ಮಕ್ಕಳಿಗೆ ಅಕ್ಷರದ ಜೊತೆಗೆ ಸಂಸ್ಕಾರ ಕಲಿಸಬೇಕು: ರವಿಕುಮಾರ್ ಸಲಹೆ

| Published : Feb 21 2025, 11:47 PM IST

ಸಾರಾಂಶ

ಸರ್ಕಾರಿ ಉದ್ಯೋಗ ಸಿಗುತ್ತದೆ ಎಂಬ ಕಾರಣಕ್ಕೆ ಕಲಿಯದೆ ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಯಾಗಿ ಬೆಳೆಯುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಪೂರಕವಾಗಿರಬೇಕು. ಮೌಲ್ಯಯುತವಾದ ಶಿಕ್ಷಣ ನೀಡುವುದರಿಂದ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ.

ಕನ್ನಡಪ್ರಭ ವಾರ್ತೆ ಮೇಲುಕೋಟೆ

ಮಕ್ಕಳಿಗೆ ಅಕ್ಷರದ ಜೊತೆಗೆ ಸಂಸ್ಕಾರ ಕಲಿಸುವ ಕಾರ್ಯವನ್ನು ಶಿಕ್ಷಕರು ಹಾಗೂ ಪೋಷಕರು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ರವಿಕುಮಾರ್ ಕರೆ ನೀಡಿದರು.

ಮೇಲುಕೋಟೆಯ ಎಸ್.ಇ.ಟಿ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಸರ್ಕಾರಿ ಉದ್ಯೋಗ ಸಿಗುತ್ತದೆ ಎಂಬ ಕಾರಣಕ್ಕೆ ಕಲಿಯದೆ ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಯಾಗಿ ಬೆಳೆಯುವ ನಿಟ್ಟಿನಲ್ಲಿ ಶಾಲಾ ಶಿಕ್ಷಣ ಪೂರಕವಾಗಿರಬೇಕು. ಮೌಲ್ಯಯುತವಾದ ಶಿಕ್ಷಣ ನೀಡುವುದರಿಂದ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯವಿದೆ ಎಂದರು.

ಇತಿಹಾಸ ತಜ್ಞ , ಮುಕ್ತ ವಿವಿ ಪ್ರಾಚೀನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ.ಶಲ್ವಪ್ಪಿಳ್ಳೆ ಅಯ್ಯಂಗಾರ್ ಮಾತನಾಡಿ, ಅಷ್ಠೇನೂ ವಿದ್ಯಾವಂತರಲ್ಲದ ಶಿವನಂಜೇಗೌಡ ಎಸ್.ಇ.ಟಿ ಪಾಲಿಟೆಕ್ನಕ್ ಹಾಗೂ ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಸುತ್ತಮುತ್ತಲ ಗ್ರಾಮೀಣ ಪ್ರದೇಶದ ಸಾವಿರಾರು ವಿದ್ಯಾರ್ಥಿಗಳಲ್ಲಿ ಜ್ಞಾನ ದೀಪ ಬೆಳಗಿಸಿ ಸೇವೆಮಾಡುತ್ತಿದ್ದಾರೆ. ಕಾಲೇಜಿನಲ್ಲಿವ್ಯಾಸಂಗಮಾಡಿದ ನೂರಾರು ಮಂದಿ ದೇಶಾದ್ಯಂತ ಬದುಕು ಕಟ್ಟಿಕೊಂಡಿದ್ದಾರೆ ಎಂದರು.

ಶಾಲೆ ಸಂಸ್ಥಾಪಕ ಅಧ್ಯಕ್ಷ ಶಿವನಂಜೇಗೌಡ ಮಾತನಾಡಿ, ನಾನು ಬಡಕುಟುಂಬದಲ್ಲಿ ಹುಟ್ಟಿ ಹೆಚ್ಚುವ್ಯಾಸಂಗ ಮಾಡದಿದ್ದರೂ ಚೆಲುವನಾರಾಯಣಸ್ವಾಮಿಯ ಕೃಪೆಯಿಂದ ಉದ್ಯಮಿಯಾಗಿ ಬೆಳೆದಿದ್ದೇನೆ. ನನ್ನಂತೆ ಶಿಕ್ಷಣದಿಂದ ಗ್ರಾಮೀಣಭಾಗದ ವಿದ್ಯಾರ್ಥಿಗಳು ವಂಚಿತರಾಗಬಾರದೆನ್ನುವ ಕಾರಣಕ್ಕೆ ಶಿಕ್ಷಣಸಂಸ್ಥೆ ಆರಂಭಿಸಿದ್ದೇನೆ ಎಂದರು.

ಮುಂಬರುವ ಶೈಕ್ಷಣಿಕ ವರ್ಷದಿಂದ ಪಬ್ಲಿಕ್‌ ಶಾಲೆಯಲ್ಲಿ ಸಿ.ಬಿ.ಎಸ್.ಸಿ ತರಗತಿಗಳನ್ನು ಆರಂಭಿಸಲಾಗುತ್ತದೆ. ಗ್ರಾಮೀಣ ಪ್ರದೇಶದ ಮಕ್ಕಳು ಮತ್ತು ಪೋಷಕರು ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕೋರಿದರು.

ಸಮಾರಂಭದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಾಶ್, ಸಂಸ್ಥೆ ರಿಜಿಸ್ಟಾರ್ ನಿಂಗೇಗೌಡ, ಆಡಳಿತಾಧಿಕಾರಿ ವಿ.ವೆಂಕಟರಾಮೇಗೌಡ, ಪ್ರಾಂಶುಪಾಲ ವೀರಭದ್ರಸ್ವಾಮಿ, ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ಮುಖ್ಯಶಿಕ್ಷಕ ಎಸ್.ಎನ್.ಸಂತಾನರಾಮನ್ ಸಿಆರ್.ಪಿ ಬೆಟ್ಟಸ್ವಾಮಿಗೌಡ ಭಾಗವಹಿಸಿದ್ದರು.

ಸಮಾರಂಭದ ನಂತರ ಶಾಲೆ ಮಕ್ಕಳು ನಡೆಸಿಕೊಟ್ಟ ಸಮೂಹನೃತ್ಯಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನಸೂರೆಗೊಂಡುವು. 1 ರಿಂದ 10ನೇ ತರಗತಿ ಶಾಲಾಮಕ್ಕಳು ಮಾಡಿದ ಸಮೂಹ ನೃತ್ಯಕ್ಕೆ ಪ್ರೇಕ್ಷಕರು ಶಿಳ್ಳೆ ಹೊಡೆದು ಪ್ರೋತ್ಸಾಹಿಸಿದರು. ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ, ತರಗತಿಗೊಬ್ಬ ಉತ್ತಮ ವಿದ್ಯಾರ್ಥಿಗೆ ಬಹುಮಾನ ವಿತರಿಸಲಾಯಿತು.