ಚಳ್ಳಕೆರೆಯಾದ್ಯಂತ ಚಿತ್ತಮಳೆ ಆರ್ಭಟ

| Published : Oct 13 2024, 01:03 AM IST

ಸಾರಾಂಶ

ತಾಲೂಕಿನಾದ್ಯಂತ ಚಿತ್ತಮಳೆ ಆರಂಭದಲ್ಲೇ ಆರ್ಭಟಿಸಿ ತಾಲೂಕಿನ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಗ್ರಾಮ ಪ್ರದೇಶದ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನಿಂತು ಬೆಳೆ ನೀರಿನಿಂದ ಆವೃತ್ತವಾಗಿದ್ದು, ಕೆಲವೆಡೆ ಮನೆಯ ಕಾಂಪೌಂಡ್‌ ಗೋಡೆ ಕುಸಿದಿವೆ.

ಕನ್ನಡಪ್ರಭವಾರ್ತೆ ಚಳ್ಳಕೆರೆ

ತಾಲೂಕಿನಾದ್ಯಂತ ಚಿತ್ತಮಳೆ ಆರಂಭದಲ್ಲೇ ಆರ್ಭಟಿಸಿ ತಾಲೂಕಿನ ಕೆಲವೆಡೆ ಮನೆಗಳಿಗೆ ನೀರು ನುಗ್ಗಿದೆ. ಗ್ರಾಮ ಪ್ರದೇಶದ ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನಿಂತು ಬೆಳೆ ನೀರಿನಿಂದ ಆವೃತ್ತವಾಗಿದ್ದು, ಕೆಲವೆಡೆ ಮನೆಯ ಕಾಂಪೌಂಡ್‌ ಗೋಡೆ ಕುಸಿದಿವೆ.

ಒಂದು ತಿಂಗಳ ಅವಧಿಯಲ್ಲಿ ಮೂರು ಬಾರಿ ಮಳೆಯಾಗಿದ್ದು, ತಾಲೂಕಿನ ಬಹುತೇಕ ಕೆರೆಕಟ್ಟೆಗಳು ಕೋಡಿ ಬಿದಿದ್ದಿವೆ. ನಗರಂಗೆರೆ ಕೆರೆಕೋಡಿಬಿದ್ದ ಹಿಂದೆಯೇ ನಾಯಕಯನಹಟ್ಟಿ ಹೋಬಳಿಯ ರೇಖಲಗೆರೆ, ವರವು ಗ್ರಾಮದ ಕೆರೆಗಳು ಸಹ ಕೋಡಿಬಿದ್ದಿವೆ. ಜಮೀನಿನಲ್ಲಿದ್ದ ತೊಗರಿ, ಶೇಂಗಾ, ಟಮೋಟೊ, ಮೆಕ್ಕೆಜೋಳ, ರಾಗಿ ಮುಂತಾದ ಬೆಳೆಗಳು ನೀರಿನಲ್ಲಿ ಮುಳುಗಿ ಅಪಾರ ನಷ್ಟ ಸಂಭವಿಸಿದೆ. ರೈತರು ಮಳೆಯಿಂದ ಕಂಗಾಲಾಗುವ ದುಸ್ಥಿತಿ ಎದುರಾಗಿದೆ.

ಶುಕ್ರವಾರ ಬೆಳಗಿನ ಜಾವ ನಾಯಕನಹಟ್ಟಿ-90.06, ಚಳ್ಳಕೆರೆ-88.04, ದೇವರಮರಿಕುಂಟೆ-38.08, ಪರಶುರಾಮಪುರ-37.08, ತಳಕು- 37.04 ಮಿಮೀ. ಸೇರಿ ಒಟ್ಟು 291.10 ಮಿಮೀ. ಮಳೆಯಾಗಿದೆ. ನಗರದ ಬೆಂಗಳೂರು ರಸ್ತೆಯಲ್ಲಿರುವ ಅನೇಕ ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಎಪಿಎಂಪಿ ಮಾರುಕಟ್ಟೆಯ ತಡೆಗೋಡೆ ಕುಸಿದು ಬಿದ್ದಿದೆ. ರಹೀಂನಗರ, ಶಾಂತಿನಗರ, ಮೈರಾಡಕಾಲೋನಿ, ಅಂಬೇಡ್ಕರ್‌ನಗರ, ಅಭಿಷೇಕ್‌ನಗರ ಮುಂತಾದ ಕಡೆಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದ ಪರಿಣಾಮ ಇಡೀ ರಾತ್ರಿ ಜನರು ಜಾಗರಣೆ ಮಾಡುವಂತಾಯಿತು.

ಮೈರಾಡ ಕಾಲೋನಿಯ ಸುಮಾರು 25ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಆಹಾರ ಪದಾರ್ಥ, ಬಟ್ಟೆಬರೆ ಇತರೆ ವಸ್ತುಗಳು ನೀರಿನಲ್ಲಿ ಮುಳುಗಿದ್ದವು. ಪ್ರತಿಬಾರಿಯೂ ಮಳೆ ಬಂದಾಗ ಇದೇ ಪರಿಸ್ಥಿತಿ ಎದುರಾಗುತ್ತಿದೆ. ನಗರಸಭೆ ಆಡಳಿತ ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ಅಲ್ಲಿನ ಜನರು ಆಗ್ರಹಿಸಿದ್ದಾರೆ.

ತಾಲೂಕಿನ ನಗರಂಗೆರೆ ಪಂಚಾಯಿತಿ ವ್ಯಾಪ್ತಿಯ ದಾಸನಾಯಕಹಟ್ಟಿಯಲ್ಲಿ ತಿಪ್ಪೇಸ್ವಾಮಿ ಎಂಬುವವರಿಗೆ ಸೇರಿದ ಶೇಂಗಾ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿ ಸುಮಾರು ₹50 ಸಾವಿರ ನಷ್ಟ ಸಂಭವಿಸಿದೆ. ವರವು ಗ್ರಾಮದ ಕನ್ನಯ್ಯ ಎಂಬುವವರ ಜಮೀನಿನಲ್ಲಿದ್ದ ಮೂರು ಎಕರೆ ಮೆಕ್ಕೆಜೋಳ ನೀರಿನಲ್ಲಿ ಮುಳುಗಿದೆ. ವರವು ಗ್ರಾಮದ ಪಾಲಯ್ಯ ಮತ್ತು ಸಣ್ಣಬೋರಮ್ಮ ಎಂಬುವವರಿಗೆ ಸೇರಿದ ಟಮೋಟೊ ಬೆಳೆ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಬಂಜಿಗೆರೆ ಗ್ರಾಮದ ಬಸಮ್ಮ ಎಂಬುವವರ ವಾಸದ ಮನೆಯ ಮೇಲ್ಛಾವಣಿ ಕುಸಿದು ₹35 ಸಾವಿರ ನಷ್ಟ ಸಂಭವಿಸಿದೆ.

ನೀರು ನುಗ್ಗಿದ ಪ್ರದೇಶಗಳಿಗೆ ತಹಸೀಲ್ದಾರ್ ರೇಹಾನ್‌ಪಾಷ ತಮ್ಮ ಸಿಬ್ಬಂದಿಯೊಂದಿಗೆ ತೆರಳಿ ಪರಿಶೀಲಿಸಿ, ನಷ್ಟದ ಅಂದಾಜಿನ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಕಳಿಸುವುದಾಗಿ ಭರವಸೆ ನೀಡಿದರು.