ನಿಗದಿಯಂತೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಸೋಮವಾರದಿಂದ ನಗರದಲ್ಲಿ ಪುನಾರಂಭಗೊಂಡಿದ್ದು, ಶಾಲೆಗಳನ್ನು ತಳಿರು ತೋರಣ ಹಾಕಿ, ರಂಗೋಲಿ ಬಿಡಿಸಿ ಸಿಂಗರಿಸಿದ್ದ ಶಿಕ್ಷಕರು ಮಕ್ಕಳಿಗೆ ಗುಲಾಬಿ ನೀಡಿ, ಸಹಿ ಹಂಚಿ ಸ್ವಾಗತಿಸಿದ್ದು ಎಲ್ಲೆಡೆ ಕಂಡುಬಂತು. ಕೆಲವೆಡೆ ಸ್ಥಳೀಯ ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಕೂಡ ಶಾಲಾ ಪ್ರಾರಂಭೋತ್ಸವದಲ್ಲಿ ಭಾಗಿಯಾಗಿದ್ದರೆ, ಉಳಿದೆಡೆ ಶಿಕ್ಷಕರು, ಅಧಿಕಾರಿಗಳೇ ಮೊದಲ ದಿನ ಮಕ್ಕಳನ್ನು ಬರಮಾಡಿಕೊಂಡರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಿಗದಿಯಂತೆ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಸೋಮವಾರದಿಂದ ನಗರದಲ್ಲಿ ಪುನಾರಂಭಗೊಂಡಿದ್ದು, ಶಾಲೆಗಳನ್ನು ತಳಿರು ತೋರಣ ಹಾಕಿ, ರಂಗೋಲಿ ಬಿಡಿಸಿ ಸಿಂಗರಿಸಿದ್ದ ಶಿಕ್ಷಕರು ಮಕ್ಕಳಿಗೆ ಗುಲಾಬಿ ನೀಡಿ, ಸಹಿ ಹಂಚಿ ಸ್ವಾಗತಿಸಿದ್ದು ಎಲ್ಲೆಡೆ ಕಂಡುಬಂತು. ಕೆಲವೆಡೆ ಸ್ಥಳೀಯ ಶಾಸಕರು ಹಾಗೂ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಕೂಡ ಶಾಲಾ ಪ್ರಾರಂಭೋತ್ಸವದಲ್ಲಿ ಭಾಗಿಯಾಗಿದ್ದರೆ, ಉಳಿದೆಡೆ ಶಿಕ್ಷಕರು, ಅಧಿಕಾರಿಗಳೇ ಮೊದಲ ದಿನ ಮಕ್ಕಳನ್ನು ಬರಮಾಡಿಕೊಂಡರು.ನಗರದ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಕ್ಕಳನ್ನು ವಿಶಿಷ್ಠವಾಗಿ ಸ್ವಾಗತಿಸಲಾಯಿತು. ಮಹಾಲಕ್ಷ್ಮಿ ಲೇಔಟ್‌ನ ಕರ್ನಾಟಕ ಪಬ್ಲಿಕ್‌ ಶಾಲೆ ಮಕ್ಕಳನ್ನು ಸ್ಥಳೀಯ ಶಾಸಕ ಗೋಪಾಲಯ್ಯ ಹೂ ನೀಡಿ, ಸಿಹಿ ಹಂಚಿ ಸ್ವಾಗತಿಸಿದರು. ಬಿಟಿಎಂ ಲೇಔಟ್‌ನ ಸರ್ಕಾರಿ ಪಬ್ಲಿಕ್‌ ಶಾಲೆ, ಜೆಪಿ ನಗರ ಸರ್ಕಾರಿ ಶಾಲೆಯಲ್ಲೂ ಶಿಕ್ಷಕರು, ಅಧಿಕಾರಿಗಳು ಮಕ್ಕಳನ್ನು ಬಾಗಿಲಲ್ಲೇ ಹೂ ನೀಡಿ ಸ್ವಾಗತಿಸಿ ತರಗತಿಗೆ ಕರೆದೊಯ್ದರು.

ಈ ವೇಳೆ ಮಾತನಾಡಿದ ಅಧಿಕಾರಿಗಳು, ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವುದು ಸರಿಯಲ್ಲ. ಸರ್ಕಾರ ಆಯ್ದ ಶಾಲೆಗಳನ್ನು ಕರ್ನಾಟಕ ಪಬ್ಲಿಕ್‌ ಶಾಲೆಗಳಾಗಿ ಮೇಲ್ದರ್ಜೆಗೇರಿಸಿ ಅಲ್ಲಿ ಎಲ್‌ಕೆಜಿಯಿಂದ 12ನೇ ತರಗತಿವರೆಗೂ ಒಂದೇ ಕಡೆ ಶಿಕ್ಷಣ ಸಿಗುವಂತೆ ಕ್ರಮ ವಹಿಸುತ್ತಿದೆ. ಸರ್ಕಾರಿ ಶಾಲೆಗಳಲ್ಲೂ ಈಗ ಕನ್ನಡ ಮತ್ತು ಆಂಗ್ಲ ಮಾಧ್ಯಮ ಎರಡರಲ್ಲೂ ಶಿಕ್ಷಣ ದೊರೆಯಲಿದೆ. ಅಲ್ಲದೆ, ಕೆಪಿಎಸ್‌ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಾಗದಂತೆ ಮೊದಲ ಆದ್ಯತೆಯಲ್ಲಿ ಅವುಗಳಿಗೆ ವರ್ಗಾವಣೆ ನಡೆಸಲಾಗುತ್ತಿದೆ. ಕೊರತೆ ಇರುವ ಶಿಕ್ಷಕ ಹುದ್ದೆಗಳಿಗೆ ಪ್ರತಿಯಾಗಿ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುತ್ತಿದೆ. ಹಾಗಾಗಿ ಪೋಷಕರು ಮಕ್ಕಳನ್ನು ಸರ್ಕಾರಿ ಶಾಲೆಗೆ ಕಳುಹಿಸಲು ಆಸಕ್ತಿ ವಹಿಸಬೇಕು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಮೂಲಕ ತಮ್ಮ ವಾರ್ಡ್‌ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವಂತೆ ಮಾಡಲು ತಾವೂ ಪಾಲ್ಗೊಂಡು ಸಲಹೆ ಸೂಚನೆ ನೀಡಬೇಕು ಎಂದರು.

ಪಠ್ಯಪುಸ್ತಕ ಅರ್ಧ ಬಂದಿವೆ, ಸಮವಸ್ತ್ರ, ಶೂ, ಸಾಕ್ಸ್‌ ಬಂದಿಲ್ಲಸರ್ಕಾರಿ ಶಾಲೆಗಳು ಆರಂಭವಾದರೂ ಸರ್ಕಾರದಿಂದ ಮಕ್ಕಳಿಗೆ ಉಚಿತವಾಗಿ ನೀಡುವ ಪಠ್ಯಪುಸ್ತಕಗಳು ಇನ್ನೂ ಪೂರ್ಣ ಪ್ರಮಾಣದಲ್ಲಿ ಶಾಲೆಗಳಿಗೆ ತಲುಪಿಲ್ಲ. ಇನ್ನು, ಸಮವಸ್ತ್ರ ಮತ್ತು ಶೂ ಸಾಕ್ಸ್‌ ಇನ್ನೂ ಬಂದಿಲ್ಲ. ವಿವಿಧ ಶಾಲಾ ಮುಖ್ಯಶಿಕ್ಷಕರನ್ನು ಮಾತನಾಡಿಸಿದಾಗ, ಕೆಲ ಶಾಲೆಗಳಿಗೆ ಶೇ.50ರಷ್ಟು ಮಾತ್ರ ಪುಸ್ತಕಗಳು ಬಂದಿದ್ದರೆ, ಇನ್ನು ಕೆಲ ಶಾಲೆಗಳಿಗೆ ಶೇ.30ರಷ್ಟು ಮಾತ್ರ ಸರಬರಾಜಾಗಿವೆ. ಗ್ರಾಮೀಣ ಭಾಗದಲ್ಲಿ ಇನ್ನೂ ಕೆಲ ಶಾಲೆಗಳಿಗೆ ಪಠ್ಯಪುಸ್ತಕ ಸರಬರಾಜು ತಾಲೂಕು ಗೋಡೋನ್‌ಗಳಿಂದ ಆರಂಭವಾಗಿಲ್ಲ. ಜೂ.15ರ ವರೆಗೆ ಪಠ್ಯಪುಸ್ತಕ ಪೂರ್ಣ ಪ್ರಮಾಣದಲ್ಲಿ ಸಬರಾಜು ಮಾಡಲು ಕಾಲಾವಕಾಶವಿದೆ. ಅಷ್ಟರಲ್ಲಿ ತಲುಪದೆ ಇದ್ದರೆ ದೂರು ನೀಡಬಹುದಾಗಿದೆ.

ಟೆಂಡರ್‌ ಪ್ರಕ್ರಿಯೆ ತಡ

ಈ ಮಧ್ಯೆ ಸರ್ಕಾರ ಪ್ರಸಕ್ತ ಸಾಲಿನಲ್ಲಿ ಶೂ, ಸಾಕ್ಸ್‌ ಖರೀದಿಗೆ ಆಯಾ ಶಾಲಾ ಎಸ್‌ಡಿಎಂಸಿಗಳಿಗೆ ಹಣ ನಿಡುವ ಬದಲು ತಾನೇ ಏಕೀಕೃತ ಟೆಂಡರ್‌ ಕರೆದು ಸರಬರಾಜು ಮಾಡುತ್ತಿದೆ. ಟೆಂಡರ್‌ ಪ್ರಕ್ರಿಯೆ ತಡವಾಗಿರುವುದರಿಂದ ಇನ್ನೂ ಕೂಡ ಮಕ್ಕಳಿಗೆ ಶೂ, ಸಾಕ್ಸ್‌ ಸಿಕ್ಕಿಲ್ಲ. ಅದೇ ರೀತಿ ಇದುವರೆಗೆ ಶೇ.50ರಿಂದ 60ರಷ್ಟು ಪ್ರಮಾಣದ ಸಮವಸ್ತ್ರ ಮಾತ್ರ ಬಿಇಒ ಕಚೇರಿಗಳಿಗೆ ತಲುಪಿವೆ. ಇನ್ನೂ ಶೇ.40ರಷ್ಟು ಪೂರೈಕೆಯಾಗಬೇಕಿದೆ.