ಮ್ಮಾಡಿಯ ಜನತಾ ಪ.ಪೂ. ಕಾಲೇಜಿನಲ್ಲಿ ನಡೆದ ವಿಜ್ಞಾನ, ವ್ಯವಹಾರ, ಸಾಂಸ್ಕೃತಿಕ ಸಂಗಮವಾದ ‘ಜನತಾ ಆವಿಷ್ಕಾರ್ 2026‘ - ವಿದ್ಯಾರ್ಥಿಗಳ 5ನೇ ವರ್ಷದ ವ್ಯವಹಾರ ಮೇಳ
ಕುಂದಾಪುರ: ಶಾಲೆಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸುವ, ಭವಿಷ್ಯದಲ್ಲಿ ಉತ್ತಮ ಮನುಷ್ಯನಾಗಿ ಬಾಳಲು ಕಲಿಸುವ ಶಿಕ್ಷಣ ಇಂದಿನ ಅತ್ಯಗತ್ಯವಾಗಿದೆ. ನಿರುದ್ಯೋಗ ಸಮಸ್ಯೆ ನಿವಾರಿಸಲು ಸ್ವಂತ ಉದ್ದಿಮೆ ಆರಂಭಿಸುವ ವ್ಯವಹಾರ ಜ್ಞಾನವನ್ನು ಮಕ್ಕಳಲ್ಲಿ ಬೆಳೆಸಬೇಕಾಗಿದೆ. ಈ ನಿಟ್ಟಿನಲ್ಲಿ ಜನತಾ ಕಾಲೇಜಿನ ಈ ವ್ಯವಹಾರ ಮೇಳ ಸಕಾಲಿಕವಾಗಿದೆ ಎಂದು ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ ಸಿ. ಕುಂದರ್ ಹೇಳಿದರು.
ಅವರು ಹೆಮ್ಮಾಡಿಯ ಜನತಾ ಪ.ಪೂ. ಕಾಲೇಜಿನಲ್ಲಿ ನಡೆದ ವಿಜ್ಞಾನ, ವ್ಯವಹಾರ, ಸಾಂಸ್ಕೃತಿಕ ಸಂಗಮವಾದ ‘ಜನತಾ ಆವಿಷ್ಕಾರ್ 2026‘ - ವಿದ್ಯಾರ್ಥಿಗಳ 5ನೇ ವರ್ಷದ ವ್ಯವಹಾರ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.ಬೈಂದೂರಿನ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ವಿದ್ಯಾರ್ಥಿಗಳ ಮಳಿಗೆಗಳನ್ನು ಉದ್ಘಾಟಿಸಿ, ಸಂಸ್ಥೆಯ ಇಂತಹ ಹೊಸ ಪ್ರಯೋಗಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಮೊಗವೀರ ಮಾತನಾಡಿ, ಶಿಕ್ಷಣವೆಂದರೆ ಕೇವಲ ಉದ್ಯೋಗ ಪಡೆಯುವುದು, ಅಂಕ ಗಳಿಸುವುದು ಮಾತ್ರವಲ್ಲ, ನಮ್ಮ ಜೀವನ ಸಮಾಜಕ್ಕೆ ಮುಡಿಪಾಗಿಡುವ, ಉತ್ತಮ ಸಮಾಜ ನಿರ್ಮಾಣದಲ್ಲಿ ಕೊಡುಗೆ ನೀಡುವ ಸರ್ವಾಂಗೀಣ ಶಿಕ್ಷಣವನ್ನು ಇಲ್ಲಿ ನೀಡುತ್ತಿದ್ದೇವೆ. ಈ ವ್ಯವಹಾರ ಮೇಳವು ಜಿಲ್ಲೆಯ ದೊಡ್ಡ ಶೈಕ್ಷಣಿಕ ಉತ್ಸವವಾಗಿದೆ. ಸ್ವಾವಲಂಬಿ ಬದುಕು, ಉದ್ಯಮ ಕೌಶಲ, ಮಾರುಕಟ್ಟೆ ಅನುಭವ, ವ್ಯವಹಾರ ವಿಚಾರಗಳನ್ನು ತಿಳಿಸಲು ಈ ಮೇಳ ಆಯೋಜಿಸಲಾಗಿದೆ ಎಂದರು.
ರಕ್ತದ ಆಪದ್ಭಾಂಧವ ಸತೀಶ್ ಸಾಲ್ಯಾನ್ ಮಣಿಪಾಲ, ಜನಸೇವಾ ಟ್ರಸ್ಟ್ ಪ್ರವರ್ತಕ ವಸಂತ ಗಿಳಿಯಾರ್, ಬೈಂದೂರು ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಜಿಪಂ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಸಂಸ್ಥೆಯ ಶೈಕ್ಷಣಿಕ ಮಾರ್ಗದರ್ಶಕಿ ಚಿತ್ರಾ ಕಾರಂತ್, ನ್ಯೂ ಜನತಾ ಆಂಗ್ಲ ಮಾಧ್ಯಮ ಶಾಲೆ ಮುಖ್ಯೋಪಾಧ್ಯಾಯಿನಿ ದೀಪಿಕಾ, ಜನತಾ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಜಗದೀಶ್ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.ಇದೇ ವೇಳೆ ಬೈಂದೂರು ರೈತ ಸಂಘದ ಸದಸ್ಯರನ್ನು ಸಮ್ಮಾನಿಸಲಾಯಿತು. ಉಪಪ್ರಾಂಶುಪಾಲ ರಮೇಶ್ ಪೂಜಾರಿ ಸ್ವಾಗತಿಸಿ, ಉಪನ್ಯಾಸಕ ಉದಯ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು. ಮಕ್ಕಳಿಂದಲೇ ವ್ಯವಹಾರ ಮಳಿಗೆಗಳು !
ಈ ವ್ಯವಹಾರ ಮೇಳದಲ್ಲಿ 135 ಕ್ಕೂ ಮಿಕ್ಕಿ ಮಳಿಗೆಗಳನ್ನು ವಿದ್ಯಾರ್ಥಿಗಳು ತೆರೆದಿದ್ದರು. ತಿಂಡಿ ತಿನಿಸು, ಆಟಿಕೆ ವಸ್ತುಗಳು, ತಂಪು ಪಾನೀಯ, ಫಾಸ್ಟ್ ಫುಡ್ ಮಳಿಗೆ, ಹಣ್ಣು, ಸಹಿತ ತರಹೇವಾರಿ ಮಳಿಗೆಗಳಲ್ಲಿ ವಿದ್ಯಾರ್ಥಿಗಳು ಭರ್ಜರಿ ವ್ಯಾಪಾರ ನಡೆಸಿದರು. ಬಹುತೇಕ ಮಳಿಗೆಗಳಲ್ಲಿ ಗ್ರಾಹಕರು ಖರೀದಿಗೆ ಮುಗಿಬಿದ್ದಿದ್ದರು. ಜಿಲ್ಲೆಯ ಇತರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಾಮೂಹಿಕ ನೃತ್ಯ, ಚಿತ್ರಕಲೆ, ರಸಪ್ರಶ್ನೆ, ವಿಜ್ಞಾನ ಮೇಳ, ಕಿರು ಪ್ರಹಸನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕಲಾ ತಂಡಗಳಿಂದ ಹೋಳಿ ಕುಣಿತ, ಹೌಂದೇರಾಯನ ವಾಲಗ, ಹುಲಿ ಹೆಜ್ಜೆ, ವೈವಿಧ್ಯಮಯ ನೃತ್ಯ ಪ್ರದರ್ಶನ, ಜಾದೂಗಾರ ಸತೀಶ್ ಹೆಮ್ಮಾಡಿ ತಂಡದಿಂದ ಜಾದೂ ವಿಸ್ಮಯ ಪ್ರದರ್ಶನಗೊಂಡಿತು.