ಸಾರಾಂಶ
ರಾಮೇನಹಳ್ಳಿ ಗ್ರಾಮದಲ್ಲಿ ಘಟನೆ । ಸಾರ್ವಜನಿಕರು, ಪೊಲೀಸರ ಸಹಕಾರದಿಂದ ಸೆರೆ
ಕನ್ನಡಪ್ರಭ ವಾರ್ತೆ ಬೇಲೂರುಕುಡಿದ ಮತ್ತಿನಲ್ಲಿ ಅಳಿಯ ಮಾವನನ್ನು ಕೊಂದು ನಂತರ ಮಾವನಿಗೆ ಎದೆನೋವು ಕಾಣಿಸಿಕೊಂಡಿದೆ ಎಂದು ಆಸ್ಪತ್ರೆಗೆ ಕರೆತಂದು ಸಿಬ್ಬಂದಿ ಜೊತೆ ಸುಳ್ಳಿನ ನಾಟಕವಾಡಿ ಸರ್ಕಾರಿ ಆಸ್ಪತ್ರೆ ಮುಂಭಾಗ ಸಾರ್ವಜನಿಕರು ಹಾಗೂ ಪೊಲೀಸರ ಸಹಕಾರದಿಂದ ಅರೋಪಿಯನ್ನು ಬಂಧಿಸಿ ಪೊಲಿಸ್ ಠಾಣೆಗೆ ಕರೆದೊಯ್ದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
ತಾಲೂಕಿನ ಇಬ್ಬೀಡು ಗ್ರಾಮ ಪಂಚಾಯತಿ ವ್ಯಾಪ್ತಿಯ ರಾಮೇನಹಳ್ಳಿ ಗ್ರಾಮದ ತಮ್ಮಯ್ಯ ೫೮ ವರ್ಷದ ವ್ಯಕ್ತಿ ಕೊಲೆಯಾಗಿದ್ದಾರೆ. ಪಕ್ಕದ ಗ್ರಾಮದ ಬಲ್ಲೇನಹಳ್ಳಿ ಗ್ರಾಮದ ಜಗದೀಶ್ ಎಂಬುವರಿಗೆ ಸುಮಾರು ೨೫ ವರ್ಷಗಳ ಹಿಂದೆ ತಮ್ಮ ಮಗಳು ಲತಾ ಅವರನ್ನು ಮದುವೆ ಮಾಡಿಕೊಡಲಾಗಿತ್ತು.ಕುಡಿತದ ದಾಸನಾಗಿದ್ದ ಜಗದೀಶ್ ಪ್ರತಿನಿತ್ಯ ಕುಡಿದು ಹೆಂಡತಿ ಮಕ್ಕಳಿಗೆ ಹೊಡೆಯುತ್ತಿದ್ದ ಹಿನ್ನೆಲೆಯಲ್ಲಿ ತನ್ನ ತವರು ಮನೆಯಲ್ಲಿಯೇ ಲತಾ ತನ್ನ ಮಕ್ಕಳನ್ನು ಓದಿಸಿಕೊಂಡು ಅಂಗನವಾಡಿಯಲ್ಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇಷ್ಟಾದರೂ ಪ್ರತಿದಿನ ಊರಿಗೆ ಬಂದು ಜಗಳವಾಡುತ್ತಿದ್ದ ಇವನ ಮೇಲೆ ಹಲವಾರು ಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಗುರುವಾರ ಮದ್ಯಾಹ್ನ ಎಂದಿನಂತೆ ತನ್ನ ದನ ಕುರಿಗಳನ್ನು ಮೇಯಿಸಲು ಬಿಟ್ಟು ಪಕ್ಕದ ಶಾಲೆಯ ಕಟ್ಟೆಯ ಮೇಲೆ ಮಲಗಿದ್ದ ತಮ್ಮಯ್ಯನವರ ಜತೆ ಕಂಠಪೂರ್ತಿ ಕುಡಿದು ಬಂದ ಜಗದೀಶ್ ಜಗಳವಾಡಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಓಡಿಹೋಗಿದ್ದಾನೆ. ಅಲ್ಲಿದ್ದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ಸಾಗಿಸಿದ ನಂತರ ಇವನೂ ಸಹ ಆಸ್ಪತ್ರೆ ಬಳಿ ಇದ್ದು ತನ್ನ ಮಾವನಿಗೆ ಎದೆನೋವು ಕಾಣಿಸಿಕೊಂಡಿದೆ ಎಂದು ಆಸ್ಪತ್ರೆಯಲ್ಲಿ ಸಿಬ್ಬಂದಿ ಜೊತೆ ಸುಳ್ಳಿನ ನಾಟಕವಾಡಿದ್ದಾನೆ. ನಂತರ ತಮ್ಮಯ್ಯನವರನ್ನು ವೈದ್ಯರು ಹಾಗೂ ಸಿಬ್ಬಂದಿ ತಪಾಸಣೆ ನಡೆಸಿದಾಗ ಆಸ್ಪತ್ರೆಗೆ ಬರುವ ಮುಂಚೆಯೇ ತಮ್ಮಯ್ಯ ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದಾರೆ.ವಿಷಯ ತಿಳಿದು ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆಸ್ಪತ್ರೆಯ ಬಳಿ ಜಮಾಯಿಸಿದಾಗ ನಾಟಕವಾಡಿದ ಜಗದೀಶ್ ಮಾವನಿಗೆ ಎದೆನೋವು ಕಾಣಿಸಿಕೊಂಡಿದ್ದು ಅವರನ್ನು ಆಸ್ಪತ್ರೆಗೆ ಕರೆತಂದು ಬಿಟ್ಟಿದ್ದೇನೆ ಎಂದು ಅಲ್ಲಿಂದ ಓಡಿಹೋಗಲು ಯತ್ನಿಸಿದ್ದಾನೆ. ಸಾರ್ವಜನಿಕರು ಹಾಗೂ ಪೊಲೀಸರ ಸಹಕಾರದಿಂದ ಅರೋಪಿಯನ್ನು ಹಿಡಿದು ಬಂಧಿಸಿ ಪೊಲಿಸ್ ಠಾಣೆಗೆ ಒಪ್ಪಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ವೃತ್ತ ನಿರೀಕ್ಷಕ ಜಯರಾಂ ಹಾಗೂ ಪಿಎಸ್ ಐ ಪ್ರವೀಣ್ ಕುಮಾರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೇಲೂರು ಸರ್ಕಾರಿ ಆಸ್ಪತ್ರೆ ಮುಂಭಾಗ ಸಾರ್ವಜನಿಕರು ಹಾಗೂ ಪೊಲೀಸರ ಸಹಕಾರದಿಂದ ಅರೋಪಿಯನ್ನು ಬಂಧಿಸಿ ಪೊಲಿಸ್ ಠಾಣೆಗೆ ಕರೆದೊಯ್ಯಲಾಯಿತು.