ಸಾರಾಂಶ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು
ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆ ಅನಾವರಣಗೊಳಿಸಲು ಶಿಕ್ಷಕರು ಹಾಗೂ ಪಾಲಕರು ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಕರೆ ನೀಡಿದರು.ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಹಯೋಗದಲ್ಲಿ ಪ್ರೈಡ್ ಯುರೋ ಶಾಲೆಯಲ್ಲಿ ನಡೆದ ಚಿಕ್ಕಮಗಳೂರು ಬಿ ವಲಯ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳು ಅನೇಕ ಅವಕಾಶಗಳಿಂದ ವಂಚಿತರಾಗುವುದು ಕಾಣುತ್ತಿದ್ದೇವೆ. ಆ ನಿಟ್ಟಿನಲ್ಲಿ ನಗರ ಸೇರಿದಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿ ಗಳಿಗೆ ಪ್ರತಿಭೆ ಮುಕ್ತವಾಗಿ ಹೊರ ಹೊಮ್ಮಲು ಪ್ರತಿಭಾ ವೇದಿಕೆ ಸೃಷ್ಟಿಸುವ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದರು.ಕಲೆ, ಸಂಗೀತ, ನಾಟಕ, ಸಾಹಿತ್ಯ, ನೃತ್ಯ ಸೇರಿದಂತೆ ವಿವಿಧ ಬಗೆಯ ಶೈಲಿಯಲ್ಲಿ ವಿದ್ಯಾರ್ಥಿಗಳು ಆಸಕ್ತಿ ಹೊಂದಿರುತ್ತಾರೆ. ಇವುಗಳನ್ನು ಸಮಾಜದ ಮುಂದಿಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಹೀಗಾಗಿ ಆಸಕ್ತಿ ಹೊಂದಿದ ಮಕ್ಕಳನ್ನು ಆಯ್ಕೆಗೊಳಿಸಿ ಪ್ರೇರೇಪಿಸಬೇಕು ಎಂದು ಹೇಳಿದರು.ವಿದ್ಯಾರ್ಥಿಗಳು ಯಾವುದೇ ಅಂಜಿಕೆಯಿಲ್ಲದೇ ಪ್ರತಿಭೆ ಅನಾವರಣಕ್ಕೆ ಮುಂದಾದರೆ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಆಯ್ಕೆಗೊಂಡು ಉತ್ತಮ ಹೆಸರು ಗಳಿಸಬಹುದು ಎಂದ ಅವರು, ಆ ನಿಟ್ಟಿನಲ್ಲಿ ಶಿಕ್ಷಕರು ಅರ್ಥಪೂರ್ಣವಾಗಿ ಮಕ್ಕಳಿಗೆ ಅಭ್ಯಾಸಿಸಬೇಕು ಎಂದು ಕಿವಿಮಾತು ಹೇಳಿದರು.ಬಿಇಓ ಕಚೇರಿ ಶಿಕ್ಷಣ ಸಂಯೋಜಕ ಟಿ.ಕೆ.ಜಿ.ಅರಸ್ ಮಾತನಾಡಿ, ಎಚ್.ಜಿ. ಗೋವಿಂದೇಗೌಡರು ಸಚಿವರಾದ ವೇಳೆಯಲ್ಲಿ ಪ್ರಪ್ರಥಮ ಬಾರಿಗೆ ಚಿಕ್ಕಮಗಳೂರಿನಲ್ಲಿ ಪ್ರತಿಭಾ ಕಾರಂಜಿ ಆಯೋಜಿಸಲಾಗಿತ್ತು. ಇದೀಗ ರಾಜ್ಯಾದ್ಯಂತ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿದೆ ಎಂದರು.
ವಲಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡವರು ತಾಲೂಕು ಮಟ್ಟಕ್ಕೆ ಆಯ್ಕೆಗೊಳ್ಳಲಿದ್ದಾರೆ. ಕಳೆದ ಬಾರಿ ಕೂಡಾ ಜಿಲ್ಲೆಯಿಂದ ಅನೇಕ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ಮನ್ನಣೆ ಗಳಿಸಿದ್ದು ಈ ಬಾರಿ ಭಾಗವಹಿಸಿ ಜಿಲ್ಲೆಗೆ ಉತ್ತಮ ಹೆಸರು ತರಬೇಕು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರೈಡ್ ಯುರೋ ಶಾಲೆ ಮುಖ್ಯೋಪಾಧ್ಯಾಯ ಮಂಜುನಾಥ್, ವಿದ್ಯಾರ್ಥಿಗಳ ಕನಸನ್ನು ನನಸು ಗೊಳಿಸುವ ನಿಟ್ಟಿನಲ್ಲಿ ಪ್ರತಿಭಾ ಕಾರಂಜಿಯನ್ನು ತಮ್ಮ ಶಾಲೆಯಲ್ಲಿ ಆಯೋಜಿಸಿ ಪ್ರೋತ್ಸಾಹಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಆರ್.ಪಿ.ಪೂರ್ಣೇಶ್, ಪಿಎಂ ಪೋಷಣ್‌ನ ಸಹಾಯಕ ನಿರ್ದೇಶಕ ನೀಲಕಂಠಪ್ಪ, ಸರ್ಕಾರಿ ನೌಕರರ ಸಂಘದ ನಿರ್ದೇಶಕ ಸಿದ್ದಮೂರ್ತಿ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಉಮೇಶ್ ಇದ್ದರು. ಹಿಮಗಿರಿ ಪ್ರಾರ್ಥಿಸಿದರು. ಆಶಾ ರಾಜು ನಿರೂಪಿಸಿದರು. ಶಿಕ್ಷಕಿ ತನುಜಾ ನಟರಾಜ್ ಸ್ವಾಗತಿಸಿದರು. 3 ಕೆಸಿಕೆಎಂ 4ಚಿಕ್ಕಮಗಳೂರು ಬಿ ವಲಯ ಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಉದ್ಘಾಟಿಸಿದರು.