ಪ್ರತಿ ಹಂತದಲ್ಲೂ ದೌರ್ಜನ್ಯಕ್ಕೊಳಗಾಗುತ್ತಿರುವ ಮಕ್ಕಳು: ದಿನೇಶ್

| Published : Dec 22 2024, 01:35 AM IST

ಪ್ರತಿ ಹಂತದಲ್ಲೂ ದೌರ್ಜನ್ಯಕ್ಕೊಳಗಾಗುತ್ತಿರುವ ಮಕ್ಕಳು: ದಿನೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಪೋಕ್ಸೋ ಕಾಯ್ದೆ- 2012 (ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ) ಹೆಣ್ಣು ಹಾಗೂ ಗಂಡು ಮಕ್ಕಳಿಬ್ಬರ ಮೇಲೂ ಲೈಂಗಿಕ ದೌರ್ಜನ್ಯವೆಸಗಿದರೆ ಈ ಕಾಯ್ದೆಯು ಅನ್ವಯಿಸುತ್ತದೆ. ಪ್ರತಿ ಶಾಲೆಯಲ್ಲೂ ಕಡ್ಡಾಯವಾಗಿ ಒಬ್ಬ ಆಪ್ತಸಮಾಲೋಚಕರನ್ನು ನೇಮಿಸಲೇಬೇಕು. ಮಗು ಶಾಲೆಗೆ ಬರದೇ ಇದ್ದರೇ ಅಥವಾ ಕಲಿಕೆಯಲ್ಲಿ ಕುಂಠಿತವಿದ್ದರೆ ಆಪ್ತ ಸಮಾಲೋಚಕರು ಮಗುವಿನ ಹತ್ತಿರ ಮಾತನಾಡಬೇಕು.

ಮೈಸೂರು: ಬಲಿಷ್ಟವಾದ ಕಾಯ್ದೆಗಳು ಇದ್ದಾಗಿಯೂ ಮಕ್ಕಳು ಒಂದಲ್ಲ ಒಂದು ರೀತಿಯಲ್ಲಿ ದೌರ್ಜನಕ್ಕೆ ಒಳಗಾಗುತ್ತಿದ್ದಾರೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಜಿ. ದಿನೇಶ್ ತಿಳಿಸಿದರು.

ನಗರದ ಒಡನಾಡಿ ಸಂಸ್ಥೆಯ ಮಡಿಲು ಪುನರ್ವಸತಿ ಕೇಂದ್ರದಲ್ಲಿ ಮಕ್ಕಳ ರಕ್ಷಣೆ ಹಾಗೂ ಪೋಷಣೆಯ ಕುರಿತು ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳನ್ನು ಭಿಕ್ಷೆಗೆ ದೂಡುವುದು, ವೇಶ್ಯಾವಾಟಿಕೆಗೆ ಬಳಸಿಕೊಳ್ಳುವುದು, ಕೂಲಿ ಕೆಲಸಕ್ಕೆ ನಿಯೋಜನೆ ಮಾಡುವುದು, ಮಾನವ ಕಳ್ಳಸಾಗಾಣೆ, ಲೈಂಗಿಕ ಶೋಷಣೆ ಸೇರಿದಂತೆ ಪ್ರತಿ ಹಂತದಲ್ಲೂ ಮಕ್ಕಳು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಪೋಕ್ಸೋ ಕಾಯ್ದೆ- 2012 (ಲೈಂಗಿಕ ಅಪರಾಧಗಳಿಂದ ಮಕ್ಕಳ ಸಂರಕ್ಷಣಾ ಕಾಯ್ದೆ) ಹೆಣ್ಣು ಹಾಗೂ ಗಂಡು ಮಕ್ಕಳಿಬ್ಬರ ಮೇಲೂ ಲೈಂಗಿಕ ದೌರ್ಜನ್ಯವೆಸಗಿದರೆ ಈ ಕಾಯ್ದೆಯು ಅನ್ವಯಿಸುತ್ತದೆ. ಪ್ರತಿ ಶಾಲೆಯಲ್ಲೂ ಕಡ್ಡಾಯವಾಗಿ ಒಬ್ಬ ಆಪ್ತಸಮಾಲೋಚಕರನ್ನು ನೇಮಿಸಲೇಬೇಕು. ಮಗು ಶಾಲೆಗೆ ಬರದೇ ಇದ್ದರೇ ಅಥವಾ ಕಲಿಕೆಯಲ್ಲಿ ಕುಂಠಿತವಿದ್ದರೆ ಆಪ್ತ ಸಮಾಲೋಚಕರು ಮಗುವಿನ ಹತ್ತಿರ ಮಾತನಾಡಬೇಕು ಎಂದರು.

ಅದೇ ರೀತಿಯಾಗಿ ಹದಿಯರೆಯದ ವಯಸ್ಸಿನ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ಅಧ್ಯಯನವಾಗಿ ಪರಿಚಯಿಸಬೇಕು. ಮುಂದುವರಿದ ದೇಶಗಳಲ್ಲಿ ಲೈಂಗಿಕ ಶಿಕ್ಷಣದ ಕುರಿತು ಪ್ರತಿಯೊಂದು ಮಗುವಿಗೂ ಅದರ ಬಗ್ಗೆ ತಿಳವಳಿಕೆ ನೀಡಲಾಗುತ್ತಿದೆ. ಇದನ್ನು ನಮ್ಮ ದೇಶದಲ್ಲೂ ಪರಿಚಯಿಸಿ, ನಮ್ಮ ಶಾಲೆಯ ಮಕ್ಕಳಿಗೂ ಇದರ ಬಗ್ಗೆ ಅರಿವು ಬೇಕು ಎಂದು ಅವರು ಹೇಳಿದರು.

ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶುರಾಮ್, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಮಕ್ಕಳ ಸಹಾಯವಾಣಿಯ ಸಿಬ್ಬಂದಿ ಇದ್ದರು.