ರಾಮನಗರ: ವಿದ್ಯಾರ್ಥಿ ದಿಸೆಯಲ್ಲಿ ನಾಟಕ, ಸಂಗೀತ, ನೃತ್ಯದಂತಹ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಂಡ ಮಕ್ಕಳು ದೊಡ್ಡ ಸಾಧಕರಾಗಿ ಹೊರಹೊಮ್ಮಿದ್ದಾರೆ ಎಂಬುದನ್ನು ಇತಿಹಾಸ ಸಾಬೀತು ಪಡಿಸಿದೆ. ಹಾಗಾಗಿ ಪೋಷಕರು ತಮ್ಮ ಮಕ್ಕಳ ಆಸಕ್ತಿಯನ್ನು ಗಮನಿಸಿ ಅವರಿಗೆ ಪಾರಂಪರಿಕ ಶಿಕ್ಷಣದ ಜೊತೆಗೆ ಅನೌಪಚಾರಿಕ ಶಿಕ್ಷಣವನ್ನೂ ಪ್ರೋತ್ಸಾಹಿಸಬೇಕು ಎಂದು ಜಾನಪದ ವಿದ್ವಾಂಸ ಡಾ. ಎಂ.ಬೈರೇಗೌಡ ಹೇಳಿದರು.
ಕೆರೆಮೇಗಳದೊಡ್ಡಿ ಬಳಿಯ ಮುದ್ದುಶ್ರೀ ದಿಬ್ಬದ ಸಮುಚ್ಛಯದಲ್ಲಿ ನೂತನ ಕೆ.ಎಸ್.ಮುದ್ದಪ್ಪ ಚಿಕ್ಕಮ್ಮ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಪ್ರತಿ ತಿಂಗಳು ನಾಲ್ಕನೇ ಶನಿವಾರ ನಡೆಯುವ `ತಿಂಗಳ ತಳಿರು’ ಶೀರ್ಷಿಕೆಯಲ್ಲಿ ಎ.ಆರ್.ಕೆ. ಕಲ್ಚರಲ್ ಅಂಡ್ ಸ್ಪೋರ್ಟ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ನಡೆಸಿಕೊಟ್ಟ ನೃತ್ಯಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಜಗತ್ತಿನ ಇತಿಹಾಸವನ್ನು ಗಮನಿಸಿದಾಗ ಯಾವುದೇ ದಾರ್ಶನಿಕ ವ್ಯಕ್ತಿತ್ವವನ್ನು ರೂಪಸಿಕೊಂಡವರು ಕೇವಲ ಪಠ್ಯಪುಸ್ತಕಕ್ಕ ಜೋತುಬೀಳದೆ ಪಠ್ಯೇತರ ಓದನ್ನು ಮೈಗೂಡಿಸಿಕೊಂಡವರೇ ಆಗಿದ್ದಾರೆ. ಪರೀಕ್ಷಾ ದೃಷ್ಟಿಯಿಂದ ಓದುವ ಮಕ್ಕಳಿಗೂ, ಅದರಾಚೆಗೂ ಓದುವ ಮಕ್ಕಳಿಗೂ ಇರುವ ವ್ಯತ್ಯಾಸವನ್ನು ಗಮನಿಸಿದರೆ ಪಠ್ಯೇತರ ಓದನ್ನು ಅಳವಡಿಸಿಕೊಂಡಿರುವವರ ಸಾಧನೆಯೇ ದೊಡ್ಡದು. ಈ ವಿಚಾರಗಳನ್ನು ಮನನ ಮಾಡಿಕೊಂಡು ಆಸಕ್ತ ಮಕ್ಕಳನ್ನು ಅವರವರ ಆಸಕ್ತಿಯನ್ನು ಗುರುತಿಸಿ, ಅಂತಹ ತರಬೇತಿಗಳನ್ನು ಕೊಡಿಸಿದರೆ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬಲ್ಲರು. ಹಾಗೆಯೇ ಉತ್ತಮ ಜೀವನ ನಿರ್ವಹಣೆಯ ಕಲೆಯನ್ನೂ ಅರಿಯಬಲ್ಲರು ಎಂದರು.
ಅತಿಥಿಗಳಾಗಿದ್ದ ರಂಗನಟ ಎ.ಆರ್. ರವಿಕುಮಾರ್ ಮಾತನಾಡಿ, ಮಕ್ಕಳ ಮನಸ್ಸನ್ನು ಅರಿಯದೆ, ಅವರ ಆಶೋತ್ತರಗಳಿಗೆ ಸ್ಪಂದಿಸದೆ, ಸದಾ ಬಲವಂತದಿಂದ ಓದಿ ಶಾಲೆಗೆ ಮೊದಲ ಸ್ಥಾನದಲ್ಲಿ ನೀನಿರಬೇಕೆಂಬ ಪ್ರಕ್ರಿಯೆಯಲ್ಲಿ ತೊಡಗಿಸಿ ದೊಡ್ಡ ಅಪಾಯವನ್ನು ತಂದೊಡ್ಡುತ್ತಿದ್ದಾರೆ. ಈ ಬಗೆಯ ಲಲಿತ ಕಲೆಗಳ ಹಿಂದೆ ಓಡುವ ಮಕ್ಕಳು ಜೀವನವನ್ನೂ ಸುಗಮವಾಗಿ ನಿರ್ವಹಿಸಬಲ್ಲರು ಎಂದು ಹೇಳಿದರು.ಬದುಕು ರೂಪಿಸಿಕೊಳ್ಳುವ ತಂತ್ರಗಳನ್ನೂ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳು ಕಲಿಸಿಕೊಡಬಲ್ಲದು. ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳನ್ನು ಕೇವಲ ಅಂಕಗಳನ್ನು ಗಳಿಸುವ ಯಂತ್ರಗಳನ್ನಾಗಿ ತಯಾರಿಸುವ ಉದ್ಯಮವಾಗಿ ತನ್ನ ಕಬಂಧ ಬಾಹುಗಳಲ್ಲಿ ಬಂಧಿಸುತ್ತಿದೆ. ಈ ಪ್ರವೃತ್ತಿ ನಿಂತು, ಮಕ್ಕಳ ಸರ್ವತೋಮುಖ ಬೆಳವಣಿಗೆಯ ಕಡೆಗೆ ನಮ್ಮ ಶಿಕ್ಷಣ ವ್ಯವಸ್ಥೆ ಗಮನ ಕೊಡಬೇಕು ಎಂದರು.
ಇದೇ ಸಂದರ್ಭದಲ್ಲಿ ಮರ, ಸಿಮೆಂಟ್, ಇತ್ಯಾದಿ ವೈವಿಧ್ಯಮಯ ಕಲೆಗಳನ್ನು ಮೈಗೂಡಿಸಿಕೊಂಡಿರುವ ಕುಶಲಕಲೆಗಳ ಕಲಾವಿದ ಸಿದ್ಧಲಿಂಗ ಬಡಿಗೇರ ಅವರನ್ನು ಗೌರವಿಸಲಾಯಿತು.
ರಾಮನಗರದ ಎ.ಆರ್.ಕೆ. ನೃತ್ಯ ಮತ್ತು ಸ್ಪೋರ್ಟ್ಸ್ ಅಕಾಡೆಮಿಯ ಸ್ಥಾಪಕಿ ಹಾಗೂ ನೃತ್ಯಗುರು ಮಂಜುಳಾ ರವಿಕುಮಾರ್, ನೃತ್ಯಗುರು ಕೆ. ಜೀವನ್, ಸಂಗೀತ ಶಿಕ್ಷಕಿ ಝಾನ್ಸಿರಾಣಿ ಉಪಸ್ಥಿತರಿದ್ದರು.
ನೃತ್ಯಾಂಜಲಿ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ಮಕ್ಕಳು ಭರತನಾಟ್ಯ, ರೂಪಕ, ಜನಪದ ನೃತ್ಯ ಇತ್ಯಾದಿ ಹದಿನೈದಕ್ಕೂ ಹೆಚ್ಚು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.2ಕೆಆರ್ ಎಂಎನ್ 2.ಜೆಪಿಜಿ
ಕೆರೆಮೇಗಳದೊಡ್ಡಿ ಬಳಿಯ ಮುದ್ದುಶ್ರೀ ದಿಬ್ಬದ ಸಮುಚ್ಛಯದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕೆ.ಎಸ್. ಮುದ್ದಪ್ಪ ಚಿಕ್ಕಮ್ಮ ರಂಗಮಂದಿರದಲ್ಲಿ ನಡೆದ ನೃತ್ಯಾಂಜಲಿ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.