ಸಾರಾಂಶ
ಶಾಲೆ ಕಲಿಯಲು ಬೇಕಾದ ಪೂರಕ ವಾತಾವರಣ, ಗುಣಮಟ್ಟದ ಶಿಕ್ಷಣ ಒದಗಿಸುವ ಹಿನ್ನೆಲೆಯಲ್ಲಿ ಸರ್ಕಾರಗಳು ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ.
ಶಿರಹಟ್ಟಿ: ಸಮಾಜದ ಕಟ್ಟಕಡೆಯ ಸಮಾಜದ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎನ್. ನಾಯಕ ಆಶಿಸಿದರು.
ಶಾಲಾ ಶಿಕ್ಷಣ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಹಯೋಗದಲ್ಲಿ ೨೦೨೪-೨೫ನೇ ಸಾಲಿನ ಸರ್ಕಾರಿ ಪ್ರೌಢಶಾಲೆಗಳಲ್ಲಿ ಓದುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಸುಮಾರು ೩೮ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರ್ಕಾರದ ಆಶಯ ಈಡೇರಿಸಲು ಸರ್ವರೂ ಸಮರ್ಪಣಾ ಮನೋಭಾವದಿಂದ ದುಡಿಯಬೇಕು. ಅದರಿಂದ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯ ಸರ್ವರೂ ಪರಿಣಾಮಕಾರಿ ಸೇವೆ ಸಲ್ಲಿಸಬೇಕು ಎಂದು ಕರೆ ನೀಡಿದರು.ಶಾಲೆ ಕಲಿಯಲು ಬೇಕಾದ ಪೂರಕ ವಾತಾವರಣ, ಗುಣಮಟ್ಟದ ಶಿಕ್ಷಣ ಒದಗಿಸುವ ಹಿನ್ನೆಲೆಯಲ್ಲಿ ಸರ್ಕಾರಗಳು ಹತ್ತಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಪುಸ್ತಕ ಓದುವ ಜತೆಗೆ ರಾಜ್ಯದ ಪ್ರೇಕ್ಷಣೀಯ, ಐತಿಹಾಸಿಕ, ಧಾರ್ಮಿಕ ಹಾಗೂ ನಮ್ಮ ಭಾಗದ ಭೌಗೋಳಿಕ ಹಿನ್ನೆಲೆ ತಿಳಿದುಕೊಳ್ಳುವ ದೃಷ್ಟಿಯಿಂದ ಮಕ್ಕಳಿಗಾಗಿ ಸರ್ಕಾರ ಶೈಕ್ಷಣಿಕ ಪ್ರವಾಸ ಹಮ್ಮಿಕೊಂಡಿದ್ದು, ಪರಿಣಾಮಕಾರಿ ಸ್ಥಳಗಳ ದರ್ಶನ ಮಾಡಿಕೊಂಡು ಶೈಕ್ಷಣಿಕ ಗುಣಮಟ್ಟ ಸುಧಾರಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಜಿಲ್ಲಾ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, ವಿದ್ಯಾರ್ಥಿಗಳು ಕ್ರಿಯಾಶೀಲತೆ, ಮಾನವೀಯ ಗುಣಗಳನ್ನು ಬೆಳೆಸಿಕೊಂಡು ಓದಿಗೆ ಆದ್ಯತೆ ನೀಡಬೇಕು ಎಂದರು.ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ ಕಾರ್ಯಕ್ರಮ ಉದ್ಘಾಟಿಸಿ, ಮಕ್ಕಳಿಗೆ ಪ್ರವಾಸೋದ್ಯಮ ಇಲಾಖೆಯಿಂದ ವಿತರಿಸಲಾದ ಬ್ಯಾಗ್, ಟಿ-ಶರ್ಟ್, ಕ್ಯಾಪ್, ಪುಸ್ತಕ ವಿತರಿಸಿದರು.
ಪಪಂ ಸದಸ್ಯರಾದ ಫಕ್ಕೀರೇಶ ರಟ್ಟಿಹಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಎನ್.ಎನ್. ಸಾವಿರಕುರಿ, ಶ್ರೀನಿವಾಸ ನಾಯಕ, ವೆಂಕಟೇಶ ಅರ್ಕಸಾಲಿ, ಎಂ.ಎ. ಮಕಾನದಾರ, ನಾಗರತ್ನಾ, ಸಿದ್ದು ಹಲಸೂರು, ಹರೀಶ್ ಇತರರು ಇದ್ದರು.