಮೋಡ ಕವಿದ ವಾತಾವರಣ ಮತ್ತು ಬಿಟ್ಟು ಬಿಟ್ಟು ಬೀಳುವ ಮಳೆಯಿಂದ ಮತ್ತು ಬಿತ್ತದ ಬೀಜಗಳು ಮೊಳಕೆಯೊಡೆದು ಪೈರು ಬೆಳೆದಿರುವುದರಿಂದ ಎತ್ತ ಕಣ್ಣಾಯಿಸಿದರೂ ಭೂತಾಯಿ ಹಸಿರು ಸೀರೆ ಉಟ್ಟಂತೆ ಕಾಣುತ್ತಿದ್ದು, ರೈತರು ಸಂಭ್ರಮಪಡುತ್ತಿದ್ದಾರೆ.