ಸಾರಾಂಶ
ಶೃಂಗೇರಿ: ಇಲ್ಲಿನ ಶ್ರೀ ಶಾರದಾ ಪೀಠದಲ್ಲಿ ಶರನ್ನವರಾತ್ರಿ ದರ್ಬಾರ್ ದಿನದಿಂದ ದಿನಕ್ಕೆ ಮೆರಗು ಪಡೆದುಕೊಳ್ಳುತ್ತಿದ್ದು, ವಿಜಯದಶಮಿಯ ದಿನಾವಾದ ಶನಿವಾರ ಶ್ರೀ ಶಾರದಾಂಬೆಗೆ ನವರಾತ್ರಿಯ ಅಂಗವಾಗಿ ಗಜಲಕ್ಷಮಿ ಅಲಂಕಾರ ಮಾಡಲಾಗಿತ್ತು.
ಶಾರದೆ ದದ್ಮಾಸನ ಭಂಗಿಯಲ್ಲಿ ಕುಳಿತಿರುವಾಗ ಎರಡು ಕಡೆ ಗಜಗಳು ಸೊಂಡಿಲನೆತ್ತಿ ನಮಸ್ಕರಿಸುತ್ತಿರುವಾಗ ಪ್ರಸನ್ನವದನಳಾಗಿ ಶಾರದೆಯು ಭಕ್ತರನ್ನು ಅನುಗ್ರಹಿಸುತ್ತಿರುವ ಶಾರದೆಯ ದೃಶ್ಯ ಮನಮೋಹಕವಾಗಿತ್ತು. ಶ್ರೀ ಶಾರದಾಂಬೆಗೆ ವಿಶೇಷ ಪೂಜೆ ಸಹಿತ ಮಹಾಮಂಗಳಾರತಿ ನೆರವೇರಿತು.ನವರಾತ್ರಿಯ ಆರಂಭದಿಂದಲೂ ಸುರಿಯಲಾರಂಭಿಸಿದ ಮಳೆರಾಯ ನವರಾತ್ರಿ ಮುಗಿಯುತ್ತಾ ಬಂದರೂ ಶೃಂಗೇರಿಯನ್ನು ಬಿಟ್ಟು ಕದಲಲಿಲ್ಲ. ಎಂದಿನಂತೆ ಶನಿವಾರವೂ ಸುರಿಯಲಾರಂಬಿಸಿದ. ಮಳೆರಾಯ ಪದೇ ಪದೇ ಅಡ್ಡಿಪಡಿಸಿದರೂ, ನವರಾತ್ರಿಯ ಎಲ್ಲಾ ಧಾರ್ಮಿಕ, ಸಾಂಸ್ಕ್ರತಿಕ ಕಾರ್ಯಕ್ರಮಗಳು ಬಲು ವಿಜೃಂಭಣೆಯಿಂದ ಜರುಗಿದವು.
ದೇಶದ ವಿವಿಧೆಡೆಗಳಿಂದ ಸಹಸ್ರಾರು ಭಕ್ತಾದಿಗಳು ಶೃಂಗೇರಿಯ ನವರಾತ್ರಿಯ ಧಾರ್ಮಿಕ, ಸಾಂಸ್ಕ್ರತಿಕ ಸಹಿತ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಶನಿವಾರ ಶೃಂಗೇರಿ ಶ್ರೀ ಮಠದ ಆವರಣ, ಶ್ರೀ ಶಾರದಾಂಬಾ ದೇವಾಲಯ, ನರಸಿಂಹವನ, ಭೋಜನಾ ಶಾಲೆ, ಗಾಂಧಿ ಮೈದಾನ, ಭಾರತೀ ಬೀದಿ, ಶೃಂಗೇರಿ ಪಟ್ಟಣ ಎಲ್ಲೆಡೆ ಜನಸಾಗರವೇ ಕಂಡುಬಂದಿತು.ವಿಧುಶೇಖರ ಭಾರತೀ ಶ್ರೀಗಳಿಂದ ಆಯುಧ ಪೂಜೆ: ಆಯುಧ ಪೂಜೆ ದಿನವಾದ ಶುಕ್ರವಾರ ಶ್ರೀ ಮಠದ ಆವರಣದಲ್ಲಿ ಜಗದ್ಗುರು ಶ್ರೀ ವಿಧುಶೇಖರ ಭಾರತೀ ತೀರ್ಥರು ಶ್ರಿಮಠದ ಆನೆಗಳಿಗೆ ಗಜಪೂಜೆ, ಕುದುರೆಗಳಿಗೆ ಅಶ್ವಪೂಜೆ ನೆರವೇರಿಸಿದರು. ಶ್ರೀಮಠದ ವಾಹನಗಳಿಗೆ ಆಯುಧಪೂಜೆ ನೆರವೇರಿಸಿದರು.
ಸಿಂಹವಾಹಿನಿಯಲಂಕಾರದಲ್ಲಿ ಕಂಗೋಳಿಸಿದ ಶಾರದೆ: ಶ್ರೀ ಶಾರದಾಂಬೆಗೆ ಶುಕ್ರವಾರ ಸಿಂಹವಾಹಿನಿಯಲಂಕಾರ ಮಾಡಲಾಗಿತ್ತು. ಶಾರದೆಗೆ ವಿವಿಧ ಫಲಪುಷ್ಪಗಳಿಂದ ಅಲಂಕರಿಸಲಾಗಿತ್ತು. ಶಾರದೆ ಸಿಂಹವಾಹನವನ್ನೇರಿ ಕೈಯಲ್ಲಿ ತ್ರಿಶೂಲ ಧರಿಸಿ ಚಂಡ ಮುಂಡಾದಿ ದುಷ್ಟರನ್ನು ಸಂಹರಿಸಿ ಶಿಷ್ಟರಕ್ಷಣೆಗಾಗಿ ಚಾಮುಂಡಿಯ ಅಲಂಕರದಲ್ಲಿ ಭಕ್ತರನ್ನು ಅನುಗ್ರಹಿಸುತ್ತಿರುವ ದೃಶ್ಯ ನಯನ ಮನೋಹರವಾಗಿತ್ತು.ನವರಾತ್ರಿಯ ಅಂಗವಾಗಿ ಶ್ರೀ ಮಠದ ಯಾಗಮಂಟಪದಲ್ಲಿ ಕಳೆದ 5 ದಿನಗಳಿಂದ ನಡೆಯುತ್ತಿದ್ದ ಶತಚಂಡೀಯಾಗದ ಪೂರ್ಣಾಹುತಿ ಜಗದ್ಗುರುಗಳ ಸಮ್ಮುಖದಲ್ಲಿ ನಡೆಯಿತು.
ಕೊನೆಗೊಂಡ ಕಾರ್ಯಕ್ರಮಗಳು: ಕಳೆದ 9 ದಿನಗಳಿಂದ ನಡೆಯುತ್ತಿದ್ದ ಜಗದ್ಗುರುಗಳ ನವರಾತ್ರಿಯ ರಾತ್ರಿ ದರ್ಬಾರ್ ಶುಕ್ರವಾರ ಕೊನೆಗೊಂಡಿತು. ನವರಾತ್ರಿಯ ಅಂಗವಾಗಿ ಪ್ರತಿದಿನದ ರಾಜಬೀದಿ ಉತ್ಸವ ಮುಕ್ತಾಯಗೊಂಡಿತು. ಶುಕ್ರವಾರದ ರಾಜಬೀದಿ ಉತ್ಸವದಲ್ಲಿ ಮರ್ಕಲ್ ಪಂಚಾಯಿತಿ ಗ್ರಾಮಸ್ಥರೊಂದಿಗೆ ವಿವಿಧ ಸಂಘ ಸಂಸ್ಥೆಗಳು, ಭಜನಾ ತಂಡಗಳು, ಜಾನಪದ ಕಲಾ ತಂಡಗಳು, ವಿವಿಧ ಸ್ತಭ್ಧ ಚಿತ್ರಗಳು ಉತ್ಸವಕ್ಕೆ ವಿಶೇಷ ಮೆರಗು ನೀಡಿದವು. ಸಾಂಸ್ಕ್ರತಿಕ ಮಹೋತ್ಸವದ ಅಂಗವಾಗಿ ಕಳೆದ 9 ದಿನಗಳಿಂದ ಶ್ರೀಮಠದ ಪ್ರವಚನ ಮಂದಿರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳು ಸಂಪನ್ನಗೊಂಡಿತು.ಇಂದು ಶಾರದಾಂಬಾ ಮಹಾರಥೋತ್ಸವ: ನವರಾತ್ರಿಯ ಕೊನೆಯ ದಿನವಾದ ಭಾನುವಾರ ಪಟ್ಟಣದ ರಥ ಬೀದಿಯಲ್ಲಿ ಶ್ರೀ ಶಾರದಾಂಬಾ ಮಹಾರಥೋತ್ಸವ ನಡೆಯಲಿದೆ. ಶೃಂಗೇರಿಯಲ್ಲಿ ನಡೆಯುವ ರಥೋತ್ಸವಗಳಲ್ಲಿ ಇದು ಅತ್ಯಂತ ದೊಡ್ಡ ರಥೋತ್ಸವ. ಮಲೆನಾಡಿನ ದೇವಾಲಯಗಳ ನಗರಿ ಶೃಂಗೇರಿಯಲ್ಲಿ ವರ್ಷ ವಿಡೀ ರಥೋತ್ಸವಗಳ ಸುಗ್ಗಿ ಶಾರದೆಗೆ ಸ್ವರ್ಣ ರೋಥೇತ್ಸವ, ಶಾರದಾಂಬಾ ರಥೋತ್ಸವ, ವಿದ್ಯಾಶಂಕರ ರಥೋತ್ಸವ, ಮಲಹಾನಿಕರೇಶ್ವರ ರಥೋತ್ಸವ, ಶಂಕರ ಮಹಾರಥೋತ್ಸವ, ದುರ್ಗಾಂಬಾ ರಥೋತ್ಸವ ಹೀಗಿ ವರ್ಷದಲ್ಲಿ ಹಲವು ರಥೋತ್ಸವಗಳು ಜರುಗುತ್ತವೆ. ಇವುಗಳಲ್ಲಿ ನವರಾತ್ರಿಯ ಈ ರಥೋತ್ಸವ ಅತ್ಯಂತ ದೊಡ್ಡದು. ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ, ಹಗಲು ದರ್ಬಾರ್ ಈ ಮಹಾರಥೋತ್ಸವದಂದೇ ನಡೆಯುವು ಮೊತ್ತೊಂದು ವಿಶೇಷ ವಾಗಿದೆ.
ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ: ಪಟ್ಟಣದ ರಥಬೀದಿಯಲ್ಲಿ ಶ್ರೀ ಶಾರದಾಂಬಾ ಮಹಾರಥೋತ್ಸವ ಸಾಗುವಾಗ ಜೊತೆಗೆ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ ಕೂಡ ನಡೆಯುತ್ತದೆ. ಇದು ಶ್ರೀಮಠದ ಸಂಪ್ರದಾಯದಂತೆ ಹಿಂದಿನಿಂದಲೂ ಪರಂಪರೆಯಂತೆ ನಡೆದುಕೊಂಡು ಬರುತ್ತಿದೆ. ಇದನ್ನು ವೀಕ್ಷಿಸಲು ವಿವಿಧೆಡೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ.ನವರಾತ್ರಿಯ ಹಗಲು ದರ್ಬಾರ್: ವಿಜಯನಗರ ಕಾಲದಿಂದಲೂ ನಡೆದುಕೊಂಡು ಬಂದಿರುವ ನವರಾತ್ರಿ ದರ್ಬಾರ್ ಶೃಂಗೇರಿ ಪೀಠದಲ್ಲಿ ಇಂದಿಗೂ ದೇಶವಿದೇಶಗಳಲ್ಲಿ ಜನಮನ್ನಣೆ ಪಡೆದುಕೊಂಡಿದೆ. ನವರಾತ್ರಿಯ 9 ದಿನಗಳ ಕಾಲ ನವರಾತ್ರಿಯ ದರ್ಬಾರ್ ನಡೆಯುತ್ತದೆ. ನವರಾತ್ರಿಯ ಕೊನೆಯ ದಿನ ನವರಾತ್ರಿಯ ಹಗಲು ದರ್ಬಾರ್ ನಡೆಯುತ್ತದೆ. ಇದರೊಂದಿಗೆ ನವರಾತ್ರಿಯ ದರ್ಬಾರ್ ಸಂಪನ್ನಗೊಳ್ಳುತ್ತದೆ. ಬೆಳಿಗ್ಗೆ ಶ್ರೀ ಮಠದ ಮುಂಭಾಗದಲ್ಲಿ ರಥದಲ್ಲಿ ಶ್ರೀ ಶಾರದಾಂಬೆಯ ಮೂರ್ತಿಯನ್ನು ಕುಳ್ಳಿರಿಸಿ ವಿಶೇಷ ಪೂಜೆ, ಮಹಾಮಂಗಳಾರತಿ ನಂತರ ರಥಬೀದಿಯಲ್ಲಿ ಮಹಾರಥೋತ್ಸವ ಜರುಗುತ್ತದೆ.