ಮಕ್ಕಳಿಗೆ ನೈತಿಕ ಶಿಕ್ಷಣದ ಅಗತ್ಯವಿದೆ

| Published : Jan 08 2025, 12:15 AM IST

ಸಾರಾಂಶ

ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವನ್ನು ಬಾಲ್ಯದಲ್ಲಿಯೇ ತಿಳಿಸಿಕೊಡಬೇಕು. ಶಿಕ್ಷಣವನ್ನು ಶಾಲೆಯಲ್ಲಿ ಪಡೆಯುತ್ತಾರೆ. ನೈತಿಕ ಶಿಕ್ಷಣದ ಅಗತ್ಯವಿದೆ. ರಾಷ್ಟ್ರೀಯ ಭಾವೈಕ್ಯತೆ ಜೊತೆಗೆ ಸೋದರತ್ವ ಮೈಗೂಡಿಸಿಕೊಳ್ಳಬೇಕು ಎಂದು ಆರ್ಷ ವಿದ್ಯಾಕೇಂದ್ರ ಸಂಸ್ಥಾಪಕರಾದ ಸ್ವಾಮಿ ಚಿದ್ರೂಪಾನಂದ ಸರಸ್ವತಿ ಕರೆ ನೀಡಿದರು. ಇಂದು ಜಾತಿ, ಜಾತಿಗಳ ನಡುವೆ ಭಿನ್ನತೆಗಳು ತಲೆ ಎತ್ತುತ್ತಿವೆ. ಇಂಥಹ ಹೊತ್ತಿನಲ್ಲಿ ಸಹೋದರತ್ವ ಬಹಳ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮಕ್ಕಳಲ್ಲಿ ಒಳ್ಳೆಯ ಸಂಸ್ಕಾರವನ್ನು ಬಾಲ್ಯದಲ್ಲಿಯೇ ತಿಳಿಸಿಕೊಡಬೇಕು. ಶಿಕ್ಷಣವನ್ನು ಶಾಲೆಯಲ್ಲಿ ಪಡೆಯುತ್ತಾರೆ. ನೈತಿಕ ಶಿಕ್ಷಣದ ಅಗತ್ಯವಿದೆ. ರಾಷ್ಟ್ರೀಯ ಭಾವೈಕ್ಯತೆ ಜೊತೆಗೆ ಸೋದರತ್ವ ಮೈಗೂಡಿಸಿಕೊಳ್ಳಬೇಕು ಎಂದು ಆರ್ಷ ವಿದ್ಯಾಕೇಂದ್ರ ಸಂಸ್ಥಾಪಕರಾದ ಸ್ವಾಮಿ ಚಿದ್ರೂಪಾನಂದ ಸರಸ್ವತಿ ಕರೆ ನೀಡಿದರು.

ನಗರದ ಹಾರನಹಳ್ಳಿ ರಾಮಸ್ವಾಮಿ ಸಭಾಂಗಣದಲ್ಲಿ ಆಯೋಜಿಸಿದ್ದ ಅರಸೀಕೆರೆ ಆರ್ಷ ವಿದ್ಯಾಕೇಂದ್ರದ 31ನೇ ವಾರ್ಷಿಕ ಸಮಾರಂಭ ಹಾಗೂ ಶ್ರೀಗಳ 78ನೇ ವರ್ಧಂತಿ ಅಂಗವಾಗಿ ಸರ್ವೇಶ್ವರ ಸ್ವಾಮಿಗೆ ಸಹಸ್ರ ಶಂಖಾಭಿಷೇಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಇಂದು ಜಾತಿ, ಜಾತಿಗಳ ನಡುವೆ ಭಿನ್ನತೆಗಳು ತಲೆ ಎತ್ತುತ್ತಿವೆ. ಇಂಥಹ ಹೊತ್ತಿನಲ್ಲಿ ಸಹೋದರತ್ವ ಬಹಳ ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು.

ತಮ್ಮ ಗುರುಕುಲದಲ್ಲಿ ಸಾವಿರಾರು ಮಕ್ಕಳಿಗೆ ವಿದ್ಯಾದಾನವನ್ನು ಮಾಡಲಾಗುತ್ತಿದೆ. ಅನೇಕ ತಬ್ಬಲಿ ಮಕ್ಕಳು ಇಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಕರಾಟೆ, ಕ್ರೀಡೆ ಮೊದಲಾದ ಸರ್ವತೋಮುಖ ಬೆಳವಣಿಗೆಗೆ ಪೂರಕವಾದ ವಾತಾವರಣವನ್ನು ಸೃಷ್ಟಿಸಿ ಕೊಟ್ಟಿದ್ದೇವೆ. ದಾನಿಗಳ ಸಹಕಾರ ಈ ಮಕ್ಕಳಿಗೆ ಅಗತ್ಯವಾಗಿದೆ ಎಂದರು.

ಕೋಳಗುಂದ ಕೇದಿಗೆ ಮಠದ ಶ್ರೀ ಜಯ ಚಂದ್ರಶೇಖರ ಸ್ವಾಮೀಜಿ ಮಾತನಾಡಿ, ಸಾತ್ವಿಕತೆ ಇಂದು ಮರೆಯಾಗುತ್ತಿದೆ, ಕೆಲ ಸಮಯ ತಮ್ಮ ಸ್ಥಾನವನ್ನು ಮರೆತು ವರ್ತಿಸುವುದನ್ನು ನಾವು ನೋಡುತ್ತಿದ್ದೇವೆ, ನಮ್ಮ ಜನಪ್ರತಿನಿಧಿಗಳು ಸದನದಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದಾರೆ, ಸಂಸ್ಕಾರದ ಕೊರತೆ, ನೈತಿಕ ಶಿಕ್ಷಣದ ಕೊರತೆಯನ್ನು ಇಂದು ಎಲ್ಲೆಡೆ ಕಾಣುತ್ತಿದ್ದೇವೆ, ಬಾಲ್ಯದಿಂದ ಮಕ್ಕಳನ್ನು ಸರಿಯಾಗಿ ಪೋಷಕರು ಗಮನ ಕೊಟ್ಟು ಬೆಳೆಸದೇ ಇದ್ದಲ್ಲಿ ಅವರು ಜೀವನದ ಒಂದು ತಿರುವಿನ ಘಟ್ಟದಲ್ಲಿ ನಿರ್ಣಯ ತೆಗೆದುಕೊಳ್ಳುವಾಗ ಅಜಾಗರೂಕರಾಗುವುದನ್ನು ನೋಡಿದ್ದೇವೆ. ಶಿಕ್ಷಕರು ಉತ್ತಮ ಗುಣಗಳನ್ನು ನೈತಿಕತೆಯನ್ನು ತುಂಬುವ ಅಗತ್ಯವಿದೆ. ಕೇವಲ ಶಿಕ್ಷಣದಿಂದ ಮಾತ್ರ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲು ಆಗದು, ಸಂಸ್ಕಾರ, ಸಾತ್ವಿಕತೆ, ವ್ಯಕ್ತಿತ್ವವನ್ನೂ ರೂಪಿಸಿಕೊಳ್ಳಬೇಕು ಎಂದರು.

ಪ್ರೀತಿ ಎಂದು ತಂದೆತಾಯಿಂದ ದೂರವಾಗಿ ಅಲ್ಲಿಯೂ ಸುಖ ಕಾಣದ ದುರಂತವನ್ನು ನೋಡುತ್ತೇವೆ. ಆದರೆ ಎಲ್ಲರೂ ಹಾಗೆ ಇರುವುದಿಲ್ಲ, ಕಳೆದ ವರ್ಷ ನಾನೇ ಒಂಬತ್ತು ಅಂತರ್ಜಾತಿ ವಿವಾಹಗಳನ್ನು ಮಾಡಿ ಆಶೀರ್ವದಿಸಿದ್ದೇನೆ, ಎಲ್ಲರೂ ಸಂತೋಷದಿಂದ ಇದ್ದಾರೆ ಎಂದರು. ಅರಸೀಕೆರೆ ಆರ್ಷ ವಿದ್ಯಾರ್ಥಿ ಕೇಂದ್ರ ಉತ್ತಮ ಕಾರ್ಯವನ್ನು ಮಾಡುತ್ತಿದೆ. ಭಗವದ್ಗೀತಾ ಪ್ರಚಾರದಲ್ಲಿ ಶಾಲೆಗಳಿಗೆ ಸ್ವಯಂಸೇವಕರಾಗಿ ತೆರಳಿ ಮಕ್ಕಳಿಗೆ ಹೇಳಿಕೊಡುವಂತಹ ಕಾರ್ಯವನ್ನು ಮಾಡುತ್ತಿದ್ದಾರೆ, ಮಕ್ಕಳಿಗೆ ಇದರ ಅಗತ್ಯವಿದೆ ಎಂದು ಹೇಳಿದರು.

ಅರಸೀಕೆರೆ ಆರ್ಷ ವಿದ್ಯಾ ಕೇಂದ್ರದ ಮುಖ್ಯಸ್ಥೆ ಸುನಿತಾ ಅಶೋಕ್ ಶ್ರೀಗಳ ವರ್ಧಂತಿ ಹಾಗೂ ನಮ್ಮ ಕೇಂದ್ರ 31ನೇ ವಾರ್ಷಿಕ ಸಮಾರಂಭಕ್ಕೆ ಶ್ರೀಗಳು ಆಗಮಿಸಿ ಎಲ್ಲರನ್ನೂ ಆಶೀರ್ವದಿಸಿದ್ದು ಎಲ್ಲರಿಗೂ ಸಂತೋಷವನ್ನು ಉಂಟು ಮಾಡಿದೆ. ಕೇಂದ್ರದ ಸದಸ್ಯರೆಲ್ಲರೂ ಈ ಒಂದು ಕಾರ್ಯಕ್ರಮಕ್ಕಾಗಿ ಬಹಳ ವಿಶೇಷ ಆಸಕ್ತಿಯಿಂದ ಶ್ರಮಿಸಿದ್ದಾರೆ. ಅನೇಕರ ಸಹಕಾರದಿಂದ ಈ ಕಾರ್ಯ ಇಂದು ಯಶಸ್ವಿಯಾಗಿದೆ ಎಂದರು.

ಶ್ರೀ ಸರ್ವೇಶ್ವರ ಸ್ವಾಮಿಗೆ ಸಹಸ್ರ ಶಂಖಾಭಿಷೇಕವನ್ನು ಸರದಿಯಲ್ಲಿ ಭಕ್ತರು ಮಾಡಿದರು. ಹುಬ್ಬಳ್ಳಿ ಕೇಂದ್ರದಿಂದ ಆಗಮಿಸಿದ್ದ ವಿದ್ಯಾರ್ಥಿ ಕಲಾವಿದರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಮನಸೂರೆಗೊಂಡಿತು.