ಸಾರಾಂಶ
ಗಂಗಾವತಿ: ಅಯೋಧ್ಯೆಯಲ್ಲಿ ಬಾಲರಾಮನನ್ನು ಪ್ರತಿಷ್ಠಾಪಿಸಿದಂತೆ ಹನುಮ ಜನಿಸಿದ ಕ್ಷೇತ್ರ ಅಂಜನಾದ್ರಿಯಲ್ಲಿ ಬಾಲ ಹನುಮನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.ನಗರದ ತಾಲೂಕು ಕ್ರೀಡಾಂಗಣದಲ್ಲಿ 75ನೇ ಗಣರಾಜ್ಯೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅಯೋಧ್ಯೆಯನ್ನು ಹೇಗೆ ಅಭಿವೃದ್ಧಿ ಮಾಡಲಾಗುತ್ತಿದೆಯೋ ಅದೇ ಮಾದರಿಯಲ್ಲಿ ಅಂಜನಾದ್ರಿ ಪ್ರದೇಶವನ್ನು ಅಭಿವೃದ್ಧಿ ಪಡಿಸಲಾಗುತ್ತದೆ ಎಂದರು.ಈಗಾಗಲೇ ಕೇಂದ್ರ ಸರ್ಕಾರಕ್ಕೆ ₹500 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬರುವ ದಿನಗಳಲ್ಲಿ ಈ ಕ್ಷೇತ್ರ ದೇಶದ ಗಮನ ಸೆಳೆಯುವುದರಲ್ಲಿ ಸಂದೇಹ ಇಲ್ಲ. ಗಂಗಾವತಿಯಲ್ಲಿ ₹40 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗುತ್ತಿದೆ. ತಾವು ಚುನಾವಣೆಯಯಲ್ಲಿ ಭರವಸೆ ನೀಡಿದಂತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.ತಹಸೀಲ್ದಾರ ಯು.ನಾಗರಾಜ್ ಮಾತನಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮಹನಿಯರನ್ನು ಸನ್ಮಾನಿಸಿದರು. ನಂತರ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮದಲ್ಲಿ ತಾಪಂ ಇಒ ಲಕ್ಷ್ಮೀದೇವಿ, ಪೌರಾಯುಕ್ತ ವಿರೂಪಾಕ್ಷಮೂರ್ತಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ವೆಂಕಟೇಶ ಇದ್ದರು.