ಮಕ್ಕಳು ತಮ್ಮ ಬಾಲ್ಯದ ಜೀವನ ಕೇವಲ ಆಟೋಟಗಳಿಗೆ ಸೀಮಿತಗೊಳಿಸದೆ,ತಮ್ಮ ಭವಿಷ್ಯ ಗಮನದಲ್ಲಿಟ್ಟುಕೊಂಡು ಆಟೋಟಗಳ ಜತೆಗೆ ವಿದ್ಯಾಭ್ಯಾಸ, ಸಂಗೀತ, ಕಲೆ, ಮಾತುಗಾರಿಕೆಯ ಜತೆಗೆ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು

ಕೊಪ್ಪಳ: ಮಕ್ಕಳಿಗೆ ಬಾಲ್ಯದ ಹಂತದಲ್ಲಿಯೇ ಬಹುಮುಖಿ ಪ್ರತಿಭೆ ಬೆಳೆಸಿಕೊಳ್ಳಲು ಮತ್ತು ಆಸಕ್ತಿಗಳಿಗೆ ಅನುಗುಣವಾಗಿ ತರಬೇತಿ ನೀಡುವುದರಿಂದ ಅವರ ಉತ್ತಮ ಭವಿಷ್ಯ ರೂಪಿಸಲು ಸಾಧ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.

ಅವರು ಶುಕ್ರವಾರ ಕೊಪ್ಪಳ ನಗರದ ಹೊಸಪೇಟ ರಸ್ತೆಯ ಅಗ್ನಿಶಾಮಕ ಠಾಣೆಯ ಹತ್ತಿರದ ಕಲ್ವಾರಿ ಚಾಪೆಲ್ ಟ್ರಸ್ಟ್ ಆವರಣದಲ್ಲಿ ಆಯೋಜಿಸಲಾಗಿದ್ದ ನಮ್ಮ ಮಕ್ಕಳ ದಿನಾಚರಣೆ-2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ತಮ್ಮ ಬಾಲ್ಯದ ಜೀವನ ಕೇವಲ ಆಟೋಟಗಳಿಗೆ ಸೀಮಿತಗೊಳಿಸದೆ,ತಮ್ಮ ಭವಿಷ್ಯ ಗಮನದಲ್ಲಿಟ್ಟುಕೊಂಡು ಆಟೋಟಗಳ ಜತೆಗೆ ವಿದ್ಯಾಭ್ಯಾಸ, ಸಂಗೀತ, ಕಲೆ, ಮಾತುಗಾರಿಕೆಯ ಜತೆಗೆ ತಮ್ಮ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ. ಅವರವರ ಇಚ್ಛೆಯ ಮೇರೆಗೆ ಒಂದೊಂದು ವೃತ್ತಿ ಆರಿಸಿಕೊಳ್ಳಬಹುದು. ಪ್ರತಿಯೊಬ್ಬ ಮಗುವಿಗೂ ವಿಭಿನ್ನ ಆಸಕ್ತಿಗಳಿದ್ದು, ಅದನ್ನು ಗುರುತಿಸಬೇಕು. ಕೆಲವರಿಗೆ ಓದುವುದರಲ್ಲಿ ಆಸಕ್ತಿ ಕಡಿಮೆ ಇದ್ದರೂ ಅವರಿಗೆ ಬೇರೆ ಕ್ಷೇತ್ರಗಳಲ್ಲಿ ಅಪಾರ ಆಸಕ್ತಿ ಇರುತ್ತದೆ. ಉದಾಹರಣೆಗೆ, ಆಟ,ಸಾಹಿತ್ಯ, ಚಿತ್ರಕಲೆಯಲ್ಲಿ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಹೆಚ್ಚಿದೆಯೊ ಅವರನ್ನು ಅದರಲ್ಲಿ ಹೆಚ್ಚಾಗಿ ತೊಡಗಿಸಿ ಭವಿಷ್ಯ ರೂಪಿಸಬೇಕು ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಮಾತನಾಡಿ, ಮಕ್ಕಳ ದಿನಾಚರಣೆ ಪ್ರಯುಕ್ತ ಇಂದು ನಮ್ಮ ಮಕ್ಕಳ ದಿನಾಚರಣೆ ಎನ್ನುವ ಅಂಶದೊಂದಿಗೆ ಕಾರ್ಯಕ್ರಮ ಮಾಡಲಾಗುತ್ತಿದೆ. ಮಕ್ಕಳ ಕೈಯಲ್ಲಿ ನಿರೂಪಣೆ ಮಾಡಿಸಿ ಅವರಿಗೆ ವೇದಿಕೆ ಭಯ ಹೋಗಲಾಡಿಸಲು ಒಂದು ಪ್ರಯತ್ನ ಮಾಡಿರುವುದು ಸಂತೋಷವಾಗಿದೆ. ಈ ಒಂದು ಕಾರ್ಯಕ್ರಮದ ಮೂಲಕ ಎಲ್ಲ ಮಕ್ಕಳಿಗೆ ಉತ್ತಮ ಭವಿಷ್ಯದ ಕಲ್ಪನೆ ಮೂಡಿಸುವಲ್ಲಿ ಒಂದು ಒಳ್ಳೆಯ ಪ್ರಯತ್ನವಾಗಿದೆ ಎಂದು ಹೇಳಿದರು.

ಸರ್ಕಾರದಿಂದ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಬೇರೆ ಬೇರೆ ರೀತಿಯ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ಯೋಜನೆಗಳ ಜಾರಿಗೆ ಎನ್.ಜಿ.ಓ ಸಂಸ್ಥೆಗಳು ಶ್ರಮಿಸುತ್ತಿವೆ. ಮಕ್ಕಳು ಸರ್ಕಾರದ ಯೋಜನೆ ಉಪಯೋಗಿಸಿಕೊಂಡು ತಮ್ಮ ಮುಂದಿನ ಭವಿಷ್ಯ ಉತ್ತಮ ರೀತಿಯಲ್ಲಿ ರೂಪಿಸಿಕೊಳ್ಳಬೇಕು. ಮಕ್ಕಳು ಓದುವುದರ ಜತೆಗೆ ಇತರೆ ಕಲಾತ್ಮಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಉತ್ತಮ ಮಾತುಗಾರಿಕೆ ರೂಪಿಸಿಕೊಂಡು ಭವಿಷ್ಯದಲ್ಲಿ ಒಳ್ಳೆಯ ವಾಗ್ಮಿಗಳಾಗಿರಿ ಎಂದು ತಿಳಿಸಿದರು.

ಮಮತೆಯ ತೊಟ್ಟಿಲಿಗೆ ಚಾಲನೆ:

ಕೊಪ್ಪಳ ನಗರದ ಹೊಸಪೇಟೆ ರಸ್ತೆಯ ಕಲ್ವಾರಿ ಚಾಪೆಲ್ ಟ್ರಸ್ಟ್‌ನ ಮುಂಭಾಗದಲ್ಲಿ ಸ್ಥಾಪಿಸಲಾದ ಮಮತೆಯ ತೊಟ್ಟಿಲಿಗೆ ಕೊಪ್ಪಳ ಜಿಲ್ಲಾಧಿಕಾರಿ ಡಾ. ಸುರೇಶ ಬಿ.ಇಟ್ನಾಳ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ ಚಾಲನೆ ನೀಡಿ ಮಕ್ಕಳ ಕಲಿಕಾ ಚಟುವಟಿಕೆಗಳ ವಸ್ತು ಪ್ರದರ್ಶನ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಕೊಪ್ಪಳ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತ್ ಕುಮಾರ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪಿ.ವೈ. ಶೆಟ್ಟೆಪ್ಪನವರ್, ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮಹಾಂತಸ್ವಾಮಿ ಪೂಜಾರ, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆಯ ಪ್ರಾದೇಶಿಕ ಸಂಯೋಜಕ ಡಾ.ಕೆ. ರಾಘವೇಂದ್ರ ಭಟ್, ಯುನಿಸೆಫ್-ಮಕ್ಕಳ ರಕ್ಷಣಾ ಯೋಜನೆ ಕೊಪ್ಪಳದ ವ್ಯವಸ್ಥಾಪಕ ಹರೀಶ್ ಜೋಗಿ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ವಿಠ್ಠಲ್ ಬಿ.ಜಾಬಗೌಡರ ಸೇರಿದಂತೆ ಮತ್ತಿತರೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.