ಸಾರಾಂಶ
ಲಕ್ಷ್ಮೇಶ್ವರ: ಪ್ರತಿನಿತ್ಯ ನಮ್ಮ ಜೀವನದಲ್ಲಿ ನಡೆಯುವ ಚಟುವಟಿಕೆಯಲ್ಲಿ ಹಣದ ಪಾತ್ರವೇನು ಎಂಬುದನ್ನು ಮಕ್ಕಳಿಗೆ ತಿಳಿಸಿಕೊಡುವ ಉದ್ದೇಶದಿಂದ ಮಕ್ಕಳ ಸಂತೆ ಏರ್ಪಡಿಸಲಾಗಿದೆ ಎಂದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್. ಹರ್ಲಾಪುರ ಹೇಳಿದರು.
ಬುಧವಾರ ಸಮೀಪದ ಅಡರಕಟ್ಟಿ ಗ್ರಾಮದಲ್ಲಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ ಹಾಗೂ ಮಕ್ಕಳ ಸಂತೆ ಉದ್ಘಾಟಿಸಿ ಮಾತನಾಡಿದರು.ಮಕ್ಕಳ ಜ್ಞಾನಕ್ಕೆ ಮೆಟ್ರಿಕ್ ಮೇಳ ನಿಜ ಜೀವನದಲ್ಲಿ ನಡೆಯುತ್ತಿರುವ ವ್ಯವಹಾರ ತಿಳಿಯಲು ಈ ಸಂತೆ ಸಹಾಯಕವಾಗಿದೆ. ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 1-7ನೇ ವರ್ಗದಲ್ಲಿ ಕಲಿಯುತ್ತಿರುವ 200 ಮಕ್ಕಳ ಪೈಕಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂತೆಯಲ್ಲಿ ಪಾಲ್ಗೊಂಡು ವ್ಯಾಪಾರ ವಹಿವಾಟು ನಡೆಸುತ್ತಿರುವುದು ಅಚ್ಚರಿಯಾಗಿದೆ ಎಂದರು.
ಮಕ್ಕಳು ತರಕಾರಿ, ಕಿರಾಣಿ, ಆಟಿಕೆ,ಸಿದ್ಧ ಉಡುಪು ಸೇರಿದಂತೆ ಇತರೆ ಸಾಮಾನು ಸಂತೆಯಲ್ಲಿ ವ್ಯಾಪಾರಸ್ಥರು ಮಾರಾಟ ಮಾಡುವಂತೆ ಮಾಡಿದ್ದು ವಿಶೇಷವಾಗಿತ್ತು, ಅದರಲ್ಲೂ ವ್ಯಾಪಾರ ಮಾಡುತ್ತಿದ್ದ ಮಕ್ಕಳ ಗ್ರಾಹಕರನ್ನು ಕರೆಯುತ್ತಿದ್ದ ರೀತಿ ಅಚ್ಚರಿ ಮೂಡಿಸುವಂತಿತ್ತು. ಶಾಲೆಯ ಆವರಣದಲ್ಲಿ ಈರುಳ್ಳಿ, ಬೀನ್ಸ್, ಚವಳಿ ಕಾಯಿ, ಹಣ್ಣು ಹಂಪಲು ಮತ್ತು ಎಗ್‌ರೈಸ್ ತಿನಿಸು ಸೇರಿದಂತೆ ಎಲ್ಲ ರೀತಿಯ ತರಕಾರಿ ಸೊಪ್ಪು ಮಕ್ಕಳ ಮಾರಾಟ ಮಾಡುತ್ತಿದ್ದ ರೀತಿಗೆ ಪಾಲಕರು ಮತ್ತು ಶಿಕ್ಷಕರು ಬೆರಗಾಗಿದ್ದರು. ಗ್ರಾಮದ ನಿವಾಸಿಗಳು ಸಂತೆಗೆ ಬಂದು ತಮಗೆ ಬೇಕಾದ ವಸ್ತು ಖರೀದಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡಿದ್ದು ಕಂಡು ಬಂದಿತು.ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷೆ ಜಯಶ್ರೀ ಭಂಗಿ, ಮುಖ್ಯ ಶಿಕ್ಷಕಿ ಎಸ್.ಎಚ್. ಉಮಚಗಿ, ಸಿಆರ್‌ಪಿ ಶಿವಾನಂದ ಅಸುಂಡಿ, ಪ್ರಧಾನ ಕಾರ್ಯದರ್ಶಿ ಚಂದ್ರು ನೇಕಾರ, ಖಜಾಂಚಿ ಬಿ.ಬಿ.ಯತ್ನಳ್ಳಿ, ಉಪಾಧ್ಯಕ್ಷೆ ಎಲ್.ಎನ್.ನಂದೆಣ್ಣವರ, ಡಿ.ಡಿ. ಲಮಾಣಿ, ಜಿಲ್ಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ.ಎಸ್. ಹಿರೇಮಠ, ಮಹಾಂತೇಶ ಹವಳದ, ರವಿಕುಮಾರ ದೇವರಮನಿ, ಮೌನೇಶ ಶಿರಹಟ್ಟಿ ಹಾಗೂ ಶಾಲಾ ಸಿಬ್ಬಂದಿ ಹಾಗೂ, ರಂಭಾಪುರಿ ಪ್ರೌಢಶಾಲೆಯ ಪ್ರಧಾನ ಗುರುಮಾತೆ, ಎಸ್‌ಡಿಎಂಸಿ ಸದಸ್ಯರು, ಗ್ರಾಮದ ಗಣ್ಯರು, ಶಿಕ್ಷಣ ಪ್ರೇಮಿ, ತಾಯಂದಿರು ಮಕ್ಕಳು ಹಾಜರಿದ್ದರು.