೨೫ ವರ್ಷಗಳ ಬಳಿಕ ಕೋಡಿ ಬಿದ್ದ ಚಿಕ್ಕಕೆರೆ

| Published : Oct 20 2024, 01:53 AM IST

ಸಾರಾಂಶ

೨೫ ವರ್ಷಗಳ ನಂತರ ನಾಯಕನಹಟ್ಟಿ ಚಿಕ್ಕಕೆರೆ ಕೋಡಿ ಬಿದ್ದಿದ್ದು, ಇಲ್ಲಿನ ಜನರಿಗೆ ಸಂಸತ ಮೂಡಿಸಿದೆ.

ಮಲ್ಲೇಶ್ ನಾಯಕನಹಟ್ಟಿ

ಕನ್ನಡಪ್ರಭ ವಾರ್ತೆ ನಾಯಕನಹಟ್ಟಿ೨೫ ವರ್ಷಗಳ ನಂತರ ನಾಯಕನಹಟ್ಟಿ ಚಿಕ್ಕಕೆರೆ ಕೋಡಿ ಬಿದ್ದಿದ್ದು, ಇಲ್ಲಿನ ಜನರಿಗೆ ಸಂಸತ ಮೂಡಿಸಿದೆ.

ಇಲ್ಲಿನ ಜೋಡಿಕೆರೆಗಳ (ಹಿರೇಕರೆ-ಚಿಕ್ಕಕೆರೆ) ಮತ್ತು ಹಟ್ಟಿ ಜನರ ಮಧ್ಯೆ ಇರುವ ಅವಿನಾಭಾವವೇ ಅಂತಹದ್ದು. ಅದರಲ್ಲೂ ಚಿಕ್ಕಕೆರೆ ಕೋಡಿ ಬಿದ್ದರಂತೂ ಇಲ್ಲಿನ ಜನರು ಹುಚ್ಚೆದ್ದು ಕುಣಿಯುತ್ತಾರೆ. ಸಂಭ್ರಮಿಸುತ್ತಾರೆ. ಕೆರೆಗಳ ಜನಕ ಶ್ರೀಗುರು ತಿಪ್ಪೇರುದ್ರಸ್ವಾಮಿ ಹಟ್ಟಿ ಜನರ ನಾಡಿಮಿಡಿತದೊಳಗೆ ಜೋಡಿಕೆರೆಗಳ ಜೀವನಾಡಿ ಮಿಡಿಸಿ ಹೋಗಿದ್ದಾರೆ. ಕಾಯಕ ದೀಕ್ಷೆ ಕೊಟ್ಟು ಮಾಡಿದವನಿಗೆ ನೀಡು ಭಿಕ್ಷೆ ಎಂಬ ಧ್ಯೇಯವಾಕ್ಯ ಅರುಹಿ ಹೋಗಿದ್ದಾರೆ. ಹಾಗಾಗಿ, ಜೋಡಿಕೆರೆಗಳು ಕೋಡಿಬಿದ್ದರೆ ಹಟ್ಟಿಜನರ ಸಂಭ್ರಮ ಮುಗಿಲು ಮುಟ್ಟುತ್ತದೆ.

ಶನಿವಾರ ನಸುಕಿನಲ್ಲಿ ದಕ್ಷಿಣ ದಿಕ್ಕಿನತ್ತ ಇರುವ ಚಿಕ್ಕಕೆರೆಯಲ್ಲಿ ೧೨ ಅಡಿಯಷ್ಟು ನೀರು ಸಂಗ್ರಹಗೊಂಡು ಕೋಡಿ ಹರಿಯುತ್ತಿದ್ದಂತೆ ಹಟ್ಟಿ ಜನರಷ್ಟೇ ಅಲ್ಲ, ಚನ್ನಬಸಯ್ಯನಹಟ್ಟಿ, ಕೊಂಡಯ್ಯನಕಪಿಲೆ, ಮಾದಯ್ಯನಹಟ್ಟಿ, ಜಾಗನೂರಹಟ್ಟಿ, ಜೋಗಿಹಟ್ಟಿ, ಗೌಡೆಗೆರೆ, ಬೋಸೇದೇವರಹಟ್ಟಿ ಗ್ರಾಮಗಳಿಂದ ಜನರ ದಂಡು ಹರಿದಿತ್ತು. ಕೋಡಿ ಸ್ಥಳದಲ್ಲಿ ವಿವಿಧ ಗ್ರಾಮಗಳ ಮುಖಂಡರು ಆಗಮಿಸಿ ಹಟ್ಟಿ ಜನರೊಟ್ಟಿಗೆ ಸೇರಿ ನೂರಾರು ತೆಂಗಿನಕಾಯಿ ಒಡೆದು ಮಕಾಡೆ ಇರುವ ಹೊರಮಠದತ್ತ ಮುಖಮಾಡಿ ಶ ಗುರು ತಿಪ್ಪೇರುದ್ರಸ್ವಾಮಿಗೆ ಭಕ್ತಿಯಿಂದ ನಮಿಸಿಸುತ್ತಿದ್ದ ದೃಶ್ಯ ಕಂಡು ಬಂತು.

೧೯೮೮, ೧೯೯೯ರಲ್ಲಿ ಜೋಡಿಕೆರೆಗಳು ಕೋಡಿ ಒಡೆದಿದ್ದವು. ತದನಂತರ ೨೦೧೦ ಮತ್ತು ೨೦೨೨ರಲ್ಲಿ ಹಿರೇಕೆರೆ ಮಾತ್ರ ಕೋಡಿ ಒಡೆದಿತ್ತು. ೨೦೨೨ರಲ್ಲಿ ಮಳೆ ವರ್ಷದಲ್ಲಿ ೧೦೦೦ ಮಿ.ಮೀ. ಮಳೆ ಸುರಿದರೂ ಚಿಕ್ಕಕೆರೆಯತ್ತ ಹಳ್ಳ ಹರಿದಿರಲಿಲ್ಲ. ಕನಿಷ್ಠ ೧ ಅಡಿಯಷ್ಟು ನೀರು ಕೂಡ ಸಂಗ್ರಹವಾಗಿರಲಿಲ್ಲ. ಕೆರೆಗೆ ನೀರು ತರುವ ಹಳ್ಳಗಳಿಗೆ ಗೌಡಗೆರೆ, ಜೋಗಿಹಟ್ಟಿ, ಮಲ್ಲೋರಹಟ್ಟಿ, ಮಾದಯ್ಯನಹಟ್ಟಿ ಸಮೀಪ ಬೃಹತ್ ಗಾತ್ರದ ಚೆಕ್‌ಡ್ಯಾಂ ನಿರ್ಮಾಣಗೊಂಡ ಮೇಲಂತೂ ಕೆರೆಯಲ್ಲಿ ಎರಡು ದಶಕ ಕಾಲ ಹನಿನೀರು ಸಂಗ್ರಹಗೊಂಡಿರಲಿಲ್ಲ.

ಸುತ್ತಮುತ್ತಲಿನ ಕೆರೆಗಳು ಎರಡು ಮೂರು ವರ್ಷಗಳಿಗೊಮ್ಮೆ ಕೋಡಿ ಒಡೆದಾಗಲೆಲ್ಲ ಚಿಕ್ಕಕೆರೆ ಒಣಗಿ ಬಿರುಕುಬಿಟ್ಟುಕೊಂಡಿರುತ್ತಿತ್ತು. ಇದೇ ಸ್ಥಿತಿ ಎರಡು ದಶಕಗಳ ಕಾಲಮುಂದುವರಿದಿತ್ತು. ಹಾಗಾಗಿ, ಹಟ್ಟಿ ಜನರು ಬೇಸತ್ತಿದ್ದರು. ಈಚೆಗೆ ಯುವಕರು, ಮುಖಂಡರು ಶಾಶ್ವತ ನೀರಾವರಿ ಹೋರಾಟ ಸಮಿತಿ ಕಟ್ಟಿಕೊಂಡು ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಾ ಬಂಂದಿದ್ದಾರೆ. ಭದ್ರಾ ಮೇಲ್ದಂಡೆಯಿಂದ ಕೆರೆಗೆ ನೀರುಹರಿಸಿ ಎಂದು ಈಚೆಗೆ ಜನಪ್ರತಿನಿಧಿಗಳ ಮನೆಗಳ ಮುಂದೆ ತಮಟೆ ಸದ್ದು ಕೂಡ ಮೊಳಗಿಸಿದ್ದರು. ಈಗ ಜೋಡಿ ಕೆರೆಗಳು ಮೈದುಂಬಿಕೊಂಡಿರುವುದು ಇಲ್ಲಿನ ನೀರಾವರಿ ಹೋರಾಟಗಾರರ ಮೊಗದಲ್ಲೂ ನಗು ಮೂಡಿಸಿದೆ.

ನಾಯಕನಹಟ್ಟಿ ಹೋಬಳಿ ಭಾಗದ ಕೃಷಿ ಪ್ರದೇಶಗಳಿಗೆ ಚಿಕ್ಕಕೆರೆ ಅಂತಹ ಅನಿವಾರ್ಯವೂ ಅಲ್ಲ. ಕೃಷಿ ಮತ್ತು ಅಂತರ್ಜಲಕ್ಕೆ ಹಿರೇಕೆರೆಯೇ ಪ್ರಧಾನ ಆಧಾರ. ಹಾಗಂತ ಚಿಕ್ಕಕೆರೆ ಅಸಡ್ಡೆಯೂ ಅಲ್ಲ. ಪಟ್ಟಣಕ್ಕೆ ಅದರಲ್ಲೂ ಕಾಯಕಯೋಗಿ ಗುರುತಿಪ್ಪೇರುದ್ರರ ಸಮಾಧಿಸ್ಥಳ ಹೊರಮಠಕ್ಕೆ ಅಂಟಿಕೊಂಡಿರುವ ಚಿಕ್ಕಕೆರೆ ಖಾಲಿ ಇರುವುದು ಹಟ್ಟಿ ಜನರಷ್ಟೇ ಅಲ್ಲ, ಹೋಬಳಿಯ ಜನರು ಇಷ್ಟಪಡುವುದಿಲ್ಲ. ಅದೊಂದು ರೀತಿಯ ಭಕ್ತಿಯ ಅನುಬಂಧ ಎಂದು ಇಲ್ಲಿನ ಒಳಮಠದ ಪೂಜಾರಿ ರವಿಕುಮಾರ್ ಚಿಕ್ಕಕೆರೆ-ಹಟ್ಟಿ ಜನರ ಸಂಬಂಧವನ್ನು ಅರ್ಥೈಸುತ್ತಾರೆ.

೧೯೯೯ರಲ್ಲೂ ಜೋಡಿಕೆರೆಗಳು ಕೋಡಿ ಒಡೆದಿದ್ದವು. ಆಗ ಚಿಕ್ಕಕೆರೆಯ ಪೂರ್ವ ದಿಕ್ಕಿನಲ್ಲಿ ಇರುವ ಕೋಡಿಯನ್ನು ದಾಟಿ ನಾಯಕನಹಟ್ಟಿ ಪಟ್ಟಣಕ್ಕೆ ಹೋಗಲು ಅಸಾಧ್ಯವಾಗಿತ್ತು. ಈ ನೀರು ರಾಜ್ಯ ಹೆದ್ದಾರಿ-೪೫ ದಾಟಿ ಹೊರಮಠದ ಮುಂಭಾಗದಿಂದ ಚಿಕ್ಕಕೆರೆಯ ಕೋಡಿ ರಾಜಗಾಲುವೆ ಸೇರುತ್ತಿತ್ತು. ಆದರೆ, ಇಂದು ಪೂರ್ವ ದಿಕ್ಕಿನಲ್ಲಿರುವ ಕೆರೆಕೋಡಿ ಕಾಲುವೆಯೇ ಇಲ್ಲದಂತೆ ಗೂಡಂಗಡಿಗಳು ಅಸ್ತಿತ್ವಪಡೆದುಕೊಂಡಿವೆ. ಇಡೀ ಪಟ್ಟಣದ ತ್ಯಾಜ್ಯ ಈ ಕೋಡಿ ಸ್ಥಳದಲ್ಲಿ ಎರಡು ದಶಕಗಳಿಂದಲೂ ಹಾಕಿಕೊಂಡು ಬಂದಿರುವುದರಿಂದ ಇಂದು ಕೋಡಿ ನಾಮಾವಶೇಷಗೊಂಡಿದೆ.

ಹೀಗಾದರೆ ಕೆರೆಗೆ ಏರಿ ಮೇಲೆ ನೀರಿನ ಒತ್ತಡ ಬಿದ್ದು ಏರಿ ಹಾಳಾಗುವ ಸಂಭವ ಹೆಚ್ಚಿದೆ. ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದರೂ, ಕೋಡಿ ಸ್ಥಳ ಸ್ವಚ್ಛಗೊಳಿಸಿಲ್ಲ. ಪಟ್ಟಣ ಪಂಚಾಯಿತಿ ಅಧಿಕಾರಿಗಳೇ ಇದರ ಹೊಣೆಹೊತ್ತು ಸದ ನೀರು ಹೋಗುವಂತೆ ಕೋಡಿಕಾಲುವೆಯ ಮಣ್ಣು ತೆಗಿಸಿದ್ದಾರೆ ಎಂದು ಕಿಸಾನ್ ರಾಷ್ಟ್ರೀಯ ಸಂಘ ಹೋಬಳಿ ಅಧ್ಯಕ್ಷ ಬಿ.ಟಿ.ಪ್ರಕಾಶ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ಸಣ್ಣ ನೀರಾವರಿ ಇಲಾಖೆ ಸಹಾಯಕ ಎಂಜಿನಿಯರ್ ಅಣ್ಣಪ್ಪ ಅವರನ್ನು ಸಂಪರ್ಕಿಸಿದರೂ, ಕರೆ ಸ್ವೀಕರಿಸಲಿಲ್ಲ.

ಚಿಕ್ಕಕೆರೆಯಲ್ಲಿ ೧೨ ಅಡಿ ನೀರು ಸಂಗ್ರಹಹಿರೇಕೆರೆ ೧೮ ಅಡಿಯಷ್ಟು ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ೧೬ ಅಡಿಯಷ್ಟು ನೀರು ಸಂಗ್ರಹಗೊಂಡರೆ ಕೆರೆ ಕೋಡಿ ಪಡೆಯುತ್ತದೆ. ಸದಸ್ಯ ೧೧ ಅಡಿಯಷ್ಟು ನೀರು ಸಂಗ್ರಹ ಇದೆ. ಚಿಕ್ಕಕೆರೆ ಕೋಡಿ ಒಡೆದಿದ್ದು, ೧೨ ಅಡಿಯಷ್ಟು ನೀರಿನ ಸಂಗ್ರಹ ಇದೆ.ಕೆರೆ ಪುನರುಜ್ಜೀವನ; ೩೦ ಲಕ್ಷ ರು. ಅನುದಾನ ದುರ್ಬಳಕೆಸಣ್ಣ ನೀರಾವರಿ ಇಲಾಖೆಯಿಂದ ಈಚೆಗೆ ಡಿಎಂಎಫ್ ಯೋಜನೆಡಿ ಚಿಕ್ಕಕೆರೆ ಪುನರುಜ್ಜೀವನ ಕಾಮಗಾರಿ ನಡೆಸಲಾಗಿದೆ. ಗುತ್ತಿಗೆದಾರ ಪಿ.ದೇವರಾಜ್ ಈ ಕಾಮಗಾರಿ ನಡೆಸಿದ್ದಾರೆ. ಅಂದಾಜು ೫೦ ಲಕ್ಷದ ಕಾಮಗಾರಿ ಯೋಜನೆಯಡಿ ಒಟ್ಟು ೩೪ ಲಕ್ಷ ಅನುದಾನ ಬಳಸಿದ್ದಾರೆ. ಆದರೆ, ದಕ್ಷಿಣ ದಿಕ್ಕಿನಲ್ಲಿರುವ ಕೋಡಿ ಸ್ಥಳದಲ್ಲಿ ೫೦ ಮೀಟರ್ ಸಿಮೆಂಟ್ ಬೆಡ್ ನಿರ್ಮಿಸಲಾಗಿದೆ. ಕೆರೆ ಏರಿಮೇಲೆ ಮಣ್ಣು ಹಾಕಿಸಿ, ಜಾಲಿಗಿಡ ಕೀಳಿಸಿದ್ದಾರೆ. ಇಷ್ಟಕ್ಕೆ ೩ರಿಂದ ೪ ಲಕ್ಷ ಖರ್ಚು ಆಗಿರಬಹುದು. ಆದರೆ, ೩೪ ಲಕ್ಷ ಅನುದಾನ ಲೆಕ್ಕ ತೋರಿಸಿದ್ದಾರೆ. ಅನುದಾನ ದುರ್ಬಳಕೆ ಆಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಗುತ್ತಿಗೆದಾರರು, ಶಾಸಕರು, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳು ಈ ಅನುದಾನ ದುರ್ಬಳಕೆಯಲ್ಲಿ ಶಾಮೀಲಾಗಿದ್ದಾರೆ. ಕೂಡಲೇ ಕಾಮಗಾರಿ ತನಿಖೆಯಾಗಬೇಕು.-ನೇರಲಗುಂಟೆ ತಿಪ್ಪೇಸ್ವಾಮಿ, ಮಾಜಿ ಶಾಸಕ

ದೂರುಗಳು ಬಂದಿವೆ: ಸಂಸದ ಕಾರಜೋಳಡಿಎಂಎಫ್ ಯೋಜನೆಯಡಿ ಚಿಕ್ಕಕೆರೆ ಪುನರುಜ್ಜೀವನ ಕಾಮಗಾರಿಯಲ್ಲಿ ನಡೆದಿರುವ ಹಗರಣ ಕುರಿತು ಸ್ಥಳೀಯ ಜನರಿಂದ ದೂರುಗಳು ಬಂದಿವೆ. ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯಲ್ಲಿ ಡಿಎಂಎಫ್ ಅನುದಾನ ದುರ್ಬಳಕೆ ಬಗ್ಗೆ ಪ್ರಸ್ತಾವಿಸಿ ತನಿಖೆಗೆ ಸೂಚಿಸಲಾಗುವುದು.-ಗೋವಿಂದ ಕಾರಜೋಳ, ಸಂಸದರು (ಫೋಟೋ ೧೯ಎನ್‌ವೈಕೆ೦೫)