ಮತ ಎಣಿಕೆಗೆ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 14 ಟೇಬಲ್

| Published : May 25 2024, 12:50 AM IST

ಮತ ಎಣಿಕೆಗೆ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 14 ಟೇಬಲ್
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ತ್ವರಿತ ಫಲಿತಾಂಶಕ್ಕೆ ಕೈಗೊಂಡಿರುವ ಅಗತ್ಯ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ, ಚಿತ್ರದುರ್ಗಲೋಕಸಭೆ ಚುನಾವಣೆ ಮತ ಎಣಿಕೆಗೆ ಜಿಲ್ಲಾಡಳಿತ ಸನ್ನದ್ಧವಾಗಿದ್ದು, ತ್ವರಿತ ಫಲಿತಾಂಶಕ್ಕೆ ಅಗತ್ಯ ಕ್ರಮ ಕೈಗೊಂಡಿದೆ. ಪ್ರತಿ ವಿಧಾನಸಭೆ ಕ್ಷೇತ್ರದ ಮತ ಎಣಿಕೆಗೆ 14 ಟೇಬಲ್ ನಿಗದಿಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮತ ಎಣಿಕೆ ಕುರಿತು ರಾಜಕೀಯ ಪಕ್ಷದ ಅಭ್ಯರ್ಥಿಗಳಿಗಾಗಿ ಶುಕ್ರವಾರ ಏರ್ಪಡಿಸಲಾಗಿದ್ದ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಮತ ಎಣಿಕೆ ನಡೆಯಲಿದೆ. ಉಮೇದುವಾರರು ಮತ ಎಣಿಕೆ ಕಾರ್ಯಕ್ಕೆ ಸುಮಾರು 125 ಮಂದಿ ಏಜೆಂಟರನ್ನು ನೇಮಿಸಿಕೊಳ್ಳಲು ಅವಕಾಶವಿದ್ದು, ನಮೂನೆ-18ರಲ್ಲಿ ಅರ್ಹ ಪ್ರತಿನಿಧಿಗಳ ಹೆಸರು ವಿಳಾಸ ಮತ್ತು ಇತ್ತೀಚಿನ 2 ಭಾವಚಿತ್ರಗಳನ್ನು ನೀಡಿ, ಗುರುತಿನ ಚೀಟಿ ಪಡೆದುಕೊಳ್ಳಬಹುದಾಗಿದೆ. ಪ್ರತಿ ತಾಲೂಕು ಮತ ಎಣಿಕೆಯ ಕಾರ್ಯಕ್ಕೆ ನಿಯೋಜಿತರಾಗುವ ಏಜೆಂಟರುಗಳಿಗೆ ವಿವಿಧ ಗುರುತಿನ ಬಣ್ಣದ ಕಾರ್ಡುಗಳನ್ನು ನೀಡ ಲಾಗುವುದು ಎಂದರು. ಮತ ಎಣಿಕೆಯು ಜೂನ್ 4ರಂದು ಬೆಳಿಗ್ಗೆ 7ರಿಂದ ನಗರದ ಬಿ.ಡಿ.ರಸ್ತೆಯ ಸರ್ಕಾರಿ ವಿಜ್ಞಾನ ಕಾಲೇಜಿನ ನೂತನ ಕಟ್ಟಡದಲ್ಲಿ ನಡೆಯಲಿದೆ.ಮತಎಣಿಕೆ ಕಾರ್ಯಕ್ಕೆ ನಿಯೋಜಿತ ಏಜೆಂಟರುಗಳು ಜಿಲ್ಲಾ ಚುನಾವಣಾ ಶಾಖೆಯಿಂದ ನೀಡಲಾಗುವ ಗುರುತಿನ ಚೀಟಿಯನ್ನು ತೋರಿಸಿ, ಎಣಿಕೆ ದಿನದಂದು ಪ್ರವೇಶ ಪಡೆಯಬಹುದಾಗಿದೆ. ಏಜೆಂಟರುಗಳು ಪೆನ್ನು ಮತ್ತು ಬಿಳಿ ಹಾಳೆಯ ಹೊರತಾಗಿ ಮೊಬೈಲ್ ಸೇರಿದಂತೆ ಬೇರೆ ಯಾವುದೇ ರೀತಿಯ ವಿದ್ಯುನ್ಮಾನ ಯಂತ್ರಗಳು, ನೀರಿನ ಬಾಟಲಿ, ಕತ್ತರಿ, ಚಾಕು ಅಥವಾ ಇನ್ನಿತರ ಹರಿತವಾದ ವಸ್ತುಗಳು, ಲೈಟರ್, ಬೆಂಕಿಪೊಟ್ಟಣ ಮುಂತಾದವುಗಳು ಕೊಂಡೊಯ್ಯುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದರು.ಏಜೆಂಟರು ತಮಗೆ ಸೂಚಿಸಲಾದ ಟೇಬಲ್ ಮತ್ತು ಕ್ಷೇತ್ರಕ್ಕೆ ನಿಗದಿಪಡಿಸಿರುವ ಕೌಂಟಿಂಗ್ ಕೊಠಡಿಯನ್ನು ಬಿಟ್ಟು ಬೇರೆ ಕಡೆಗೆ ಹೋಗುವುದನ್ನು ನಿಷೇಧಿಸಿದೆ. ನಿಯಮ ಪಾಲಿಸದಿರುವ ಏಜೆಂಟರನ್ನು ಯಾವುದೇ ಮುನ್ಸೂಚನೆ ನೀಡದೆ ಎಣಿಕೆ ಕೇಂದ್ರದಿಂದ ಹೊರಹಾಕಲಾಗುವುದು ಎಂದರು.ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14ಟೇಬಲ್‍ಗಳನ್ನು ನಿಗದಿಪಡಿಸಲಾಗಿದೆ. ಅಂದು ಬೆಳಿಗ್ಗೆ 7.30ಕ್ಕೆ ಭದ್ರತಾ ಕೊಠಡಿಗಳನ್ನು ಏಕಕಾಲಕ್ಕೆ ತೆರೆಯಲಾಗುವುದು. ಬೆಳಿಗ್ಗೆ 8ರಿಂದ ಅಂಚೆ ಮತ ಎಣಿಕೆ ಮತ್ತು ವಿದ್ಯುನ್ಮಾನ ಮತಯಂತ್ರಗಳ ಎಣಿಕೆಯನ್ನು ಆರಂಭಿಸಲಾಗುವುದು. ನೆಲಮಹಡಿಯಲ್ಲಿ ಚಳ್ಳಕೆರೆ, ಹೊಸದುರ್ಗ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರಗಳ ಎಣಿಕೆ, ಮೊದಲ ಮಹಡಿಯಲ್ಲಿ ಮೊಳಕಾಲ್ಮೂರು, ಹಿರಿಯೂರು ಮತ್ತು ಶಿರಾ ತಾಲೂಕುಗಳ ಮತಎಣಿಕೆ ಹಾಗೂ ಎರಡನೇ ಮಹಡಿಯಲ್ಲಿ ಚಿತ್ರದುರ್ಗ ಮತ್ತು ಹೊಳಲ್ಕೆರೆ ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಕಾರ್ಯ ನಡೆಯಲಿದೆ ಎಂದರು.18 ರಿಂದ 21 ಸುತ್ತುಗಳಲ್ಲಿ ಮತ ಎಣಿಕೆಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ 285 ಮತಗಟ್ಟೆಗಳ ಎಣಿಕೆ 21ಸುತ್ತುಗಳಲ್ಲಿ, ಚಳ್ಳಕೆರೆ ವಿಧಾನಸಭಾ ಕ್ಷೇತ್ರದ 260 ಮತಗಟ್ಟೆಗಳ ಎಣಿಕೆಯು 19ಸುತ್ತುಗಳಲ್ಲಿ, ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ 288 ಮತಗಟ್ಟೆಗಳ ಎಣಿಕೆ 21ಸುತ್ತುಗಳಲ್ಲಿ, ಹಿರಿಯೂರು ವಿಧಾನಸಭಾ ಕ್ಷೇತ್ರದ 287 ಮತಗಟ್ಟೆಗಳ ಎಣಿಕೆ 21ಸುತ್ತುಗಳಲ್ಲಿ, ಹೊಸದುರ್ಗ ವಿಧಾನಸಭಾ ಕ್ಷೇತ್ರದ 242 ಮತಗಟ್ಟೆಗಳ ಎಣಿಕೆ 18ಸುತ್ತುಗಳಲ್ಲಿ, ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ 299 ಮತಗಟ್ಟೆಗಳ ಎಣಿಕೆ 22 ಸುತ್ತುಗಳಲ್ಲಿ, ಶಿರಾ ವಿಧಾನಸಭಾ ಕ್ಷೇತ್ರದ 267 ಮತಗಟ್ಟೆಗಳ ಎಣಿಕೆ 20ಸುತ್ತುಗಳಲ್ಲಿ ಹಾಗೂ ಪಾವಗಡ ವಿಧಾನಸಭಾ ಕ್ಷೇತ್ರದ 240ಮತಗಟ್ಟೆಗಳ ಎಣಿಕೆಯು 18ಸುತ್ತುಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ವೆಂಕಟೇಶ್ ತಿಳಿಸಿದರು.

ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚುನಾವಣಾ ತರಬೇತುದಾರ ನಾಗಭೂಷಣ, ಜಿಲ್ಲಾ ಯೋಜನಾ ನಿರ್ದೇಶಕ ಮಹೇಂದ್ರಕುಮಾರ್ ಸೇರಿದಂತೆ ಎಲ್ಲಾ ಉಮೇದುವಾರರ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದರ್ ಕುಮಾರ್ ಮೀನಾ ಮಾತನಾಡಿ, ಮತ ಎಣಿಕೆ ಕೇಂದ್ರದಲ್ಲಿ ಅನವಶ್ಯಕ ಚರ್ಚೆ, ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡುವುದು, ಎಲ್ಲೆಂದರಲ್ಲಿ ಸುತ್ತಾಡುವುದು, ಗುಂಪು ಚರ್ಚೆ ನಡೆಸಲು ಅವಕಾಶವಿರುವುದಿಲ್ಲ. ನಿಯೋಜಿತ ಏಜೆಂಟರು ತಮ್ಮ ಕೊಠಡಿಯನ್ನು ಬಿಟ್ಟು ಬೇರೆ ಕಡೆ ಸಂಚರಿಸುವಂತಿಲ್ಲ. ನಿಯಮ ಪಾಲಿಸದಿರುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದು ಹೇಳಿದರು.