ಸಾರಾಂಶ
ಸಾವಣ್ಣ ಪ್ರಕಾಶನದ 16ನೇ ವಾರ್ಷಿಕೋತ್ಸವ, ಆರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೊಬೈಲ್, ಗ್ಯಾಜೆಟ್‌ಗಳಿಂದಾಗಿ ಮಕ್ಕಳು ಮಾನವ ಸಂಬಂಧ ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಸಾಮಾಜಿಕ ತಲ್ಲಣಗಳು ಉಂಟಾಗಲು ಕಾರಣವಾಗುತ್ತಿದೆ ಎಂದು ಶಿಕ್ಷಣ ತಜ್ಞ ಡಾ.ಗುರುರಾಜ ಕರಜಗಿ ಆತಂಕ ವ್ಯಕ್ತಪಡಿಸಿದ್ದಾರೆ.ಭಾನುವಾರ ನಗರದ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಸಾವಣ್ಣ ಪ್ರಕಾಶನದಿಂದ ನಡೆದ 16ನೇ ವಾರ್ಷಿಕೋತ್ಸವ, ಆರು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳು ವಿಪರೀತವಾಗಿ ಮೊಬೈಲ್, ಲ್ಯಾಪ್‌ಟಾಪ್, ಕಂಪ್ಯೂಟರ್ ಸಾಧನಗಳಲ್ಲೇ ಮುಳುಗುತ್ತಿದ್ದಾರೆ. ಅವರಿಗೆ ಮಾನವ ಸಂಬಂಧಗಳನ್ನು ಅರ್ಥೈಸಿಕೊಳ್ಳಲು ಸಾಧ್ಯವಾಗದೆ ವಂಚಿತರಾಗುತ್ತಿದ್ದಾರೆ ಎಂಬ ಮಹತ್ವದ ಸಂಗತಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಕೈಗೊಂಡ ಸಂಶೋಧನೆಯಿಂದ ತಿಳಿದು ಬಂದಿದೆ. ಇದರ ಪರಿಣಾಮ ಪ್ರಸ್ತುತ ಸಂಸಾರಗಳಲ್ಲಿ ಸಂಬಂಧಗಳ ಮಹತ್ವ ಅರಿಯದೆ ಜಗಳ, ವಿಚ್ಛೇದನ ಹಾಗೂ ಇತರೆ ಸಂಗತಿ ಜರುಗುತ್ತಿದೆ ಎಂದು ತಿಳಿಸಿದರು.ಜಗದೀಶ ಶರ್ಮ ಸಂಪ ಮಾತನಾಡಿ, ಮಹಾಭಾರತದ ಕುರುಕ್ಷೇತ್ರ ಯುದ್ಧ ತಿರುವುಗಳಿಂದ ಕೂಡಿದೆ. 11ನೇ ದಿನದ ಯುದ್ಧ ದ್ರೋಣಾಚಾರ್ಯರ ನೇತೃತ್ವದಲ್ಲಿ ಆರಂಭವಾಗುತ್ತದೆ. 14ನೇ ದಿನದ ಯುದ್ಧ ತನ್ನ ಮೂಲ ಉದ್ದೇಶ ಕಳೆದುಕೊಂಡಂತಾಗಿ ಅರ್ಜುನ, ಜಯದ್ರಥರ ನಡುವೆ ಒಬ್ಬರು ಸಾಯಬೇಕು ಎಂಬ ವಿಚಿತ್ರ ತಿರುವಿಗೆ ಬರುತ್ತದೆ. ಹೀಗಾಗಿ ‘ಕುರುಕ್ಷೇತ್ರ-ಕ್ಷಣ ಕ್ಷಣದ ಮಾಹಿತಿ-2’ ಕೃತಿಯನ್ನು 13ನೇ ದಿನಕ್ಕೆ ಮುಗಿಸುತ್ತಿರುವುದಾಗಿ ತಿಳಿಸಿದರು.
ಜಿಬಿಎ ವಿಶೇಷ ಆಯುಕ್ತ ಡಾ.ಕೆ.ಹರೀಶ್‌ಕುಮಾರ್, ಬೆಂ.ಉತ್ತರ ಜಿಎಸ್‌ಟಿ ಆಯುಕ್ತ ಡಾ.ಎಂ.ಕೊಟ್ರಸ್ವಾಮಿ, ಗೋಪಾಲಕೃಷ್ಣ ಕುಂಟಿನಿ, ರಂಗಸ್ವಾಮಿ ಮೂಕನಹಳ್ಳಿ, ಡಾ.ವಿರೂಪಾಕ್ಷ ದೇವರಮನೆ, ಸತ್ಯೇಶ್ ಎನ್.ಬೆಳ್ಳೂರ್ ಇದ್ದರು. ಸಾವಣ್ಣ ಪ್ರಕಾಶಕ ಜಮೀಲ್ ಪ್ರಾಸ್ತಾವಿಕ ಮಾತನಾಡಿದರು.ಲೋಕಾರ್ಪಣೆಯಾದ ಕೃತಿಗಳು
ಜಗದೀಶ್ ಶರ್ಮಾ ಸಂಪ ಅವರ ‘ಕುರುಕ್ಷೇತ್ರ- ಕ್ಷಣ ಕ್ಷಣದ ಮಾಹಿತಿ-2’, ರಂಗನಸ್ವಾಮಿ ಮೂಕನಹಳ್ಳಿ ‘ಈ ಹಣಕಾಸು ತಪ್ಪುಗಳನ್ನು ನೀವು ಮಾಡಬೇಡಿ’, ಗೋಪಾಲಕೃಷ್ಣ ಕುಂಟಿನಿ ‘ಕೃಷ್ಣ ಭಾರತ’, ಡಾ.ವಿರೂಪಾಕ್ಷ ದೇವರಮನೆ ‘ಮಕ್ಕಳು ಮಕ್ಕಳಾಗಿರಲು ಬಿಡಿ’, ಸತ್ಯೇಶ್ ಎನ್.ಬೆಳ್ಳೂರ್ ‘ಸಮಯ = ಹಣ’ ಹಾಗೂ ‘ಸ್ಫೂರ್ತಿಯ ಚಿಲುಮೆ ಸರ್ ಎಂ.ವಿಶ್ವೇಶ್ವರಯ್ಯ’ ಕೃತಿ ಬಿಡುಗಡೆ ಆಯಿತು.;Resize=(128,128))
;Resize=(128,128))
;Resize=(128,128))
;Resize=(128,128))