ಬಾಲ್ಯವಿವಾಹ, ಪೋಕ್ಸೊ ಸಮಾಜದ ಜಾಢ್ಯಗಳು: ನ್ಯಾಯಾಧೀಶ ಡಿ.ಕೆ. ಮಧುಸೂದನ

| Published : Aug 23 2024, 01:03 AM IST

ಸಾರಾಂಶ

ಕಾಲೇಜು ಹಂತದಲ್ಲಿ ಯುವಕ ಯುವತಿಯರು ಮೋಹ, ಆಮಿಷಕ್ಕೆ ಒಳಗಾಗದೇ ಪುಸ್ತಕಗಳತ್ತ ಚಿತ್ತಹರಿಸಬೇಕು.

ಹಗರಿಬೊಮ್ಮನಹಳ್ಳಿ: ವಿದ್ಯಾಭ್ಯಾಸದ ಅವಧಿಯಲ್ಲಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು, ಬದುಕನ್ನು ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಹಾಕಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಡಿ.ಕೆ. ಮಧುಸೂದನ ಹೇಳಿದರು.

ಪಟ್ಟಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಶಿಕ್ಷಣ ಇಲಾಖೆ, ಸರಕಾರಿ ಗಂ.ಭೀ.ಪಿಯುಸಿ ಕಾಲೇಜು ಸಂಯುಕ್ತಾಶ್ರಯದಲ್ಲಿ ನಡೆದ ಬಾಲ್ಯವಿವಾಹ ನಿಷೇಧ ಕಾನೂನು, ಲೈಂಗಿಕ ಅಪರಾಧಗಳಿಂದ ಮಕ್ಕಳನ್ನು ರಕ್ಷಿಸುವ ಪೋಕ್ಸೋ ಕಾಯ್ದೆ ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜು ಹಂತದಲ್ಲಿ ಯುವಕ ಯುವತಿಯರು ಮೋಹ, ಆಮಿಷಕ್ಕೆ ಒಳಗಾಗದೇ ಪುಸ್ತಕಗಳತ್ತ ಚಿತ್ತಹರಿಸಬೇಕು. ಬಾಲ್ಯವಿವಾಹ, ಪೋಕ್ಸೋ ಪ್ರಕರಣಗಳು ಸಮಾಜದ ಜಾಢ್ಯಗಳಾಗಿದ್ದು, ಇವುಗಳ ಬಗ್ಗೆ ವ್ಯಾಪಕ ಜಾಗೃತಿಯ ಅಗತ್ಯವಿದೆ. ಪೋಷಕರು ಮಕ್ಕಳ ನಡೆನುಡಿಯ ಬಗ್ಗೆ ನಿರಂತರವಾಗಿ ಗಮನಹರಿಸಬೇಕಿದೆ. ಕಾಲೇಜಿಗೆ ಗೈರಾಗುವ ವಿದ್ಯಾರ್ಥಿಗಳ ಬಗ್ಗೆ ಪ್ರಾಂಶುಪಾಲರು, ಉಪನ್ಯಾಸಕರು ಮಾಹಿತಿಯನ್ನು ಕಲೆಹಾಕಿ ವಿದ್ಯಾರ್ಥಿಗಳ ಕುಟುಂಬದವರ ಗಮನಕ್ಕೆ ತರಬೇಕು. ವಿದ್ಯಾರ್ಥಿಗಳು ಅಬ್ದುಲ್ ಕಲಾಂರ ವಿಂಗ್ಸ್ ಆಫ್ ಫೈರ್, ಜವಾಹರ್ ನೆಹರು ಅವರ ಡಿಸ್ಕವರಿ ಆಫ್ ಇಂಡಿಯಾ, ಮಹಾತ್ಮ ಗಾಂಧಿಯ ಮೈ ಎಕ್ಸ್ಪಿರಿಮೆಂಟ್ಸ್, ಡಾ.ಅಂಬೇಡ್ಕರ್ ಅವರ ಪುಸ್ತಕಗಳನ್ನು ಓದಿ ಅರ್ಥೈಸಿಕೊಳ್ಳಬೇಕು ಎಂದರು.

ಸಿವಿಲ್ ನ್ಯಾಯಾಧೀಶ ಸೈಯದ್ ಮೋಹಿದ್ದಿನ್ ಮಾತನಾಡಿ, ಕಾಲೇಜು ಹಂತದ ವಿದ್ಯಾರ್ಥಿಗಳು ಕಾನೂನು ತಿಳಿವಳಿಕೆ ಹೊಂದುವ ಅಗತ್ಯವಿದೆ. ಅನಿಷ್ಟ ಪದ್ಧತಿಗಳಲ್ಲಿ ಒಂದಾದ ಬಾಲ್ಯವಿವಾಹ ಪದ್ಧತಿಯಿಂದ ಜೀವನದ ಅಭದ್ರತೆ ಜೊತೆಗೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ. ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಆರ್ಥಿಕ ಹೊರೆಯಾಗಿ ಪರಿಗಣಿಸುವುದನ್ನು ಬಿಡಬೇಕು. ಗ್ರಾಮೀಣ ಪ್ರದೇಶದಲ್ಲಿ ಬಾಲ್ಯವಿವಾಹ, ಪೋಕ್ಸೋ ಜಾಗೃತಿ ಕಾರ್ಯಕ್ರಮಗಳು ಹೆಚ್ಚು ಆಗಬೇಕು ಎಂದು ತಿಳಿಸಿದರು.

ಪ್ಯಾನಲ್ ವಕೀಲ ಸಂಪನ್ಮೂಲ ವ್ಯಕ್ತಿ ಎಸ್.ಜಿ. ನಾಗರಾಜ್ ವಿದ್ಯಾರ್ಥಿಗಳಿಗೆ ಬಾಲ್ಯವಿವಾಹ, ಪೋಕ್ಸೋ ಕಾಯ್ದೆಯ ಬಗ್ಗೆ ಮಾಹಿತಿ ನೀಡಿದರು. ಕಾಲೇಜು ಪ್ರಾಂಶುಪಾಲ ಎಂ.ಕೆ.ದುರುಗಣ್ಣ ಇತರರಿದ್ದರು. ಕಾರ್ಯಕ್ರಮವನ್ನು ವಕೀಲರಾದ ಎನ್.ಗುರುಬಸವರಾಜ, ಶ್ರೀನಿವಾಸ ನಿರ್ವಹಿಸಿದರು.