ಸಾರಾಂಶ
ಖಾಸಗಿಯ ಚಾಲಾಕಿತನ ಅರಿಯದ ಪೋಷಕರು । ಸಾಲ ಮಾಡಿ ಇನ್ನೊಬ್ಬರ ಕಿಸೆ ಭರ್ತಿ ಮಾಡುವ ಕೆಲಸ ನಿರಂತರ ಚಿಕ್ಕಪ್ಪನಹಳ್ಳಿ ಷಣ್ಮುಖ
ಕನ್ನಡಪ್ರಭ ವಾರ್ತೆ ಚಿತ್ರದುರ್ಗತಮ್ಮ ಮಗ ಇಲ್ಲವೆ ಮಗಳಿಗೆ ಪ್ರತಿಷ್ಠಿತ ಖಾಸಗಿ ಶಾಲೆಯಲ್ಲಿ ಪ್ರವೇಶ ಪಡೆಯಲು ಇನ್ನಿಲ್ಲದ ಸರ್ಕಸ್ ಮಾಡುವ ಪೋಷಕರಿಗೆ ಪಾಠ ಮಾಡುವ ಮೇಸ್ಟ್ರಿಗೆ ಸಂಬಳ ಕೊಡುತ್ತಾರೆ, ಶಾಲಾ ಕಟ್ಟಡ ಕಟ್ಟಲು ಇಟ್ಟಿಗೆ ಕೊಡಿಸೋರು ನಾವೇ ಎಂಬ ಸೂಕ್ಷ್ಮಗಳು ಪೋಷಕರ ಅಷ್ಟಾಗಿ ಅರಿವಿಗೆ ಬಂದಿಲ್ಲ. ತಮ್ಮ ಮಗನ ಬುದ್ದಿವಂತಿಕೆ, ಜ್ಞಾನವೇ ಖಾಸಗಿ ಶಾಲೆಗಳಿಗೆ ಬಂಡವಾಳ ಎನ್ನುವ ವಾಸ್ತವ ಕೂಡ ಇವರಿಗೆ ಅರಿತಿಲ್ಲ.
ದಾಖಲಾತಿಗೆ ಸಂಬಂಧಿಸಿದಂತೆ ಶುಲ್ಕ ಪಡೆಯಲು ನೋಟಿಸ್ ಬೋರ್ಡ್‌ನಲ್ಲಿ ನಮೂದಿಸಬೇಕಾದ ಅಂಶಗಳ ಗಮನಿಸದರೆ ಶಾಲೆ ಬೋರ್ಡ್ ಮಾತ್ರ ಅವರದ್ದು, ಉಳಿದದ್ದೆಲ್ಲ ನಮ್ಮದು ಎಂಬ ಸಂಗತಿ ತಕ್ಷಣ ಅರಿವಿಗೆ ಬರುತ್ತದೆ. ಪೋಷಕರು ತಮ್ಮ ಮಗನಿಗೆ ಕಟ್ಟುವ ಶುಲ್ಕದಲ್ಲಿ ಶಿಕ್ಷಕರಿಗೆ ಪಾವತಿಸುವ ವೇತನ ಸೇರಿರುತ್ತದೆ. ಅಭಿವೃದ್ದಿ ಶುಲ್ಕದಲ್ಲಿ ಕಟ್ಟಡ ನಿರ್ಮಾಣದ ಇಟ್ಟಿಗೆ ಖರೀದಿ ಇರುತ್ತದೆ. ಬಸ್ ಚಾರ್ಜ್, ಯೂನಿಫಾರಂ, ಜವಾನನ ಸಂಬಳ, ಗುಮಾಸ್ತನ ವೇತನ ಎಲ್ಲವನ್ನು ಪೋಷಕರೇ ಪಾವತಿ ಮಾಡಬೇಕು.ಶುಲ್ಕ ನಿಗದಿಯ ಸ್ವರೂಪ ಇವೆಲ್ಲವನ್ನು ಒಳಗೊಂಡಿದೆ.ಖಾಸಗಿ ಶಾಲೆಗಳಿಗೆ ಪ್ರವೇಶ ಪಡೆಯಲು ಹೋದರೆ ಬಂದವರೆಲ್ಲರಿಗೂ ಅಡ್ಮಿಷನ್ ಕೊಡುವುದಿಲ್ಲ. ಹುಡುಗ, ಹುಡುಗಿ ಬುದ್ದಿವಂತರು ಹೌದೋ ಅಲ್ಲವೋ ಎಂಬ ಪರೀಕ್ಷೆ ಆರಂಭವಾಗುತ್ತದೆ. ಎಂಟನೇ ತರಗತಿಗೆ ಅಡ್ಮಿಷನ್ ಆಗುವಾಗ ಅಂಕಪಟ್ಟಿ ಮಾನದಂಡವಾಗಿ ಪರಿಗಣಿಸಲಾಗುತ್ತದೆ. ವಿದ್ಯಾರ್ಥಿ ಬುದ್ದಿವಂತನಾಗಿದ್ದರೆ, ಕೆಳ ಹಂತದ ಪರೀಕ್ಷೆಯಲ್ಲಿ ಶೇ.85ಕ್ಕಿಂತಲೂ ಹೆಚ್ಚು ಅಂಕ ಪಡೆದಿದ್ದರೆ ಮಾತ್ರ ಪ್ರವೇಶಕ್ಕಾಗಿ ಪರಿಗಣಿಸಲಾಗುತ್ತಿದೆ. ಶೇ.35 ಅಂಕ ಪಡೆದವರನ್ನು ಖಾಸಗಿ ಶಾಲೆಗಳು ಗೇಟ್ ಒಳಗೆ ಬಿಟ್ಟುಕೊಳ್ಳುವುದಿಲ್ಲ.
ಅನುದಾನ ರಹಿತ ಶಾಲೆಗಳು ಶುಲ್ಕ ನಿಗದಿ ಮಾಡಲು ಪ್ರಮುಖವಾಗಿ ಸರ್ಕಾರೇತರ ಶುಲ್ಕ, ಬೋಧನಾ ಶುಲ್ಕ, ವಿಶೇಷ ಅಭಿವೃದ್ದಿ ಶುಲ್ಕಗಳೆಂದು ಪ್ರತ್ಯೇಕವಾಗಿ ವಿಂಗಡಿಸಲಾಗಿದೆ. ಬೋಧನಾ ಶುಲ್ಕಕ್ಕೆ ವಿಧಿಸಲಾದ ಮಾನದಂಡಗಳು ಶಿಕ್ಷಕರ ವೇತನಕ್ಕೆ ಸಂಬಂಧಿಸಿದ್ದಾಗಿದೆ. ಕಳೆದ ವರ್ಷ ಪಾವತಿಸಿದ ವೇತನ ಹಾಗೂ ಅದಕ್ಕೆ ಪ್ರತಿಶತ 80ರಷ್ಟು ಹಣವನ್ನು ಸೇರಿಸಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳಿಂದ ಭಾಗಿಸಿದಾಗ ಬರುವ ಮೊತ್ತವ ಬೋಧನಾ ಶುಲ್ಕವಾಗಿ ಪರಿಗಣಿಸಲಾಗುತ್ತದೆ.ಉದಾಹರಣೆಗೆ ಕಳೆದ ಸಾಲಿನಲ್ಲಿ ಅಂದರೆ 2023-24 ನೇ ಸಾಲಿನಲ್ಲಿ ಯಾವುದೇ ಖಾಸಗಿ ಶಾಲೆ 10 ಲಕ್ಷ ರುಪಾಯಿ ವೇತನ ಪಾವತಿಸಿದ್ದರೆ ಆ ಮೊತ್ತಕ್ಕೆ ಶೇ.80ರಷ್ಟು ಸೇರಿಸಿದರೆ ಆ ಮೊತ್ತ 18 ಲಕ್ಷ ರು. ಆಗುತ್ತದೆ. ಕಳೆದ ಸಾಲಿನಲ್ಲಿ 100 ಮಂದಿ ಮಕ್ಕಳು ವ್ಯಾಸಂಗ ಮಾಡಿದ್ದರೆ18 ಲಕ್ಷ ರು.ನ ಭಾಗಾಕಾರ ಮಾಡಿದ್ದಲ್ಲಿ ಪ್ರತಿ ಮಗುವಿಗೆ ಬೋಧನಾ ಶುಲ್ಕ 18 ಸಾವಿರ ರು. ಆಗುತ್ತದೆ. ವಿದ್ಯಾರ್ಥಿಗಳ ಸಂಖ್ಯೆ ಜಾಸ್ತಿಯಾಗಿದ್ದಲ್ಲಿ ಸಹಜವಾಗಿಯೇ ಬೋಧನಾ ಶುಲ್ಕದ ಪ್ರಮಾಣ ಕಡಿಮೆ ಆಗಬೇಕು. ಆದರೆ ಇದು ಸಾಧ್ಯವಾಗದೇ ಹೋಗಿದ್ದು, 100 ಮಂದಿ ವಿದ್ಯಾರ್ಥಿಗಳಿಗೆ ಅನ್ವಯಿಸಿ ಬೋಧನಾ ಶುಲ್ಕ ವಸೂಲಿ ನಡೆದಿದೆ. ಅಂದರೆ ಶಾಲೆಯಲ್ಲಿ ಪಾಠ ಮಾಡುವ ಶಿಕ್ಷಕರಿಗೆ ವಿದ್ಯಾರ್ಥಿಗಳೇ ವೇತನ ಪಾವತಿಸಿದಂತಾಯಿತು.
ಬುದ್ದಿವಂತ ಮಕ್ಕಳು ಸಾಧಾರಣವಾದರೆ ಅವರನ್ನು ಶಾಲೆಯಿಂದ ಹೊರ ಹಾಕಲಾಗುತ್ತದೆ. ಮಕ್ಕಳು ಸಾಧಾರಣವಾದುದಕ್ಕೆ ಶಾಲಾ ಆಡಳಿತ ಮಂಡಳಿ ಜವಾಬ್ದಾರಿ ಹೊತ್ತಿರುವುದು ಎಲ್ಲಿಯೂ ಗೋಚರಿಸದು.ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಶುಲ್ಕ ವಸೂಲು ಮಾಡಿದರೆ ಯಾವುದೇ ಕಾರಣಕ್ಕೂ ಸಹಿಸಲಾಗದು. ಪ್ರವೇಶಾತಿಯಲ್ಲಿಯೂ ಮೀಸಲಾತಿ ಕೊಡಲೇಬೇಕು. ಉಲ್ಲಂಘಿಸಿದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಶಿಕ್ಷಣ ನಿಯಂತ್ರಣ ಪ್ರಾಧಿಕಾರಕ್ಕೆ ದೂರು ನೀಡಲಾಗುವುದು.
ಮಂಜುನಾಥ್, ಡಿಡಿಪಿಐ, ಚಿತ್ರದುರ್ಗ.