ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರು
“ನನ್ನ ತಮ್ಮ ಆಟವಾಡುತ್ತಿದ್ದರೆ, ಹುಡುಗಿಯಾಗಿದ್ದರಿಂದ ನಾನು ಮನೆ ಕೆಲಸಗಳನ್ನು ಮಾಡಬೇಕಿತ್ತು. ಡೀಡ್ಸ್‌ನಲ್ಲಿ ತರಬೇತಿ ಪಡೆದ ನಂತರ ನನ್ನ ಹಕ್ಕುಗಳ ಪರವಾಗಿ, ಲಿಂಗ ಸಮಾನತೆಯ ಬಗ್ಗೆ ಹೆತ್ತವರಿಗೆ ಮನವರಿಕೆ ಮಾಡಿಕೊಟ್ಟೆ. ಈಗ ನನ್ನ ತಮ್ಮ ಕೂಡ ತಾಯಿಗೆ ಮನೆ ಕೆಲಸದಲ್ಲಿ ಸಹಾಯ ಮಾಡುತ್ತಾನೆ. ತಂದೆ ಕೂಡ ಮನೆ ಜವಾಬ್ದಾರಿಗಳನ್ನು ಹಂಚಿಕೊಳ್ಳತೊಡಗಿದ್ದಾರೆ..”ಮುಲ್ಲಕಾಡು ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಗ್ರಿಷ್ಮಾಳ ಮಾತುಗಳಿವು. ತಾನು ನ್ಯಾಯಾಧೀಶೆಯಾಗಿ ಸಂಕಷ್ಟದಲ್ಲಿರುವ ಮಹಿಳೆಯರ ನ್ಯಾಯಕ್ಕಾಗಿ ಕೆಲಸ ಮಾಡುತ್ತೇನೆ ಎಂದೂ ಕನಸು ಹೇಳಿಕೊಂಡಳು.
ದ.ಕ. ಜಿಲ್ಲಾಡಳಿತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದೊಂದಿಗೆ ಡೀಡ್ಸ್ ಸಂಸ್ಥೆಯು ನಗರದ ಪುರಭವನದಲ್ಲಿ ಶನಿವಾರ ಹಮ್ಮಿಕೊಂಡ ‘ಜೆಂಡರ್ ಚಾಂಪಿಯನ್ಸ್’ ಮಕ್ಕಳ ಸಮಾವೇಶದಲ್ಲಿ ಮಕ್ಕಳು ತಮಗೆ ಎದುರಾದ ಲಿಂಗ ತಾರತಮ್ಯದ ಅನುಭವಗಳನ್ನು ಬಿಚ್ಚಿಟ್ಟರು.ಇದೇ ರೀತಿ ಜಿಲ್ಲೆಯ ವಿವಿಧೆಡೆಯ 14 ಸರ್ಕಾರಿ ಶಾಲೆಗಳ ವಿದ್ಯಾರ್ಥಿನಿಯರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಯಾರೂ ಲಿಂಗ ತಾರತಮ್ಯ ಮಾಡಬಾರದು ಎಂಬ ಮನವಿ ಮಾಡಿದರು.
ಕಾರ್ನಾಡು ಸದಾಶಿವನಗರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ವೈಷ್ಣವಿ ಮಾತಪನಾಡಿ, ನನ್ನ ಹೆತ್ತವರು ಚಿಕ್ಕ ವಯಸ್ಸಿನಲ್ಲೇ ಮದುವೆ ಮಾಡಿಕೊಡಲು ಬಯಸಿದ್ದರು. ತರಬೇತಿಯ ಮೂಲಕ ಶಿಕ್ಷಣದ ಮಹತ್ವ ಅರಿತುಕೊಂಡು ಹೆತ್ತವರ ಮನವೊಲಿಸಿದ್ದೇನೆ. ಇದೀಗ ನನ್ನ ಶಿಕ್ಷಣ ಮುಗಿಸುವವರೆಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ ಎಂದು ಸಂತೋಷದಿಂದ ಹೇಳಿಕೊಂಡಳು.“ನನ್ನ ಅಕ್ಕ ತನ್ನ ಅತ್ತೆ ಮನೆಯಲ್ಲಿ ತೀವ್ರ ಕಿರುಕುಳ ಅನುಭವಿಸುತ್ತಿದ್ದಳು. ದೌರ್ಜನ್ಯ ತಡೆಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಮನೆ ಮಂದಿಗೆ ತಿಳಿಸಿದೆ. ಅಂದಿನಿಂದ ಅಕ್ಕನಿಗೆ ನೀಡುತ್ತಿದ್ದ ಹಿಂಸೆ, ಕಿರುಕುಳ ಗಮನಾರ್ಹವಾಗಿ ಕಡಿಮೆಯಾಗಿದೆ” ಎಂದು ವಿದ್ಯಾರ್ಥಿನಿಯೊಬ್ಬಳು ಹೇಳಿದಳು.
ಶಿಕ್ಷಣದಿಂದ ಮಹಿಳಾ ಸಬಲೀಕರಣ: ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ., ಮಹಿಳಾ ಸಬಲೀಕರಣದಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಮಹತ್ವದ್ದು. ಮಹಿಳೆಯೊಬ್ಬರು ಶಿಕ್ಷಣ ಪಡೆದಾಗ ಆಕೆಯ ಕುಟುಂಬ ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರುವ ಶಕ್ತಿ ಬರುತ್ತದೆ. ಇಂತಹ ಜೆಂಡರ್ ಚಾಂಪಿಯನ್ಸ್ ಕಾರ್ಯಕ್ರಮವು ದೀರ್ಘಾವಧಿಯಲ್ಲಿ ಉತ್ತಮ ಸಮಾಜ ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದು ಹೇಳಿದರು.463 ವಿದ್ಯಾರ್ಥಿಗಳಿಗೆ ತರಬೇತಿ: ಡೀಡ್ಸ್ ಸಂಸ್ಥೆಯ ನಿರ್ದೇಶಕಿ ಮರ್ಲಿನ್ ಮಾರ್ಟಿಸ್ ಮಾತನಾಡಿ, ಕಳೆದ ಜೂನ್‌ನಿಂದ ಡಿಸೆಂಬರ್‌ವರೆಗೆ ನಡೆದ ಜೆಂಡರ್ ಚಾಂಪಿಯನ್ಸ್ ಕಾರ್ಯಕ್ರಮದಡಿ ಜಿಲ್ಲೆಯ 14 ಸರ್ಕಾರಿ ಶಾಲೆಗಳ 463 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಲಿಂಗ ಸಮಾನತೆಯ ಜತೆಗೆ ಪೋಕ್ಸೋ, ಮಕ್ಕಳ ಸಹಾಯವಾಣಿಗಳ ಬಗ್ಗೆಯೂ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಯಿತು. ಮುಂದಿನ ದಿನಗಳಲ್ಲಿ ಈ ವಿಚಾರಗಳ ಜತೆಗೆ ಸೈಬರ್ ಸೆಕ್ಯೂರಿಟಿ ಕುರಿತು ಜಾಗೃತಿ ಮೂಡಿಸಲು ಯೋಜಿಸಿದ್ದೇವೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್, ಬ್ಲಾಕ್ ಶಿಕ್ಷಣಾಧಿಕಾರಿ ಎಚ್.ಆರ್. ಈಶ್ವರ್ ಮತ್ತಿತರರು ಇದ್ದರು.ತಾಯಿಯ ಶಿಕ್ಷಣ ಹೋರಾಟ ಬಿಚ್ಚಿಟ್ಟ ಜಿಲ್ಲಾಧಿಕಾರಿಸಮಾವೇಶದಲ್ಲಿ ತಮ್ಮ ತಾಯಿಯ ಲಿಂಗ ಸಮಾನತೆ ಮತ್ತು ಶಿಕ್ಷಣಕ್ಕಾಗಿನ ಹೋರಾಟವನ್ನು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸ್ಮರಿಸಿದರು. ‘ನನ್ನ ತಾಯಿಗೆ ನಾಲ್ವರು ಸಹೋದರಿಯರು ಮತ್ತು ಒಬ್ಬ ಸಹೋದರ. ಅಂದಿನ ಕಾಲದಲ್ಲಿ ಹೆಣ್ಮಕ್ಕಳಿಗೆ ಶಿಕ್ಷಣ ನೀಡಲು ಹಿಂಜರಿಕೆ ಜತೆಗೆ ಬಡತನವೂ ಇತ್ತು. ತಾಯಿಯು ಶಿಕ್ಷಣ ಮುಂದುವರಿಸಲು ಅನೇಕ ಸವಾಲುಗಳ ವಿರುದ್ಧ ಹೋರಾಡಬೇಕಾಯಿತು. ಹೆತ್ತವರು ಶಾಲಾ ಶುಲ್ಕ ಪಾವತಿಸುವುದನ್ನು ನಿಲ್ಲಿಸಿದಾಗ ಧೃತಿಗೆಡದ ಆಕೆ ಹುಣಸೆ ಹಣ್ಣುಗಳನ್ನು ಸಂಗ್ರಹಿಸಿ, ಬುಟ್ಟಿಗಳನ್ನು ನೇಯ್ದು ತಮ್ಮ ಶಿಕ್ಷಣಕ್ಕೆ ಹಣ ಸಂಪಾದಿಸುತ್ತಿದ್ದರು. ಈ ಮೂಲಕ ನನ್ನ ಹಳ್ಳಿಯಲ್ಲಿ ಪದವೀಧರೆಯಾದ ಪ್ರಥಮ ಮಹಿಳೆಯಾಗಿ ಇತರರಿಗೆ ಸ್ಫೂರ್ತಿಯಾದರು. ಅಂದು ಅವರು ಹೋರಾಟದ ಮೂಲಕ ಶಿಕ್ಷಣ ಪಡೆದು ಸರ್ಕಾರಿ ಕೆಲಸವನ್ನೂ ಪಡೆದುಕೊಂಡ ಕಾರಣದಿಂದಲೇ ಇಂದು ನಾನು ಈ ಸ್ಥಾನಕ್ಕೇರಲು ಸಾಧ್ಯವಾಗಿದೆ’ ಎಂದು ಹೇಳಿದರು.