ಮನೆ ಕುಸಿದು ಮಗು ಸಾವು, ಐವರಿಗೆ ಗಾಯ

| Published : Jul 18 2025, 12:49 AM IST / Updated: Jul 18 2025, 12:50 AM IST

ಸಾರಾಂಶ

ಸಿಂಧನೂರು ತಾಲೂಕಿನ ಅಮರಪುರ ಗ್ರಾಮದ ಪ್ರಶಾಂತಿ ಶರಣಪ್ಪ ಮೃತಪಟ್ಟಿದ್ದು ಹನುಮಂತಿ, ದುರಗಮ್ಮ, ಭೀಮಮ್ಮ, ಹುಸೇನಪ್ಪ, ಫಕೀರಪ್ಪ ಗಾಯಗೊಂಡಿದ್ದು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಶಾಂತಿ ತಾಯಿ ಹನುಮಂತಿಯೊಂದಿಗೆ ಒಂದು ವಾರದ ಹಿಂದೆ ಅಜ್ಜಿ ಮನೆಗೆ ಆಗಮಿಸಿದ್ದಳು.

ಗಂಗಾವತಿ:

ಧಾರಾಕಾರ ಮಳೆಯಿಂದ ಮನೆ ಕುಸಿದ ಪರಿಣಾಮ ಅಜ್ಜಿಯ ಮನೆಗೆ ಆಗಮಿಸಿದ್ದ ಒಂದೂವರೆ ವರ್ಷದ ಮಗು ಸೇರಿ ಐವರು ಗಾಯಗೊಂಡಿರುವ ಘಟನೆ ಬುಧವಾರ ಮಧ್ಯರಾತ್ರಿ ತಾಲೂಕಿನ ಹೆಬ್ಬಾಳದಲ್ಲಿ ನಡೆದಿದೆ.

ಸಿಂಧನೂರು ತಾಲೂಕಿನ ಅಮರಪುರ ಗ್ರಾಮದ ಪ್ರಶಾಂತಿ ಶರಣಪ್ಪ ಮೃತಪಟ್ಟಿದ್ದು ಹನುಮಂತಿ, ದುರಗಮ್ಮ, ಭೀಮಮ್ಮ, ಹುಸೇನಪ್ಪ, ಫಕೀರಪ್ಪ ಗಾಯಗೊಂಡಿದ್ದು ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಶಾಂತಿ ತಾಯಿ ಹನುಮಂತಿಯೊಂದಿಗೆ ಒಂದು ವಾರದ ಹಿಂದೆ ಅಜ್ಜಿ ಮನೆಗೆ ಆಗಮಿಸಿದ್ದಳು. ಬುಧವಾರ ರಾತ್ರಿ ಸುರಿದ ಮಳೆಯಿಂದ ಮನೆಯ ಗೋಡೆ ಕುಸಿದು ಮಲಗಿದ್ದವರ ಮೇಲೆ ಬಿದ್ದಿದ್ದೆ. ಇದರಲ್ಲಿ ಪ್ರಶಾಂತಿ ಮೃತಪಟ್ಟಿದ್ದಾಳೆ.

₹5 ಲಕ್ಷ ಪರಿಹಾರ:

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್‌ ನಾಗರಾಜ್‌ ಮತ್ತು ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ ಪರಿಶೀಲಿಸಿದರು. ಬಳಿಕ ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿ, ಮೃತ ಮಗುವಿನ ತಾಯಿಗೆ ಸಾಂತ್ವನ ಹೇಳಿದರು. ವಿಪತ್ತು ನಿರ್ವಹಣಾ ಅಡಿ ಮೃತ ಮಗುವಿನ ಕುಟುಂಬದವರಿಗೆ ₹ 5 ಲಕ್ಷ ಪರಿಹಾರ ನೀಡಲಾಯಿತು.