ಚಿಕ್ಕಮಗಳೂರು ನಗರಸಭೆಗೆ ಸುಜಾತಾ ಅಧ್ಯಕ್ಷೆ , ಅನು ಉಪಾಧ್ಯಕ್ಷೆ

| Published : Aug 23 2024, 01:01 AM IST

ಚಿಕ್ಕಮಗಳೂರು ನಗರಸಭೆಗೆ ಸುಜಾತಾ ಅಧ್ಯಕ್ಷೆ , ಅನು ಉಪಾಧ್ಯಕ್ಷೆ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರಾಗಿ ಸುಜಾತಾ ಶಿವಕುಮಾರ್‌, ಉಪಾಧ್ಯಕ್ಷರಾಗಿ ಅನು ಮಧುಕರ್‌ ಆಯ್ಕೆಯಾಗಿದ್ದಾರೆ.ನಗರಸಭೆಯಲ್ಲಿ ಗುರುವಾರ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜೀತ್ ಕುಮಾರ್‌ ಅಧ್ಯಕ್ಷತೆಯಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಿತು. ಬೆಳಿಗ್ಗೆ 9 ರಿಂದ 11 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುಜಾತಾ ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಸಿ.ಎನ್‌. ಸಲ್ಮಾ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಅನು ಮಧುಕರ್‌ ಹಾಗೂ ಕಾಂಗ್ರೆಸ್‌ ಇಂದಿರಾ ಶಂಕರ್‌ ನಾಮಪತ್ರ ಸಲ್ಲಿಸಿದ್ದರು.

ನಿರೀಕ್ಷೆಯಂತೆ ಬಿಜೆಪಿ ಮತ್ತೆ ಅಧಿಕಾರಕ್ಕೆ । ಬಹುಮತ ಇಲ್ಲದಿದ್ದರೂ ಸ್ಪರ್ಧೆ ಮಾಡಿದ ಕಾಂಗ್ರೆಸ್

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಚಿಕ್ಕಮಗಳೂರು ನಗರಸಭೆ ಅಧ್ಯಕ್ಷರಾಗಿ ಸುಜಾತಾ ಶಿವಕುಮಾರ್‌, ಉಪಾಧ್ಯಕ್ಷರಾಗಿ ಅನು ಮಧುಕರ್‌ ಆಯ್ಕೆಯಾಗಿದ್ದಾರೆ.

ನಗರಸಭೆಯಲ್ಲಿ ಗುರುವಾರ ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ದಲ್ಜೀತ್ ಕುಮಾರ್‌ ಅಧ್ಯಕ್ಷತೆಯಲ್ಲಿ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆ ನಡೆಯಿತು. ಬೆಳಿಗ್ಗೆ 9 ರಿಂದ 11 ಗಂಟೆವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಸುಜಾತಾ ಶಿವಕುಮಾರ್‌ ಹಾಗೂ ಕಾಂಗ್ರೆಸ್‌ ಪಕ್ಷದಿಂದ ಸಿ.ಎನ್‌. ಸಲ್ಮಾ ನಾಮಪತ್ರ ಸಲ್ಲಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಅನು ಮಧುಕರ್‌ ಹಾಗೂ ಕಾಂಗ್ರೆಸ್‌ ಇಂದಿರಾ ಶಂಕರ್‌ ನಾಮಪತ್ರ ಸಲ್ಲಿಸಿದ್ದರು.

ಮಧ್ಯಾಹ್ನ 1 ಗಂಟೆ ವೇಳೆಗೆ ಸಭೆ ಆರಂಭವಾಯಿತು. ಸದಸ್ಯರೆಲ್ಲರೂ ಆಸೀನರಾಗುತ್ತಿದ್ದಂತೆ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಯಿತು. ನಾಮಪತ್ರ ಸಲ್ಲಿಸಿರುವ ವಿವರವನ್ನು ಉಪ ವಿಭಾಗಾಧಿಕಾರಿ ನೀಡುತ್ತಾ, ಉಮೇದುವಾರಿಕೆ ಹಿಂಪಡೆಯಲು ಅವಕಾಶ ನೀಡಿದರು. ಆದರೆ, ಯಾರೂ ಕೂಡ ನಾಮಪತ್ರ ವಾಪಸ್‌ ಪಡೆಯದೆ ಇದ್ದರಿಂದ ಚುನಾವಣೆ ಪ್ರಕ್ರಿಯೆ ಆರಂಭಗೊಂಡಿತು.

ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸುಜಾತಾ ಶಿವಕುಮಾರ್‌ ಪರವಾಗಿ ಬಿಜೆಪಿಯ 18 ಮಂದಿ ಹಾಗೂ ಜೆಡಿಎಸ್‌ನ 2 ಇಬ್ಬರು ಸೇರಿದಂತೆ ಜೆಡಿಎಸ್‌ ಬೆಂಬಲಿತ ಪಕ್ಷೇತರ ಓರ್ವ ಸದಸ್ಯರು ಹಾಗೂ ವಿಧಾನಪರಿಷತ್‌ ಸದಸ್ಯರಾದ ಎಂ.ಕೆ. ಪ್ರಾಣೇಶ್‌, ಎಸ್‌.ಎಲ್‌. ಭೋಜೇಗೌಡ ಹಾಗೂ ಸಿ.ಟಿ. ರವಿ, ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದ ಖೋಟಾ ಶ್ರೀನಿವಾಸ್‌ ಪೂಜಾರಿ ಸೇರಿದಂತೆ ಒಟ್ಟು 25 ಮಂದಿ ಮತ ಚಲಾವಣೆ ಮಾಡಿದರು.

ಸಿ.ಎನ್‌. ಸಲ್ಮಾ ಪರವಾಗಿ ಚಿಕ್ಕಮಗಳೂರು ಕ್ಷೇತ್ರ ಶಾಸಕ ಎಚ್‌.ಡಿ. ತಮ್ಮಯ್ಯ ಸೇರಿದಂತೆ 12 ಮಂದಿ ಕಾಂಗ್ರೆಸ್‌ ಸದಸ್ಯರು, ಎಸ್‌ಡಿಪಿಐ ಹಾಗೂ ಪಕ್ಷೇತರ ತಲಾ ಒಬ್ಬರು ಸೇರಿದಂತೆ ಒಟ್ಟು 15 ಮಂದಿ ಮತ ಚಲಾಯಿಸಿದರು. ಹಾಗಾಗಿ ಹೆಚ್ಚು ಮತಗಳನ್ನು ಪಡೆದ ಸುಜಾತಾ ಶಿವಕುಮಾರ್ ಆಯ್ಕೆಯನ್ನು ಉಪ ವಿಭಾಗಾಧಿಕಾರಿಗಳು ಘೋಷಣೆ ಮಾಡಿದರು. ಉಪಾಧ್ಯಕ್ಷ ಸ್ಥಾನಕ್ಕೆ ಅನು ಮಧುಕರ್‌ ಪರವಾಗಿ 25 ಹಾಗೂ ಇಂದಿರಾ ಶಂಕರ್‌ ಪರವಾಗಿ 15 ಮತಗಳು ಬಂದಿದ್ದರಿಂದ ಅನು ಮಧುಕರ್ ಆಯ್ಕೆ ಘೋಷಣೆ ಮಾಡಲಾಯಿತು.

ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ನಗರಸಭೆ ಸದಸ್ಯರು, ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ಅಭಿನಂದನೆ ಸಲ್ಲಿಸಿದರು.--- ಬಾಕ್ಸ್‌ -----

ಅಧ್ಯಕ್ಷೆ ಸುಜಾತಾ ಶಿವಕುಮಾರ್ ಚಿಕ್ಕಮಗಳೂರು ನಗರಸಭೆಯ 6ನೆಯ ವಾರ್ಡಿನಿಂದ ಸದಸ್ಯರಾಗಿ ಆಯ್ಕೆಯಾಗಿರುವ ಸುಜಾತಾ ಶಿವಕುಮಾರ್ ಬಿಜೆಪಿಯ ಹಿರಿಯ ಕಾರ್ಯಕರ್ತೆಯಾಗಿದ್ದಾರೆ. ಸಂಸದರಾಗಿದ್ದ ಡಿ.ಸಿ.ಶ್ರೀಕಂಠಪ್ಪ ಅವರ ಅನುಯಾಯಿಯಾಗಿದ್ದ ಸುಜಾತಾ ಶಿವಕುಮಾರ್ ಅವರು ಬಿಜೆಪಿಯ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸಿಕೊಂಡು ಬರುತ್ತಿದ್ದಾರೆ.

ಕುರುಬ ಸಮುದಾಯದ ಸುಜಾತಾ ಶಿವಕುಮಾರ್ ಅವರು ಕನಕ ಮಹಿಳಾ ಮಂಡಳಿ, ಸ್ವಸಹಾಯ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆ ಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿರುವ ಅವರು ರೋಟರಿ ಸಂಸ್ಥೆಯ ಸದಸ್ಯರಾಗಿದ್ದಾರೆ.ಮೊದಲ ಬಾರಿ ನಗರಸಭೆ ಸದಸ್ಯರಾಗಿ ಆಯ್ಕೆಯಾಗಿರುವ ಸುಜಾತಾ ಶಿವಕುಮಾರ್ ಅವರ ಕಾರ್ಯದಕ್ಷತೆಗೆ ಪಕ್ಷದ ಮುಖಂಡರು ಮತ್ತು ನಗರಸಭೆ ಸದಸ್ಯರು ಬೆಂಬಲ ಸೂಚಿಸುವ ಮೂಲಕ ನಗರಸಭೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.---

ಉಪಾಧ್ಯಕ್ಷೆ ಅನು ಮಧುಕರ್

ಚಿಕ್ಕಮಗಳೂರು ನಗರಸಭೆಯ 14ನೆಯ ವಾರ್ಡಿನ ಸದಸ್ಯರಾಗಿರುವ ಅನು ಮಧುಕರ್ ಭಾವಸಾರ ಕ್ಷತ್ರಿಯ ಸಮಾಜಕ್ಕೆ ಸೇರಿದವರು. 2014 ರಲ್ಲಿ ಮೊಟ್ಟ ಮೊದಲ ಬಾರಿ ನಗರಸಭೆಗೆ 13ನೆಯ ವಾರ್ಡಿನಿಂದ ಸದಸ್ಯರಾಗಿ ಆರಿಸಿ ಬಂದಿದ್ದರು. ಈಗ ಎರಡನೆ ಬಾರಿ ಸದಸ್ಯರಾಗಿ ಆರಿಸಿ ಬಂದಿರುವ ಅವರು ಭಾವಸಾರ ಕ್ಷತ್ರಿಯ ಸಮಾಜದ ಸಕ್ರಿಯ ಸದಸ್ಯರಾಗಿ ಸಮಾಜದ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಪಾಲ್ಗೊಳ್ಳುವ ಮೂಲಕ ಸಮಾಜದ ಗಮನ ಸೆಳೆದಿದ್ದಾರೆ.

22 ಕೆಸಿಕೆಎಂ 1ಚಿಕ್ಕಮಗಳೂರು ನಗರಸಭೆ ನೂತನ ಅಧ್ಯಕ್ಷೆ ಸುಜಾತಾ ಶಿವಕುಮಾರ್‌ ಹಾಗೂ ಉಪಾಧ್ಯಕ್ಷೆ ಅನು ಮಧುಕರ್‌ ಅವರಿಗೆ ವಿಧಾನಪರಿಷತ್‌ ಸದಸ್ಯರಾದ ಸಿ.ಟಿ. ರವಿ, ಎಸ್‌.ಎಲ್‌. ಭೋಜೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್‌ ಶೆಟ್ಟಿ, ನಗರಸಭೆ ಸದಸ್ಯ ರಾಜಶೇಖರ್‌, ಕುಮಾರಗೌಡ, ಮಧುಕುಮಾರ್‌ ರಾಜ್‌ ಅರಸ್‌ ಅವರು ಅಭಿನಂದನೆ ಸಲ್ಲಿಸಿದರು.