ಸಾರಾಂಶ
ಕನ್ನಡಪ್ರಭವಾರ್ತೆ ತುರುವೇಕೆರೆ
ಮಕ್ಕಳಿಗೆ ಸಾಧಕರ ಜೀವನಗಾಥೆಯನ್ನು ಶಿಕ್ಷಕರು ಭೋಧಿಸುತ್ತಿದ್ದರೆ ಅದು ಮಕ್ಕಳನ್ನು ಉನ್ನತ ಸಾಧನೆ ಮಾಡಲು ಪ್ರೇರೇಪಿಸುತ್ತದೆ ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ಹೇಳಿದರು.ಪಟ್ಟಣದ ಪ್ರಿಯಾ ಆಂಗ್ಲ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಕ್ಕಳಿಗೆ ಉನ್ನತ ಹುದ್ದೆಯ ಕನಸನ್ನು ಕಾಣುವಂತೆ ಶಿಕ್ಷಕರು ಪ್ರೇರೇಪಿಸಬೇಕು. ದೇಶಾಭಿಮಾನಿ ರೂಢಿಸಿಕೊಳ್ಳುವಂತೆ ಜಾಗೃತಗೊಳಿಸಬೇಕು. ಐಎಎಸ್, ಐಪಿಎಸ್ ಸೇರಿದಂತೆ ದೇಶದ ಆಡಳಿತ ಮಾಡುವ ಆಸೆಯನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದು ಹೇಳಿದರು.
ಚಂದ್ರಯಾನ ಯಶಸ್ವಿಗೊಳಿಸಿದ ಈ ದೇಶದ ವಿಜ್ಞಾನಿಗಳ ಸಾಧನೆಯನ್ನು ಮಕ್ಕಳಿಗೆ ವಿವರಿಸಬೇಕು. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಬೇಕು ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ಕಿವಿಮಾತು ಹೇಳಿದರು.ಭಾರತದ ಚಂದ್ರಯಾನ ಯಶಸ್ವಿಯಾದ ನಂತರ ಜಪಾನ್ ಚಂದ್ರಯಾನ ಕೈಗೊಂಡು ವಿಫಲವಾಯಿತು. ಪ್ರಧಾನಿ ನೆಹರೂ ಅವರು ತಮ್ಮ ದೇಶದ ವಿಜ್ಞಾನಿಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳುವಂತೆ ಅಮೇರಿಕಾದ ವಿಜ್ಞಾನಿಗಳಿಗೆ ಮನವಿ ಮಾಡಿಕೊಂಡಾಗ ಅಂದಿನ ಅಧ್ಯಕ್ಷರು ನಿಮ್ಮ ದೇಶದ ಜನತೆ ಅನ್ನ, ಬಟ್ಟೆಯಿಲ್ಲದೆ ಬಡತನದಿಂದ ಪರದಾಡುತ್ತಿದ್ದಾರೆ, ಮೊದಲು ಅವರ ಹೊಟ್ಟೆ ತುಂಬಿಸಿ ಎಂದು ವ್ಯಂಗ್ಯವಾಡಿದ್ದರು. ಆದರೆ ಈಗ ಕಾಲ ಬದಲಾಗಿದೆ. ನಮ್ಮ ದೇಶದ ವಿಜ್ಞಾನಿಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ನಾಸಾವನ್ನೂ ಮೀರಿಸಿ ಬೆಳೆದು ನಿಂತಿದ್ದಾರೆ ಎಂದು ಶಾಸಕ ಎಂ.ಟಿ. ಕೃಷ್ಣಪ್ಪ ಮುಕ್ತಕಂಠದಿಂದ ಪ್ರಶಂಸಿಸಿದರು.
ಗ್ರಾಮೀಣ ಪ್ರದೇಶದಿಂದ ಬಂದ ಸಾಕಷ್ಟು ಪ್ರತಿಭಾವಂತ ಮಕ್ಕಳು ಈ ಶಾಲೆಯಲ್ಲಿ ಓದಿದ ಎಷ್ಟೋ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.ಇದೇ ವೇಳೆ ಇಸ್ರೋ ವಿಜ್ಞಾನಿ ಟಿ. ಸುಬ್ರಮಣ್ಯಂ ಗಣೇಶ್ ದಂಪತಿಯನ್ನು ಮತ್ತು ಶಾಸಕ ಎಂ.ಟಿ. ಕೃಷ್ಣಪ್ಪನವರನ್ನು ಹಾಗೂ ಕಳೆದ ಬಾರಿ ಎಸ್ಸೆಸ್ಸೆಲ್ಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಸನ್ಮಾನಿಸಲಾಯಿತು. ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಿರುತೆರೆಯ ಕಲಾವಿದರಾದ ಸೀರುಂಡೆ ರಘು, ದೀಪಿಕಾ, ಮಿಮಿಕ್ರಿ ಕಲಾವಿದ ತುರುವೇಕೆರೆ ಸಾಗರ್ ಅವರನ್ನೂ ಸಹ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಬಿಇಒ ಎನ್. ಸೋಮಶೇಖರ್, ಶಾಲೆಯ ಸಂಸ್ಥಾಪಕ ಎಂ.ಎನ್. ಚಂದ್ರೇಗೌಡ, ಶಾಲೆಯ ಕಾರ್ಯದರ್ಶಿ ಪುಷ್ಪಲತಾ, ಶಾಲೆಯ ಸಹ ಕಾರ್ಯದರ್ಶಿ ಸಿ. ಚೇತನ್ ಉಪಸ್ಥಿತರಿದ್ದರು.