ಸಾರಾಂಶ
ಕನ್ನಡಪ್ರಭ ವಾರ್ತೆ ಚಿಂತಾಮಣಿ
ನಗರದ ರಸ್ತೆಗಳ ಅಗಲೀಕರಣ, ಪುಟ್‌ಪಾತ್ ನಿರ್ಮಾಣ, ತಾಲೂಕಿನ ಬಹುತೇಕ ಕೆರೆಗಳಿಗೆ ಕೆಸಿವ್ಯಾಲಿ ನೀರನ್ನು ಶುದ್ಧಿಕರಣಗೊಳಿಸಿ ತುಂಬಿಸುವ ಮೂಲಕ ಅಂತರ್ಜಲದ ಮಟ್ಟವನ್ನು ಹೆಚ್ಚಿಸಿ ರೈತರಿಗೆ ನೆರವಾಗುವಂತಹ ಯೋಜನೆಯನ್ನು ಸಿದ್ಧಪಡಿಸಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿರುವುದಾಗಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ನುಡಿದರು.ತಾಲೂಕಿನ ಕೋನಪ್ಪಲ್ಲಿ ಸಮೀಪದ ವಾಲ್ಮೀಕಿ ಭವನದ ನಿರ್ಮಾಣ ಹಂತ ಕಾಮಗಾರಿಯನ್ನು ಪರಿಶೀಲಿಸಿ ಮಾತನಾಡಿ, ನಗರ ಸೇರಿದಂತೆ ತಾಲೂಕಿನಾದ್ಯಂತ ರಸ್ತೆ, ಚೆಕ್‌ಡ್ಯಾಂ, ಕೆರೆಗಳ ಅಭಿವೃದ್ಧಿ ಇತ್ಯಾದಿಗಳನ್ನು ಮಾಡುತ್ತಿರುವುದಾಗಿ ತಿಳಿಸಿದರು.
ಚೆಕ್‌ಡ್ಯಾಂ ನಿರ್ಮಾಣಕ್ಕೆ ಕ್ರಮಮತ್ತೊಂದು ಯೋಜನೆಯಾದ ಕುಶಾವತಿ ನದಿಯು ನಳ್ಳರಾಳ್ಳಪಲ್ಲಿ ಮಾರ್ಗವಾಗಿ ಹರಿದು ಪಾಪಾಗ್ನಿ ನದಿಯನ್ನು ಸೇರಿ ಆಂಧ್ರಕ್ಕೆ ಸೇರುತ್ತದೆಯೋ ಇಲ್ಲಿನ ಕಾಲುವೆಗಳಲ್ಲಿ ಹಲವು ವರ್ಷಗಳಿಂದ ಹೂಳು ತುಂಬಿದ್ದು ಅದನ್ನು ತೆಗೆಸಿ ಅಲ್ಲಲ್ಲಿ ಚೆಕ್‌ಡ್ಯಾಂಗಳನ್ನು ನಿರ್ಮಿಸಿ ನೀರು ನಿಲುಗಡೆ ಮಾಡುವ ಮಹಾತ್ವಕಾಂಕ್ಷಿ ಯೋಜನೆಯನ್ನು ಹೊಂದಿರುವುದಾಗಿ ತಿಳಿಸಿದರು.
ವಾಲ್ಮೀಕಿ ಭವನಕ್ಕೆ ನಿರ್ಮಾಣಕ್ಕೆ ಹೆಚ್ಚುವರಿ ೪ ಕೋಟಿ ಅನುದಾನ ಮತ್ತು ೧ ಎಕರೆ ಹೆಚ್ಚುವರಿ ಸ್ಥಳವನ್ನು ಒದಗಿಸಿಕೊಟ್ಟ ಭವನವನ್ನು ಅಭಿವೃದ್ಧಿ ಮಾಡಲಾಗುತ್ತಿದ್ದು ಯಾವುದೇ ಪ್ರದೇಶದ ಅಭಿವೃದ್ದಿಗೆ ಸಾಕಷ್ಟು ಮುಂದಾಲೋಚನೆಯೊಂದಿಗೆ ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆಯೆಂದು ನುಡಿದರು.ಭಕ್ತರಹಳ್ಳಿ ಅರಸನಕೆರೆ ಅಭಿವೃದ್ಧಿ
ನಗರೋತ್ಥಾನ ಯೋಜನೆ ಅಡಿಯಲ್ಲಿ ೨೫ ಕೋಟಿ ಲಭ್ಯವಾಗಿದ್ದು ೧೨ ಕೋಟಿ ಅದಕ್ಕೆ ನೀಡಿದ್ದರೆ ವಿನಹ: ಬೇರೆ ಯಾವುದೇ ಹೆಚ್ಚುವರಿ ಅನುದಾನವನ್ನು ತಂದಿಲ್ಲವೆಂದು ಮಾಜಿ ಶಾಸಕರ ಹೆಸರು ಹೇಳದೆ ಟೀಕಿಸಿದರು. ನಗರಸಭೆಯ ಅಭಿವೃದ್ಧಿಗಾಗಿ ಬಂದಿರುವ ಹಣವನ್ನು ನಗರ ವಿವಿಧ ಬಡಾವಣೆಗಳ ರಸ್ತೆ ಅಭಿವೃದ್ಧಿಗೆ ಬಳಸಲಾಗುವುದೆಂದರು.ಹೆಚ್ಚುವರಿಯಾಗಿ ೧೭೬ ಕೋಟಿ ಹಣವನ್ನು ವಿವಿಧ ಯೋಜನೆಗಳಿಗೆ ಸಣ್ಣ ನೀರಾವರಿ ಇಲಾಖೆಯಿಂದ ತರಲು ಪ್ರಯತ್ನಿಸುತ್ತಿರುವುದಾಗಿ ತಿಳಿಸಿದರು. ೪೬ ಕೋಟಿ ವೆಚ್ಚದಲ್ಲಿ ಚೆಕ್‌ಡ್ಯಾಂಗಳಿಗಾಗಿ ಯಶವಂತಪುರದ ಬಳಿ ಒಂದು ಕೆರೆಗೆ ೫ ಕೋಟಿ ವೆಚ್ಚದಲ್ಲಿ ನಿರ್ಮಾಣವು ಈ ಯೋಜನೆಯಲ್ಲಿ ಸೇರಿದೆಯೆಂದರು.
ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆತಾಲೂಕಿನ ಅಭಿವೃದ್ಧಿಗೆ ಒತ್ತನ್ನು ನೀಡುತ್ತಿದ್ದು ನಾನು ಶಾಸಕನಾದ ಸಂದರ್ಭದಿಂದಲೂ ಕ್ಷೇತ್ರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸಿದ್ದು ಸಮ್ಮಿಶ್ರ ಸರ್ಕಾರ, ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲೂ ಅನುದಾನಗಳನ್ನು ತಂದು ಕ್ಷೇತ್ರ ಅಭಿವೃದ್ಧಿಯನ್ನು ಮಾಡಿದ್ದೇನೆ, ಆದರೆ ಕೆಲವರು ನಮ್ಮ ಕುಟುಂಬದ ವಿರುದ್ಧ ಮತ್ತು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಾರೆ ಅವರಿಗೆ ಅಭಿವೃದ್ಧಿ ಕಾಣುವುದಿಲ್ಲವೆಂದು ವ್ಯಂಗ್ಯವಾಡಿದರು.
ಆಧುನಿಕ ಹೂವಿನ ಮಾರುಕಟ್ಟೆ೨೦ ಎಕರೆ ಜಮೀನನ್ನು ಗುರ್ತಿಸಿ ಚಿಕ್ಕಬಳ್ಳಾಪುರದ ಹೂವಿನ ಮಾರುಕಟ್ಟೆಯ ನೀಲಿನಕ್ಷೆಯನ್ನು ಎಲ್‌ಇಡಿ ಪರದೆಯ ಮೂಲಕ ಪ್ರದರ್ಶಿಸಲಾಯಿತು, ಕೆ.ಸುಧಾಕರ್ ತಮ್ಮ ಅಧಿಕಾರದ ಅವಧಿಯಲ್ಲಿ ಬೆಟ್ಟಗುಟ್ಟಗಳ ಮೇಲೆ ಹೂವಿನ ಮಾರುಕಟ್ಟೆಗೆ ಸ್ಥಳವನ್ನು ಗುರ್ತಿಸಿದ್ದು ಅದು ವಿಫಲವಾಯಿತು. ಅದರೆ ನಾನು ಶಾಸಕ ಹಾಗೂ ಸಚಿವನಾದ ಮೇಲೆ ಸುಸಜ್ಜಿತ ಪ್ರದೇಶದಲ್ಲಿ ೨೦ ಎಕರೆ ಜಮೀನು ಗುರ್ತಿಸಿ ಒಂದೆಡೆ ವಾಹನ ಪಾರ್ಕಿಂಗ್ ವ್ಯವಸ್ಥೆ ಅದರೆ ಮುಂಭಾಗದಲ್ಲಿ ವಿಶಾಲವಾದ ಅಂಗಡಿಯ ಪ್ರಾಂಗಣವನ್ನು ನಿರ್ಮಿಸಲಾಗುತ್ತಿದೆಯೆಂದರು. ಶಿಡ್ಲಘಟ್ಟದಲ್ಲಿ ೨೦೦ ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಮಾರುಕಟ್ಟೆಯನ್ನು ಒಂದೇ ಹಂತದಲ್ಲಿ ನಿರ್ಮಾಣಕ್ಕೆ ಮಾಡುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರುಗಳು, ವಾಲ್ಮೀಕಿ ಸಮುದಾಯದ ಮುಖಂಡರುಗಳಾದ ರಾಧಾಕೃಷ್ಣ, ಅಗ್ರಹಾರ ಮೋಹನ್, ತಾಲ್ಲೂಕು ವಾಲ್ಮೀಕಿ ಸಂಘದ ಅಧ್ಯಕ್ಷ ವೆಂಕಟೇಶ್, ಕೋನಪ್ಪಲ್ಲಿ ಕೋದಂಡ, ಗ್ಯಾರಂಟಿ ಯೋಜನೆಯ ಜಿಲ್ಲಾ ಸದಸ್ಯರು ಹಾಗೂ ರಾಜ್ಯ ವಾಲ್ಮೀಕಿ ಸಂಘದ ಸದಸ್ಯ ವೇಣುಗೋಪಾಲ್, ದೊರಪ್ಪಲ್ಲಿ ನರೇಶ್, ನರಸಿಂಹಪ್ಪ ಮತ್ತಿತರರು ಇದ್ದರು.