ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವುದು ಅಗತ್ಯ

| Published : Jan 20 2025, 01:30 AM IST

ಸಾರಾಂಶ

ಹೊಸಕೋಟೆ: ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಸಂಸ್ಕಾರ ಸಹಿತ ಮೌಲ್ಯಯುತ ಶಿಕ್ಷಣ ನೀಡುವತ್ತ ಗಮನ ಹರಿಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್ ತಿಳಿಸಿದರು.

ಹೊಸಕೋಟೆ: ಪೋಷಕರು ಹಾಗೂ ಶಿಕ್ಷಕರು ಮಕ್ಕಳಿಗೆ ಸಂಸ್ಕಾರ ಸಹಿತ ಮೌಲ್ಯಯುತ ಶಿಕ್ಷಣ ನೀಡುವತ್ತ ಗಮನ ಹರಿಸಬೇಕಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್ ತಿಳಿಸಿದರು.

ನಗರದ ಮಹದೇವ ಸಮೂಹ ಶಾಲೆಯ ಮೂರನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ವಿಶ್ವದ ಅತ್ಯುತ್ತಮ ಶಿಕ್ಷಣ ನೀಡುವ ರಾಷ್ಟ್ರಗಳ ಸಾಲಿನಲ್ಲಿ ಭಾರತವೂ ಒಂದಾಗಿದೆ. ಆದರೆ ಮಕ್ಕಳಿಗೆ ಶಿಕ್ಷಣದ ಜೊತೆ ನಮ್ಮ ಕಲೆ, ಸಂಸ್ಕೃತಿಯನ್ನು ಕಡೆಗಣಿಸದೆ ಶಿಕ್ಷಣದಲ್ಲಿ ಸೇರಿಸಬೇಕು. ಮಕ್ಕಳಲ್ಲಿ ಪ್ರಶ್ನಿಸುವ ಕಲೆ ರೂಪಿಸಿದರೆ, ವಿಮರ್ಶೆ ಮಾಡುವ ಶಕ್ತಿ ಬೆಳೆಯುತ್ತದೆ. ಇದರಿಂದ ತಮ್ಮ ಜೀವನದ ಗುರಿ ತಲುಪಲು ಸಾಧ್ಯವಾಗುತ್ತದೆ. ಜೀವನದುದ್ದಕ್ಕೂ ಕಲಿಕೆ ಪ್ರತಿಯೊಬ್ಬರಿಗೂ ಅನ್ವಯವಾಗುತ್ತದೆ. ವಿದ್ಯೆ ಕದಿಯಲಾಗದ ಸಂಪತ್ತಾಗಿದ್ದು ಮೊದಲಿನಿಂದಲೇ ವಾಸ್ತವ ಹಾಗೂ ಪ್ರಾಮಾಣಿಕೆತೆಗೆ ಹೆಚ್ಚು ಒತ್ತು ನೀಡಬೇಕು ಎಂದರು.

ಪ್ರಾಂಶುಪಾಲ ರಾಮನಾಥ್ ಮಾತನಾಡಿ, ಮಕ್ಕಳಲ್ಲಿ ಇತ್ತೀಚೆಗೆ ಹೆಚ್ಚಿರುವ ಮೊಬೈಲ್ ಬಳಕೆಯನ್ನು ಪೋಷಕರು ನಿಷ್ಠುರವಾಗಿಯಾದರೂ ನಿಲ್ಲಿಸಲೇಬೇಕು. ಇಲ್ಲವಾದರೆ ಪಠ್ಯ ಕಲಿಕೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುವುದಲ್ಲದೆ ಮಾನಸಿಕ ಹಾಗೂ ದೈಹಿಕ ವಿಕಸನಕ್ಕೆ ಬಾರಿ ಸಮಸ್ಯೆಯುಂಟಾಗುತ್ತದೆ. ಕಲಿಕೆಯಲ್ಲಿ ಆಸಕ್ತಿ ಕಡಿಮೆಯಾಗುತ್ತದೆ. ಮೊಬೈಲ್ ಬಳಕೆ ವ್ಯಸನವಾದ ಮಕ್ಕಳು ಇಂದು ಮಾನಸಿಕ ಆರೋಗ್ಯದ ಜೊತೆ ದೈಹಿಕ ಸಮಸ್ಯೆಯಿಂದ ಬಳಲುತಿದ್ದು ಮುಂದಿನ ದಿನಗಳಲ್ಲಿ ಪೋಷಕರು ಎಚ್ಚರದಿಂದಿರಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಮಂಜು ರಾಣಿ, ಆಡಳಿತ ಮಂಡಳಿ ನಿರ್ದೇಶಕರಾದ ಮಯೂರ್, ಹರೀಶ್, ನವನೀಶ್ವರ್, ಆಡಳಿತಾಧಿಕಾರಿ ರಜನಿ ಇತರರು ಹಾಜರಿದ್ದರು.

ಫೋಟೋ: 19 ಹೆಚ್‌ಎಸ್‌ಕೆ 3

ಹೊಸಕೋಟೆಯ ಮಹದೇವ ಸಮೂಹ ಶಾಲೆಯ 3ನೇ ವಾರ್ಷಿಕೋತ್ಸವವನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ್ ಉದ್ಘಾಟಿಸಿದರು. ಪ್ರಾಂಶುಪಾಲ ರಾಮನಾಥ್, ಮುಖ್ಯ ಶಿಕ್ಷಕಿ ಮಂಜು ರಾಣಿ, ಆಡಳಿತ ಮಂಡಳಿ ನಿರ್ದೇಶಕರಾದ ಮಯೂರ್, ಹರೀಶ್, ನವನೀಶ್ವರ್, ಆಡಳಿತಾಧಿಕಾರಿ ರಜನಿ ಇತರರು ಹಾಜರಿದ್ದರು.