ಸಾರಾಂಶ
ಕನ್ನಡಪ್ರಭ ವಾರ್ತೆ ಬೀಳಗಿ
ಮಕ್ಕಳ ಪ್ರತಿಭೆ ಅನಾವರಣಗೊಳಿಸುವುದೇ ಪ್ರತಿಭಾ ಕಾರಂಜಿ ಮುಖ್ಯ ಉದ್ದೇಶವಾಗಿದೆ. ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ಮತ್ತು ಗೌರವ ನೀಡುವ ಕೆಲಸ ನಡೆಯಬೇಕಾಗಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ.ಪಾಟೀಲ ಹೇಳಿದರು.ಇಲ್ಲಿಯ ಬೀಳಗಿ ಕ್ರಾಸ್ ಎಕ್ಸಪರ್ಟ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಸೋಮವಾರ ನಡೆದ ಜಿಲ್ಲಾ ಪಂಚಾಯತ್, ಶಿಕ್ಷಣ ಇಲಾಖೆ ಹಾಗೂ ಎಕ್ಸಪರ್ಟ್ ಇಂಟರ್ ನ್ಯಾಷನಲ್ ಶಾಲೆಯ ಆಶ್ರಯದಲ್ಲಿ ತಾಲೂಕುಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ 2024-25 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಭಾ ಕಾರಂಜಿವು ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಹೊಸ ಜೀವನ ಕೌಶಲ್ಯ ಹೊಂದಲು ವೇದಿಕೆಯಾಗಿದೆ. ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸಿ ಹೊರತರಲು ಶಿಕ್ಷಕರಿಗೆ ಅವಕಾಶವ ನೀಡುತ್ತದೆ. ನೈಜ ಪ್ರತಿಭೆ ಪ್ರದರ್ಶನ ಮಾಡಿದ ಮಕ್ಕಳಿಗೆ ಅನ್ಯಾಯವಾಗದಂತೆ ನಿರ್ಣಯ ನೀಡಬೇಕು. ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ರೂಪಿಸಲು ಶಿಕ್ಷಕರ ಮತ್ತು ಪೋಷಕರ ಪಾತ್ರ ಬಹಳ ಮುಖ್ಯ. ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕಾರ ಕೊಡುವುದು ಶಿಕ್ಷರು ಹಾಗೂ ಪಾಲಕರು ಮಾಡಬೇಕಾಗಿದೆ ಎಂದರು.
ನಮ್ಮ ದೇಶದಲ್ಲಿನ ಸಾಂಸ್ಕೃತಿಕ ಹಾಗೂ ಸಂಸ್ಕಾರಕ್ಕೆ ಯಾವ ದೇಶವು ಸಾಟಿಯಿಲ್ಲ. ಆದರೆ ಅಭಿವೃದ್ಧಿಯಲ್ಲಿ ಪಾಶ್ಚಿಮಾತ್ಯ ದೇಶದತ್ತ ಹೋಗಲು ನಮಗೆ ಸಾಧ್ಯವಿಲ್ಲ. ಅಲ್ಲಿಯ ಮೂಲಭೂತ ಸೌಲಭ್ಯಗಳು ಕೊಡಬಹುದು. ಆದರೆ ನಮ್ಮಲ್ಲಿ ಅದಕ್ಕೆ 5ಐದು ನೂರು ವರ್ಷ ಬೇಕಾಗುತ್ತದೆ. ನಾವು ಸರಕಾರದ ಮೇಲೆ ಅವಲಂಬಿತರಾಗಿದ್ದೇವೆ. ಇದು ನಮ್ಮ ದೇಶದ ಹಾಗೂ ರಾಜ್ಯದ ದುರ್ದೈವ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್.ಆದಾಪೂರ ಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಡಿ.ಕೆ.ಚಿಕ್ಕಗಲಗಲಿ, ಕ್ಷೇತ್ರ ಸಮನ್ವಯಾಧಿಕಾರಿ ಶಿವಾಜಿ ಕಾಂಬಳೆ, ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಎಚ್.ಟಿ.ಸಣಗೌಡ್ರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಸ್.ವ್ಹಿ.ಪಾಟೀಲ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಜಿಲ್ಲಾಧ್ಯಕ್ಷ ಎಚ್.ಜಿ.ತಿಪರಡ್ಡಿ, ಪ್ರೌಢಶಾಲೆ ತಾಲೂಕು ಘಟಕ ಅಧ್ಯಕ್ಷ ಪರಶುರಾಮ ಮಾದರ, ಸಂಸ್ಥೆಯ ಕಾರ್ಯದರ್ಶಿ ಸಮೀರ ಚಿಕ್ಕಗಲಗಲಿ ಇತರರು ಇದ್ದರು.ಎಲ್ಲಿಯವರೆಗೆ ಜನರು ಸರ್ಕಾರದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲವೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿ ಯಶಸ್ವಿಯಾಗುವುದಿಲ್ಲ. ಎಲ್ಲರೂ ಜಾತಿ, ಧರ್ಮ ಮೆಟ್ಟಿ ದೇಶದ ಹಾಗೂ ನಾಡಿನ ಅಭಿವೃದ್ಧಿ ಚಿಂತನೆ ಮಾಡಬೇಕಾಗಿದೆ. ರಾಜಕಾರಣಿಗಳು ಇವತ್ತು ಜನ ಸಮುದಾಯ ಒಡೆಯುವ ಕೆಲಸ ಮಾಡುತ್ತಿದ್ದು ಆತಂಕಕಾರಿ ಬೆಳವಣೆಗೆ.
ಜೆ.ಟಿ.ಪಾಟೀಲ್, ಶಾಸಕರು ಬೀಳಗಿ