ಮಕ್ಕಳು ಪತ್ರಿಕೆ ಓದುವ ಹವ್ಯಾಸ ರೂಢಿಸಿಕೊಳ್ಳಿ: ಕಮಾಜಿ

| Published : Jul 16 2025, 12:45 AM IST

ಸಾರಾಂಶ

ಸಮಾಜದ ಓರೆ ಕೋರೆಗಳ ತಿದ್ದುವ ಕೆಲಸ ಪತ್ರಿಕೆಗಳು ಮಾಡುತ್ತವೆ. ಪತ್ರಿಕೆಗಳ ಮಹತ್ವ ಇಂದಿಗೂ ಕಡಿಮೆಯಾಗಿಲ್ಲ. ಅಂತಹ ಪತ್ರಿಕೆಗಳ ಓದುವ ಹವ್ಯಾಸವನ್ನು ಮಕ್ಕಳು ರೂಢಿಸಿಕೊಂಡು ಅವುಗಳ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದು ಉದ್ಯಮಿ ರಾಮಣ್ಣ ಕಮಾಜಿ ಹೇಳಿದರು.

ಮುಳಗುಂದ: ಸಮಾಜದ ಓರೆ ಕೋರೆಗಳ ತಿದ್ದುವ ಕೆಲಸ ಪತ್ರಿಕೆಗಳು ಮಾಡುತ್ತವೆ. ಪತ್ರಿಕೆಗಳ ಮಹತ್ವ ಇಂದಿಗೂ ಕಡಿಮೆಯಾಗಿಲ್ಲ. ಅಂತಹ ಪತ್ರಿಕೆಗಳ ಓದುವ ಹವ್ಯಾಸವನ್ನು ಮಕ್ಕಳು ರೂಢಿಸಿಕೊಂಡು ಅವುಗಳ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದು ಉದ್ಯಮಿ ರಾಮಣ್ಣ ಕಮಾಜಿ ಹೇಳಿದರು.

ಪಟ್ಟಣದ ಸರಕಾರಿ ಪ್ರೌಢಶಾಲೆ (ಆರ್‌.ಎಂ.ಎಸ್.ಎ)ಯಲ್ಲಿ ಸೋಮವಾರ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳು ನಿತ್ಯ ಪತ್ರಿಕೆಗಳ ಓದುವುದರಿಂದ ನಿಮ್ಮ ಜ್ಞಾನ ವೃದ್ಧಿಯಾಗುತ್ತದೆ. ಪ್ರಚಲಿತ ವಿದ್ಯಾಮಾನಗಳ ಬಗ್ಗೆ ತಿಳಿಯಲು ಪತ್ರಿಕೆಗಳ ಪಾತ್ರ ಅಪಾರ. ಇಂದಿನ ದಿನಮಾನಗಳಲ್ಲಿ ತಂತ್ರಜ್ಞಾನ ಎಷ್ಟೋ ಮುಂದುವರೆದಿದ್ದು, ತತಕ್ಷಣದ ಸುದ್ದಿಗಳ ಮಾಹಿತಿ ಸಾಮಾಜಿಕ ಜಾಲತಾಣ, ಟಿವಿ ಹೀಗೆ ಹಲವಾರು ವಿಧಗಳಲ್ಲಿ ನಮಗೆ ತಿಳಿಯುತ್ತವೆ. ಆದರೆ ಅದೇ ಸುದ್ದಿ, ಮಾಹಿತಿಯನ್ನು ಬೆಳಗ್ಗೆ ಟೀ-ಕಾಫೀ ಕುಡಿಯುತ್ತಾ ಪತ್ರಿಕೆಗಳ ಮೂಲಕ ಓದಿ ತಿಳಿದುಕೊಳ್ಳುವ ಮೌಲ್ಯವೇ ಬೇರೆ, ಆ ಸ್ವಾದವೇ ಬೇರೆ, ಆದ್ದರಿಂದ ಇಂದಿನ ದಿನಮಾನಗಳಲ್ಲು ಪತ್ರಿಕೆಗಳು ತಮ್ಮ ಸ್ಥಾನಮಾನವನ್ನು ಉಳಿಸಿಕೊಂಡು ಬಂದಿವೆ ಎಂದರು.

ಪತ್ರಿಕೆಗಳಲ್ಲಿ ವಸ್ತನಿಷ್ಠೆ, ನಿಖರ ಮಾಹಿತಿ ಇರುತ್ತದೆ, ಯಾವುದೇ ಊಹಾಪೂಹಗಳ ಸುದ್ದಿಗಳು ಇರುವುದಿಲ್ಲ,ಇಂದು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ಸುದ್ದಿಗಳು ಆಯಾ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿವೆ, ರಾಜ್ಯಾದ್ಯಂತ ಪ್ರಕಟವಾಗುವುದಿಲ್ಲ, ಈ ಬಗ್ಗೆ ಪತ್ರಿಕಾಲಯಗಳು ಜನರ ಸಮಸ್ಯೆಗಳ ಬಗೆಗೆನ ವರದಿಗಳನ್ನು ರಾಜ್ಯಾವ್ಯಾಪಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು ಎಂದರು.ಆರ್‌.ಎನ್.ದೇಶಪಾಂಡೆ ಕಾಲೇಜಿನ ಪ್ರಾ. ಡಾ. ಆರ್.ಎಂ. ಕಲ್ಲನಗೌಡರ ಉಪನ್ಯಾಸ ನೀಡಿ, ಮಂಗಳೂರು ಸಮಾಚಾರ ಕನ್ನಡದ ಮೊದಲ ಪತ್ರಿಕೆ 1843 ಜುಲೈ 1ರಂದು ಪ್ರಾರಂಭವಾಯಿತು. ಪತ್ರಿಕಾ ಸಾಹಿತ್ಯ ಅಂತಾರಾಷ್ಟ್ರೀಯ, ರಾಷ್ಟ್ರೀಯ, ಪ್ರಾದೇಶಿಕ ಹೀಗೆ ಮೂರು ಹಂತದಲ್ಲಿ ನೋಡಬಹುದಾಗಿದೆ ಎಂದ ಅವರು ಭಾಷೆ, ಲಿಪಿ, ಮುದ್ರಣ ಪತ್ರಿಕೆಗಳ ಬೆಳೆದು ಬಂದ ಬಗೆ, ಪತ್ರಿಕಾ ರಂಗದ ಇತಿಹಾಸವನ್ನ ಸುಧೀರ್ಘವಾಗಿ ಉಪನ್ಯಾಸ ನೀಡಿದರು.ಇಂದಿನ ದೃಶ್ಯ ಮಾದ್ಯಮಗಳು ಜನರಲ್ಲಿ ಮೌಢ್ಯಗಳನ್ನ ಬಿತ್ತುತ್ತವೆ. ಆದರೆ ಪತ್ರಿಕೆಗಳು ಜನತೆಯೇ ವಿಶ್ವಾಸಾರ್ಹವಾಗಿ ವಸ್ತುನಿಷ್ಠೆ, ನಿಖರ ಮಾಹಿತಿ ನೀಡುತ್ತವೆ, ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗದಂತೆ ಸಂವಿಧಾನದ 4ನೇ ಅಂಗವಾಗಿ ಪತ್ರಿಕಾರಂಗ ಕೆಲಸ ಮಾಡುತ್ತದೆ. ಪತ್ರಿಕೆಗಳನ್ನ ವಾಚಿಂಗ್ ಡಾಗ್ ಎಂದು ಕರೆಯಲಾಗುತ್ತದೆ. ಇಂದು ಪತ್ರಿಕಾಲಯಗಳು, ಪತ್ರಕರ್ತರು ರಾಜಕೀಯ ಪಕ್ಷಗಳ ಅಡಿಗಳಲ್ಲಿ ಕೆಲಸ ಮಾಡುವಂತಾಗಿದೆ. ಪತ್ರಕರ್ತರು ಪತ್ರಿಕಾ ಧರ್ಮವನ್ನು ಉಳಿಸಿಕೊಂಡು ಹೋಗಬೇಕಾಗಿದೆ. ವಸ್ತುನಿಷ್ಠತೆಯಿಂದ ನಿಖರ ಮಾಹಿತಿ ಒದಗಿಸುವಂತಹ ಕೆಲಸವನ್ನ ಪತ್ರಿಕೆಗಳು ಮಾಡಲಿ ಎಂದು ಮನವಿ ಮಾಡಿದರು.

ಡಾ. ಎಸ್‌.ಸಿ.ಚವಡಿ ಮಾತನಾಡಿ, ಪತ್ರಿಕಾ ದಿನಾಚರಣೆ, ವೈದ್ಯರ ದಿನಾಚರಣೆ ಎರಡೂ ಜು.1ಕ್ಕೆ ಆಚರಿಸಲಾಗುತ್ತದೆ ಸಮಾಜದ ಆರೋಗ್ಯವನ್ನ ವೈದ್ಯರು ಕಾಪಾಡಿದರೇ, ಸಮಾಜದ ಸ್ವಾಸ್ಥ್ಯವನ್ನ ಪತ್ರಿಕೆಗಳು ಕಾಪಾಡುತ್ತವೆ. ಸರ್ಕಾರ ಮತ್ತ ಜನತೆ ನಡುವೆ ಸಂಪರ್ಕ ಸಾಧನವಾಗಿ, ಜನತೆಯ ಧ್ವನಿಯಾಗಿ ಪತ್ರಿಕೆಗಳು ಕಲಸ ಮಾಡುತ್ತೀವೆ ಎಂದರು.ಮುಳಗುಂದ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಸುಂಕಾಪುರ ಮಾತನಾಡಿ, ಇಂದಿನ ಪತ್ರಿಕೋದ್ಯಮ, ಪತ್ರಕರ್ತರು ತುಂಬಾ ಸಂಕಷ್ಟದಲ್ಲಿ ಕೆಲಸ ಮಾಡುವಂತಾಗಿದೆ, ಬಂಡವಾಳ ಶಾಹಿಗಳ, ಅಧಿಕಾರಿಶಾಹಿಗಳ ಅಣತೆಯಂತೆ ಕೆಲಸ ಮಾಡುವಂತಾಗಿ, ಪತ್ರಿಕಾ ಸ್ವಾತಂತ್ರ್ಯವನ್ನ ಕಿತ್ತುಕೊಳ್ಳುತ್ತಿದ್ದಾರೆ. ಆದರೆ ಪತ್ರಕರ್ತರು ತಮ್ಮ ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಸಮಾಜದ ಅಂಕು-ಡೊಂಕುಗಳ, ಮನುಷ್ಯ ಜೀವನದ ಪ್ರತಿಯೊಂದು ಭಾವಗಳಿಗೂ ಜೀವ ತುಂಬುವ ಪತ್ರಕರ್ತರ ಜೀವನ ಮಾತ್ರ ಇಂದಿಗೂ ಅಯೋಮಯ ಎಂದರು.

ಈ ವೇಳೆ ಎಸ್‌ಡಿಎಂಸಿ ಅಧ್ಯಕ್ಷ ಮಹಾದೇವಪ್ಪ ಮಾನೇಗಾರ, ಪಪಂ ಸದಸ್ಯ ಇಮಾಮಸಾಬ ಶೇಖ, ಹೊನ್ನಪ್ಪ ನೀಲಗುಂದ, ವಿ.ಡಿ.ಕಣವಿ, ಎಂ.ಎಂ. ಜಮಾಲಸಾಬನವರ, ಭರತ ಕುರಣಿ, ಎಸ್. ಎಚ್. ಪೂಜಾರ ಸೇರಿದಂತೆ ಶಾಲಾ ಸಿಬ್ಬಂದಿ ಹಾಗೂ ಮಕ್ಕಳು ಇದ್ದರು.