ಶೆಟ್ಟರ್‌ ಯಾವ ಒತ್ತಡಕ್ಕೆ ಬಿಜೆಪಿ ಸೇರಿದ್ದಾರೋ ಗೊತ್ತಿಲ್ಲ: ನಾಗೇಂದ್ರ

| Published : Jan 27 2024, 01:15 AM IST

ಸಾರಾಂಶ

ಶೆಟ್ಟರ್ ಬಿಜೆಪಿ ಸೇರ್ಪಡೆಯನ್ನು ಮೋದಿ ಅಲೆ ಎನ್ನುತ್ತಿದ್ದಾರೆ. ಅದೇನೂ ಇಲ್ಲ. ಶೆಟ್ಟರ್ ಯಾವ ಒತ್ತಡಕ್ಕೆ ಅಲ್ಲಿಗೆ ಹೋಗಿದ್ದರೂ ಗೊತ್ತಾಗುತ್ತಿಲ್ಲ ಎಂದು ಸಚಿವ ಬಿ. ನಾಗೇಂದ್ರ ತಿಳಿಸಿದರು.

ಬಳ್ಳಾರಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರ ಬಿಜೆಪಿಗೆ ಮರುಸೇರ್ಪಡೆಯಿಂದ ಬಳ್ಳಾರಿ ಭಾಗದಲ್ಲಿ ಕಾಂಗ್ರೆಸ್‌ಗೆ ಯಾವುದೇ ಪರಿಣಾಮವಾಗುವುದಿಲ್ಲ ಎಂದು ಜಿಲ್ಲಾ ಸಚಿವ ಬಿ. ನಾಗೇಂದ್ರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶೆಟ್ಟರ್ ಅವರು ಹುಬ್ಬಳ್ಳಿ ಭಾಗದಲ್ಲಿ ತುಸು ಪ್ರಭಾವಿಯಾಗಿದ್ದಾರೆ. ಆದರೆ, ಬಳ್ಳಾರಿಯಲ್ಲಿ ಯಾವುದೇ ರೀತಿಯಲ್ಲಿ ಅವರ ಪ್ರಭಾವವಿಲ್ಲ. ಹೀಗಾಗಿ ನಮ್ಮ ಪಕ್ಷಕ್ಕೆ ಧಕ್ಕೆಯಿಲ್ಲ. ಕಾಂಗ್ರೆಸ್ ಒಬ್ಬರನ್ನೇ ನಂಬಿಕೊಂಡಿಲ್ಲ. ಕಾಂಗ್ರೆಸ್‌ನಲ್ಲಿ ಅನೇಕ ಲಿಂಗಾಯತ ನಾಯಕರಿದ್ದಾರೆ. ಹೋಗುವವರು ಹೋಗಬಹುದು. ಕಾಂಗ್ರೆಸ್‌ಗೆ ಬರುವವರು ಬರಬಹುದು ಎಂದರು.

ಶೆಟ್ಟರ್ ಅವರನ್ನು ಪಕ್ಷ ಸರಿಯಾಗಿ ನಡೆಸಿಕೊಂಡಿತ್ತು. ಸೋತರೂ ಎಂಎಲ್ಸಿ ಮಾಡಿತ್ತು. ಡಿ.ಕೆ. ಶಿವಕುಮಾರ್ ಅವರ ಮುಂದೆ ಪಕ್ಷ ಬಿಟ್ಟು ಹೋಗುವುದಿಲ್ಲ ಎಂದಿದ್ದ ಶೆಟ್ಟರ್ ಅವರು ದಿಢೀರ್ ಈ ನಿರ್ಧಾರ ಯಾಕೆ ತೆಗೆದುಕೊಂಡರೋ ಗೊತ್ತಿಲ್ಲ. ಬಿಜೆಪಿಯವರಿಗೆ ನಮ್ಮ ಪಕ್ಷದವರ ಮೇಲೆ ಯಾಕೆ ಪ್ರೀತಿಯೋ ತಿಳಿಯದು.

ಶೆಟ್ಟರ್ ಬಿಜೆಪಿ ಸೇರ್ಪಡೆಯನ್ನು ಮೋದಿ ಅಲೆ ಎನ್ನುತ್ತಿದ್ದಾರೆ. ಅದೇನೂ ಇಲ್ಲ. ಶೆಟ್ಟರ್ ಯಾವ ಒತ್ತಡಕ್ಕೆ ಅಲ್ಲಿಗೆ ಹೋಗಿದ್ದರೂ ಗೊತ್ತಾಗುತ್ತಿಲ್ಲ ಎಂದರು.

₹30 ಕೋಟಿಯಲ್ಲಿ ಪದವಿ ಕಾಲೇಜು: ಸುಮಾರು ₹30 ಕೋಟಿ ವೆಚ್ಚದಲ್ಲಿ ನಗರದ ವಾಲ್ಮೀಕಿ ಭವನದ ಬಳಿ 3 ಎಕರೆ ಪ್ರದೇಶದಲ್ಲಿ ಸರ್ಕಾರಿ ಮಹಿಳಾ ಪದವಿ ಕಾಲೇಜು ಸ್ಥಾಪನೆ ಮಾಡಲಾಗುವುದು. ರಾಜ್ಯ ಸರ್ಕಾರ ₹25 ಕೋಟಿ ನೀಡಲಿದ್ದು, ಇನ್ನುಳಿದ ₹5 ಕೋಟಿಯನ್ನು ಜಿಲ್ಲಾ ಖನಿಜ ನಿಧಿಯಿಂದ ಪಡೆಯಲಾಗುವುದು ಎಂದರು.

ಜೀನ್ಸ್‌ ಪಾರ್ಕ್ ಹಾಗೂ ವಿಮಾನ ನಿಲ್ದಾಣಕ್ಕೆ ಬರುವ ಬಜೆಟ್‌ನಲ್ಲಿ ಹಣ ನಿಗದಿಗೊಳಿಸಲಾಗುವುದು. ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ₹12 ಕೋಟಿ ವೆಚ್ಚದಲ್ಲಿ ನಾಲ್ಕು ಅಂತಸ್ತಿನ ಜಿಮ್ ಸ್ಥಾಪಿಸಲಾಗುವುದು. ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು ಎಂದರು.

ನಗರ ಶಾಸಕ ನಾರಾ ಭರತ್ ರೆಡ್ಡಿ, ಮೇಯರ್ ಬಿ. ಶ್ವೇತಾ, ಉಪಮೇಯರ್ ಜಾನಕಿ ಹಾಗೂ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಸುದ್ದಿಗೋಷ್ಠಿಯಲ್ಲಿದ್ದರು.