ಸಾರಾಂಶ
ಮಂಗಳೂರು : ರಾಜ್ಯಪಾಲರ ನಡೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರ ನಿವಾಸದ ಮೇಲೆ ಬುಧವಾರ ತಡರಾತ್ರಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ.
ನಗರದ ವೆಲೆನ್ಶಿಯಾದಲ್ಲಿರುವ ಐವನ್ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದೆ. ಪಕ್ಷದ ಸಭೆಯಲ್ಲಿ ಭಾಗವಹಿಸುವ ಉದ್ದೇಶದಿಂದ ಐವನ್ ಬೆಂಗಳೂರಿಗೆ ತೆರಳಿದ್ದರಿಂದ ಘಟನೆ ಸಂದರ್ಭ ಅವರ ಕುಟುಂಬದ ಇತರ ಸದಸ್ಯರು ಮಾತ್ರವೇ ಇದ್ದರು.ಹೆಲ್ಮೆಟ್ ಹಾಕಿ ಕಲ್ಲು ತೂರಿದರು: ಬುಧವಾರ ರಾತ್ರಿ ಸುಮಾರು 11.45ರ ವೇಳೆಗೆ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕೃತ್ಯ ಎಸಗಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಐವನ್ ಡಿಸೋಜ ಅವರ ಪತ್ನಿ ಮನೆ ಗೇಟ್ ಹಾಕಿ ಒಳಗೆ ತೆರಳಿದ ಬಳಿಕ ಮುಖ ಚಹರೆ ಕಾಣದಂತೆ ಹೆಲ್ಮೆಟ್ ಧರಿಸಿಕೊಂಡು ಬಂದ ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿ ಘೋಷಣೆ ಕೂಗಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಮನೆಯ ಬಾಗಿಲಿನ ಗಾಜು, ಬಾಗಿಲಿನ ಪ್ರೇಮ್, ಗೋಡೆಗಳಿಗೆ ಕಲ್ಲು ತಾಗಿ ಹಾನಿಯಾಗಿದೆ. ನಿವಾಸದ ಪಕ್ಕದಲ್ಲಿರುವ ಐವನ್ ಕಚೇರಿಗೂ ಕಲ್ಲು ತಾಗಿ ಹಾನಿ ಸಂಭವಿಸಿದೆ. ಸುಮಾರು 15ರಷ್ಟು ಕಲ್ಲುಗಳು ಮನೆ ಆವರಣದಲ್ಲಿ ಬಿದ್ದಿದ್ದವು. ಘಟನೆ ಕುರಿತು ಪಾಂಡೇಶ್ವರ ಠಾಣೆ ಪೊಲೀಸರು ತಕ್ಷಣ ಸ್ಪಂದಿಸಿದ್ದು, ತನಿಖೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗಾಗಿ ಆ ಪ್ರದೇಶದ ಎಲ್ಲ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ ನಡೆದಿದೆ. ಘಟನೆ ಬಳಿಕ ಅವರ ನಿವಾಸಕ್ಕೆ ದಿನವಿಡಿ ಬಿಗಿ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ಉಪ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ), ಸಹಾಯಕ ಪೊಲೀಸ್ ಕಮಿಷನರ್ (ಕೇಂದ್ರ), ಮತ್ತು ಪೊಲೀಸ್ ಇನ್ಸ್‌ಪೆಕ್ಟರ್ (ದಕ್ಷಿಣ) ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ತನಿಖೆಗೆ ವಿಶೇಷ ತಂಡ: ಮಂಗಳೂರು ನಗರ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳ ಪತ್ತೆಗಾಗಿ ಎಸಿಪಿ ಸೆಂಟ್ರಲ್ ಮತ್ತು ದಕ್ಷಿಣ ಠಾಣೆ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಸ್ಥಳೀಯ ಗುಪ್ತಚರ ವಿಭಾಗವೂ ಕಾರ್ಯೋನ್ಮುಖವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ್ದನ್ನು ಖಂಡಿಸಿ ಇತ್ತೀಚೆಗೆ ಮಂಗಳೂರು ಮಹಾನಗರ ಪಾಲಿಕೆ ಎದುರು ಕಾಂಗ್ರೆಸ್ ಬೃಹತ್ ಪ್ರತಿಭಟನೆ ಆಯೋಜಿಸಿತ್ತು. ಈ ವೇಳೆ ಮಾತನಾಡಿದ್ದ ಐವನ್, ‘ರಾಜ್ಯಪಾಲರನ್ನು ರಾಷ್ಟ್ರಪತಿಯವರು ಹಿಂದಕ್ಕೆ ಕರೆಯಿಸಿಕೊಳ್ಳದಿದ್ದರೆ ಬಾಂಗ್ಲಾ ದೇಶದ ಪ್ರಧಾನ ಮಂತ್ರಿಗೆ ಬಂದ ಪರಿಸ್ಥಿತಿ ರಾಜ್ಯಪಾಲರ ಕಚೇರಿಗೂ ಬರಲಿದೆ’ ಎಂಬ ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿತ್ತು. ಐವನ್ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದರು. ಇದರ ಬೆನ್ನಲ್ಲೇ ಇದೀಗ ಐವನ್ ನಿವಾಸದ ಮೇಲೆ ಕಲ್ಲು ತೂರಾಟ ನಡೆದಿದೆ.