ಬಾಲ್ಯವಿವಾಹದಿಂದಾಗಿ ಚಿಕ್ಕ ವಯಸ್ಸಿಗೆ ವಿಧವೆ ಆಗುವವರ ಸಂಖ್ಯೆ ಹೆಚ್ಚುತ್ತಿದೆ.

ಕುರುಗೋಡು: ಬಾಲ್ಯವಿವಾಹದಿಂದಾಗಿ ಚಿಕ್ಕ ವಯಸ್ಸಿಗೆ ವಿಧವೆ ಆಗುವವರ ಸಂಖ್ಯೆ ಹೆಚ್ಚುತ್ತಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ ಅನಿಷ್ಟ ಪದ್ಧತಿಯಿಂದ ಮಕ್ಕಳಿಗೆ ಮುಕ್ತಿ ನೀಡಿ ಎಂದು ಸಿದ್ದರಾಮಾನಂದಪುರಿ ಶ್ರೀಗಳು ಹೇಳಿದರು.

ಸಮೀಪದ ಸಿರಿಗೇರಿ ಗ್ರಾಮದಲ್ಲಿ ಭಕ್ತ ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣ ಅವರ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿದರು.

ನೂಲಿನಂತೆ ಎಳೆ ಎಂಬ ಮಾತಿನಂತೆ ಪಾಲಕರ ವರ್ತನೆ, ಗುಣವು ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಉತ್ತಮ ಆಚರ, ವಿಚಾರವನ್ನು ಬಿತ್ತಬೇಕು. ಜತೆಗೆ ಹಿಂದುಳಿದ ವರ್ಗಕ್ಕೆ ಸರ್ಕಾರ ಸಾಕಷ್ಟು ಯೋಜನೆ ರೂಪಿಸಿದೆ. ಪ್ರತಿಯೊಬ್ಬರು ಸದ್ಬಳಕೆ ಮಾಡಿಕೊಳ್ಳಬೇಕು. ಕನಕದಾಸ ಮತ್ತು ಸಂಗೊಳ್ಳಿ ರಾಯಣ್ಣರ ಆದರ್ಶವನ್ನು ಪಾಲಿಸಬೇಕು ಎಂದರು.

ಮನುಷ್ಯರು ಸಂಸ್ಕಾರವಂತರಾಗಿ ಸಮಾಜದಲ್ಲಿ ಮೌಲ್ಯಯುತ ಜೀವನ ನಡೆಸಬೇಕು. ಜಯಂತಿಗಳ ಆಚರಣೆಗಿಂತ ಶರಣರ, ಸಂತರ, ದಾಸರ, ವಚನಕಾರರ ಜೀವನ ಶೈಲಿ ಅನುಕರಣೆಯ ಬಗ್ಗೆ ಹೆಚ್ಚು ಒತ್ತುಕೊಡಬೇಕು ಎಂದು ಸಲಹೆ ನೀಡಿದರು.

ಜಿಪಂ ಮಾಜಿ ಸದಸ್ಯ ಕೆ.ಭೀಮಲಿಂಗಪ್ಪ ಮಾತನಾಡಿ, ಭಕ್ತ ಕನಕದಾಸ ಮತ್ತು ವೀರ ಸಂಗೊಳ್ಳಿ ರಾಯಣ್ಣ ಇಬ್ಬರೂ ಕುರುಬ ಸಮಾಜದವರಾದರೂ ಎಲ್ಲ ಸಮಾಜದವರನ್ನು ಸಮಾನವಾಗಿ ಕಂಡವರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.

ಪ್ರಮುಖರಾದ ದಮ್ಮೂರು ಸೋಮಪ್ಪ, ದರಪ್ಪನಾಯಕ, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ. ಪಿ.ಎಲ್.ಗಾದಿಲಿಂಗನಗೌಡ, ಎನ್.ಕರಿಬಸಪ್ಪ ಮತ್ತು ನಂದಕುಮಾರ್ ಮಾತನಾಡಿದರು.

ವೇದಿಕೆ ಕಾರ್ಯಕ್ರಮದ ಪೂರ್ವದಲ್ಲಿ ಭಕ್ತ ಕನಕದಾಸ. ಸಂಗೊಳ್ಳಿ ರಾಯಣ್ಣ ಮತ್ತು ಶರಣ ಗೂಳ್ಯಂ ಗಾದಿಲಿಂಗಪ್ಪ ಅವರ ಚಿತ್ರಪಟಗಳ ಮೆರವಣಿಗೆ ಜರುಗಿತು.

ಗ್ರಾಮದ ಸಿರಿಗೇರಮ್ಮ ದೇವಸ್ಥಾನ ದಿಂದ ಪ್ರಾರಂಭಗೊಂಡ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಾಗನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಸಮಾವೇಶಗೊಂಡಿತು.

ಪೂರ್ಣಕುಂಭ, ಸುಮಂಗಳೆಯ ಕಳಸ, ಡೊಳ್ಳು, ಸಮಾಳ, ಮಂಗಳವಾಧ್ಯ ಭಾಗವಹಿಸಿ ಮೆರವಣಿಗೆಯ ಮೆರುಗು ಹೆಚ್ಚಿಸಿದ್ದರು.

ಭಕ್ತರು ಸಿದ್ದರಾಮಾನಂದಪುರಿ ಶ್ರೀಗಳಿಗೆ ತುಲಾಭಾರ ಸೇವೆ ನೆರವೇರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಕ್ಷ್ಮಿ ದ್ಯಾವಣ್ಣ, ಉಪಾಧ್ಯಕ್ಷೆ ರಾಜಮ್ಮ ಡ್ರೈವರ್ ಹುಲಗಪ್ಪ, ಪಿಎಸ್ಐ ವೈ.ಶಶಿಧರ ನಾಯಕ್, ನಗರಸಭೆ ಅಧ್ಯಕ್ಷ ವೆಂಕಟೇಶ್, ಪಿಡಿಒ ಹುಸೇನ್ ಪಿರಾ, ಎಸ್.ಎಂ. ಅಡಿವೆಯ್ಯ ಸ್ವಾಮಿ, ನಿಟ್ಟೂರು ಹನುಮಂತ, ಎಸ್ಎಂ ನಾಗರಾಜಸ್ವಾಮಿ, ಈರನಾಗಪ್ಪ ಮತ್ತು ಶೇಕ್ಷಾವಲಿ, ತಿಪ್ಪಾರೆಡ್ಡಿ, ಹಾಗಲೂರು ಮಲ್ಲನಗೌಡ, ಇದ್ದರು.