ಸಾರಾಂಶ
1ರಿಂದ 14 ವರ್ಷದೊಳಗಿನ ತಮ್ಮ ಮಕ್ಕಳನ್ನು ಯಾವುದೇ ಅಪಾಯಕಾರಿ ಮತ್ತು ಅಪಾಯಕಾರಿಯಲ್ಲದ ಕೆಲಸಗಳಿಗೆ ಬಳಸಿಕೊಳ್ಳಬಾರದು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
1ರಿಂದ 18ವರ್ಷದೊಳಗಿನ ಮಕ್ಕಳಿಗೆ ಇದು ದುಡಿಮೆ ವಯಸ್ಸಲ್ಲ, ಈ ವಯಸ್ಸಿನಲ್ಲಿ ಅವರು ಆಟ ಮತ್ತು ಪಾಠಗಳಲ್ಲಿ ಮಗ್ನರಾಗಿರಬೇಕು. ಪೋಷಕರು ಅವರಿಗೆ ಕೆಲಸ ಕಾರ್ಯಗಳಿಗೆ ಕಳಿಸಬಾರದು ಎಂದು ಸ್ಥಳೀಯ ಜೆಎಂಎಫ್‍ಸಿ ನ್ಯಾಯಾಲಯದ ನ್ಯಾಯಾಧೀಶರಾದ ದೇವದಾಸ್ ಹೇಳಿದರು.ಪಟ್ಟಣದ ದೇವನಾಯಕನಹಳ್ಳಿ ವ್ಯಾಪ್ತಿಯಲ್ಲಿರುವ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾರ್ಮಿಕ ಇಲಾಖೆ ನಿರೀಕ್ಷಕರಾದ ಮುಮ್ತಾಜ್ ಬೇಗಂ ಮಾತನಾಡಿ, ಪೋಷಕರು 1ರಿಂದ 14 ವರ್ಷದೊಳಗಿನ ತಮ್ಮ ಮಕ್ಕಳನ್ನು ಯಾವುದೇ ಅಪಾಯಕಾರಿ ಮತ್ತು ಅಪಾಯಕಾರಿಯಲ್ಲದ ಕೆಲಸಗಳಿಗೆ ಬಳಸಿಕೊಳ್ಳಬಾರದು. ಅದೇ ರೀತಿ ಕಿಶೋರ ಕಾರ್ಮಿಕರು ಅಂದರೆ 18 ವರ್ಷದೊಳಗಿನ ಬಾಲಕರು ಅಪಾಯಕಾರಿ ಉದ್ಯಮಗಳಲ್ಲಿ ಕೆಲಸ ಮಾಡಬಾರದು ಎಂದರು. ಗಾರೆ ಕೆಲಸಕ್ಕೆ, ಗ್ಯಾರೇಜ್ ಮತ್ತು ಕಾರ್ಖಾನೆ, ಹೊಟೇಲ್, ಪಟಾಕಿ ಅಂಗಡಿ ಸೇರಿ ಇತರೆ ಕಡೆಗಳಲ್ಲಿ ಕೆಲಸಕ್ಕೆ ಪೋಷಕರು ಕೂಡಾ ಕಳಿಸಬಾರದು ಎಂದರು.ಅಂತಹ ಅಪಾಯಕಾರಿ ಕೆಲಸಗಳಲ್ಲಿ ಮತ್ತು ಉದ್ಯಮಗಳಲ್ಲಿ ಮಕ್ಕಳು ಕಂಡುಬಂದಲ್ಲಿ ಕಾರ್ಮಿಕ ಇಲಾಖೆಯವರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಮತ್ತು ಪೋಷಕರು ಅವರನ್ನು ಕರೆತಂದು ಶಾಲಾ ಮುಖ್ಯವಾಹಿನಿಗೆ ಕಳಿಸಿಕೊಡಬೇಕು ಎಂದು ಮನವಿ ಮಾಡಿದರು. ಬಾಲ ಕಾರ್ಮಿಕರನ್ನು ಇಂತಹ ಕೆಲಸಗಳಿಗೆ ಬಳಸಿಕೊಂಡಿದ್ದು ಕಂಡುಬಂದಲ್ಲಿ ಕಾನೂನು ಪ್ರಕಾರ 2 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ₹50 ಸಾವಿರ ದಂಡ ವಿಧಿಸಲಾಗುವುದು ಎಂದರು.
ಸರ್ಕಾರಿ ಸಹಾಯಕ ಅಭಿಯೋಜಕ ಭರತ್ ಭೀಮಯ್ಯ ಮಾತನಾಡಿದರು. ಎಸ್‍ಡಿಎಂಸಿ ಅಧ್ಯಕ್ಷರಾದ ರೇಷ್ಮಾ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪ್ರಭಾರಿ ಬಿಇಒ ಎಂ.ತಿಪ್ಪೇಶಪ್ಪ, ಶಿಕ್ಷಣ ಸಂಯೋಜಕ ಮುದ್ದನಗೌಡ, ಬಿಆರ್.ಸಿ. ಅಪ್ಸರ್ ಅಹ್ಮದ್, ಸಿಆರ್ಪಿ, ವಿಶ್ವಪಟೇಲ್, ಮುಖ್ಯಶಿಕ್ಷಕ ಮಂಜನಾಯ್ಕ ಹಾಗೂ ಎಸ್‍ಡಿಎಂಸಿ ಪದಾಧಿಕಾರಿಗಳು ಹಾಗೂ ಶಿಕ್ಷಕರು ಇದ್ದರು.