ಸಾರಾಂಶ
ಶಿರಸ್ತೇದಾರ್ ಚಂದ್ರಶೇಖರ್ ಅವರನ್ನು ಜ.24ರಂದು ಅಮಾನತುಗೊಳಿಸಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಚ್.ಎಂ.ಸುದರ್ಶನ್ ಆದೇಶ ಹೊರಡಿಸಿದ್ದಾರೆ. ಚಂದ್ರಶೇಖರ್ ವಿರುದ್ಧ ಇಲಾಖೆ ವಿಚಾರಣೆ ಕಾಯ್ದಿರಿಸಿರುವ ಅಧೀನ ಕಾರ್ಯದರ್ಶಿ ಚಂದ್ರಶೇಖರ್ ಸ್ಥಾನಕ್ಕೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕ ಕಚೇರಿಯ ಶಿರಸ್ತೇದಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಕಂದಾಯ ಸಚಿವ ಕೃಷ್ಣ ಭೈರೇಗೌಡರಿಗೆ ಕಚೇರಿ ತಂತ್ರಾಂಶದ ಅನುಷ್ಠಾನದ ಬಗ್ಗೆ ತಪ್ಪು ಮಾಹಿತಿ ನೀಡಿದ್ದ ತಾಲೂಕು ಕಚೇರಿ ಶಿರಸ್ತೇದಾರ್ ಎನ್.ಚಂದ್ರಶೇಖರ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.ಕಳೆದ ಜ.17ರಂದು ಕಂದಾಯ ಸಚಿವರು ತಾಲೂಕು ಕಚೇರಿಗೆ ಭೇಟಿ ನೀಡಿದ್ದ ವೇಳೆ ಇ-ತತ್ರಾಂಶದ ಬಗ್ಗೆ ಶಿರಸ್ತೇದಾರ್ ಚಂದ್ರಶೇಖರ್ ತಪ್ಪು ಮಾಹಿತಿ ನೀಡಿದ್ದರು. ಜೊತೆಗೆ ಇ-ಕಚೇರಿ ತಂತ್ರಾಂಶವನ್ನು ಪೂರ್ಣ ಪ್ರಮಾಣದಲ್ಲಿ ಕಾರ್ಯರೂಪಕ್ಕೆ ತರಲು ಯಾವುದೇ ಕ್ರಮ ಕೈಗೊಳ್ಳದೆ ಬೇಜವಾಬ್ದಾರಿ ಪ್ರದರ್ಶನ ಮಾಡಿದ್ದರು.
ಈ ಹಿನ್ನೆಲೆಯಲ್ಲಿ ಶಿರಸ್ತೇದಾರ್ ಚಂದ್ರಶೇಖರ್ ಅವರನ್ನು ಜ.24ರಂದು ಅಮಾನತುಗೊಳಿಸಿ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಎಚ್.ಎಂ.ಸುದರ್ಶನ್ ಆದೇಶ ಹೊರಡಿಸಿದ್ದಾರೆ. ಚಂದ್ರಶೇಖರ್ ವಿರುದ್ಧ ಇಲಾಖೆ ವಿಚಾರಣೆ ಕಾಯ್ದಿರಿಸಿರುವ ಅಧೀನ ಕಾರ್ಯದರ್ಶಿ ಚಂದ್ರಶೇಖರ್ ಸ್ಥಾನಕ್ಕೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕ ಕಚೇರಿಯ ಶಿರಸ್ತೇದಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ.ಸಚಿವರು ತಾಲೂಕು ಕಚೇರಿ ಭೇಟಿ ವೇಳೆ ಇ-ಕಚೇರಿಯ ತಂತ್ರಾಂಶದ ಬಗ್ಗೆ ಪರಿಶೀಲನೆ ನಡೆಸಿದಾಗ ಒಂದು ಸಾವಿರದ ಎಂಟು ಕಡತಗಳಲ್ಲಿ 603 ಕಡತಗಳನ್ನು ಮಾತ್ರ ವಿಲೇವಾರಿ ಮಾಡಿರುವುದು ಬೆಳಕಿಗೆ ಬಂದಿದೆ.
ತಾಲೂಕ ಕಚೇರಿಯಿಂದ ಜಿಲ್ಲಾಧಿಕಾರಿಗೆ ಸಲ್ಲಿಸಿರುವ ವರದಿಯಲ್ಲಿ ಮದ್ದೂರು ತಾಲೂಕು ಕಚೇರಿಯಲ್ಲಿ ಪೂರ್ಣ ಪ್ರಮಾಣದ ಇ-ಕಚೇರಿ ತಂತ್ರಾಂಶವನ್ನು ಅನುಷ್ಠಾನಗೊಳಿಸಿರುವುದಾಗಿ ಸುಳ್ಳು ವರದಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸಚಿವ ಕೃಷ್ಣ ಭೈರೇಗೌಡರು ಶಿರಸ್ತೇದಾರ್ ಎನ್. ಚಂದ್ರಶೇಖರ್ ವಿರುದ್ಧ ಶಿಸ್ತು ಕ್ರಮ ಜರಗಿಸುವಂತೆ ಸೂಚನೆ ನೀಡಿದ್ದರಿಂದ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.