ಸುಮಾರು 45 ವರ್ಷಗಳ ಬಳಿಕ ಪ್ರಸಿದ್ಧ ಚಿತ್ತರಗಿ ಕುಮಾರ ವಿಜಯ ನಾಟಕ ಸಂಘ ಹಾವೇರಿಗೆ ಆಗಮಿಸಿದ್ದು, ಜು. 9ರಿಂದ ನಾಟಕ ಪ್ರದರ್ಶನ ಆರಂಭವಾಗಲಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ ಜಾಲಿಹಾಳ ತಿಳಿಸಿದರು.

ಹಾವೇರಿ: ಸುಮಾರು 45 ವರ್ಷಗಳ ಬಳಿಕ ಪ್ರಸಿದ್ಧ ಚಿತ್ತರಗಿ ಕುಮಾರ ವಿಜಯ ನಾಟಕ ಸಂಘ ಹಾವೇರಿಗೆ ಆಗಮಿಸಿದ್ದು, ಜು. 9ರಿಂದ ನಾಟಕ ಪ್ರದರ್ಶನ ಆರಂಭವಾಗಲಿದೆ ಎಂದು ಸಂಘದ ಅಧ್ಯಕ್ಷ ಮಂಜುನಾಥ ಜಾಲಿಹಾಳ ತಿಳಿಸಿದರು.

ನಗರದ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿ ಚಿತ್ತರಗಿ ನಾಟಕ ಕಂಪನಿ ಹಾಕಿರುವ ನಾಟಕ ಪ್ರದರ್ಶನದ ರಂಗ ಸಜ್ಜಿಕೆಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಾವೇರಿಯಲ್ಲಿ ಸುಮಾರು ಮೂರು ತಿಂಗಳ ಕಾಲ ವಿವಿಧ ಸಾಮಾಜಿಕ, ಐತಿಹಾಸಿಕ ಹಾಗೂ ಮನರಂಜನಾ ನಾಟಕಗಳನ್ನು ಪ್ರದರ್ಶಿಸಲಾಗುವುದು. ಪ್ರೇಕ್ಷಕರಿಗೆ ಉತ್ತಮ ಮನರಂಜನೆಯೊಂದಿಗೆ ಗುಣಮಟ್ಟದ ರಂಗಭೂಮಿ ಅನುಭವ ನೀಡುವುದು ಸಂಘದ ಉದ್ದೇಶವಾಗಿದೆ ಎಂದು ಹೇಳಿದರು.

ವೃತ್ತಿ ರಂಗಭೂಮಿ ಕಲೆಯು ಅಳಿವಿನಂಚಿನಲ್ಲಿದ್ದು, ಅದರ ಉಳಿವು ಮತ್ತು ಬೆಳವಣಿಗೆಗಾಗಿ ಕಲಾ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕಗಳ ವೀಕ್ಷಣೆಗೆ ಆಗಮಿಸಿ ಕಲೆಯನ್ನು ಪ್ರೋತ್ಸಾಹಿಸಬೇಕು. ಚಿತ್ತರಗಿ ಕಂಪನಿಯು ಸ್ಥಾಪನೆಯಾದ ಸಂದರ್ಭದಲ್ಲಿ ರಾಜ್ಯದಲ್ಲಿ ಸುಮಾರು 70ರಿಂದ 80 ವೃತ್ತಿ ರಂಗಭೂಮಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಕಾಲಕ್ರಮೇಣ ಆರ್ಥಿಕ ಸಂಕಷ್ಟ ಮತ್ತು ಬದಲಾಗುತ್ತಿರುವ ಮನರಂಜನಾ ಮಾಧ್ಯಮಗಳ ಪರಿಣಾಮವಾಗಿ ಅನೇಕ ಸಂಸ್ಥೆಗಳು ಮುಚ್ಚಲ್ಪಟ್ಟಿವೆ. ಪ್ರಸ್ತುತ ರಾಜ್ಯದಲ್ಲಿ ಸುಮಾರು 25 ವೃತ್ತಿ ರಂಗಭೂಮಿ ಸಂಸ್ಥೆಗಳು ಮಾತ್ರ ಉಳಿದುಕೊಂಡಿವೆ ಎಂದರು.

ಕಲಾವಿದರಾದ ಸಂಗಮೇಶ ಗಜೇಂದ್ರಗಡ, ಕೆಂಪು ಪೂಜಾರಿ, ವಿಜಯ ಜ್ಯಾಲಿಹಾಳ, ಮಾರುತಿ ಕುಂದಾಪುರ, ಸಂತೋಷ ಜಾಲಿಹಾಳ, ಈಶ್ವರ, ಸುನೀಲ ವಿಜಯಪುರ, ಶ್ರೀಶೈಲ ವಿಜಯಪುರ, ಮಹಾದೇವ ಜಾಲಿಹಾಳ, ಅಪರಂಜೆಮ್ಮ ಜಾಲಿಹಾಳ, ಸೌಮ್ಯಾ ತುಮಕೂರ, ಶ್ವೇತಾ ಶಿವಮೊಗ್ಗ, ಚೈತ್ರಾ ಕುಂದಾಪುರ ಇದ್ದರು.

ಜು. 9ರಿಂದ ಕೌಟುಂಬಿಕ ನಾಟಕ ಪ್ರದರ್ಶನ: ಚಿತ್ತರಗಿ ನಾಟಕ ಕಂಪನಿಯ ವತಿಯಿಂದ ನಗರದ ವೀರಭದ್ರೇಶ್ವರ ದೇವಸ್ಥಾನದ ಪಕ್ಕದಲ್ಲಿ "ಅಪ್ಪ ಚಿಂತ್ಯಾಗ ಮಗಳು ಸಂತ್ಯಾಗ " ಎಂಬ ಸಂಪೂರ್ಣ ಹಾಸ್ಯಪ್ರಧಾನವಾದ ಕೌಟುಂಬಿಕ ನಾಟಕದ ಪ್ರದರ್ಶನವನ್ನು ಆಯೋಜಿಸಲಾಗಿದೆ. ಜು. 9ರಂದು ನಾಟಕಕ್ಕೆ ಚಾಲನೆ ದೊರೆಯಲಿದ್ದು, ಪ್ರತಿದಿನ ಸಂಜೆ 3.30 ಮತ್ತು 6.30 ಗಂಟೆಗೆ ಎರಡು ಪ್ರದರ್ಶನಗಳು ನಡೆಯಲಿವೆ. ಹರಸೂರು ಬಣ್ಣದಮಠದ ಅಭಿನವರುದ್ರ ಚನ್ನಮಲ್ಲಿಕಾರ್ಜುನ ಶ್ರೀಗಳು, ಶಾಸಕ ಬಸವರಾಜ ಶಿವಣ್ಣನವರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಮಾಜಿ ಶಾಸಕ ಶಿವರಾಜ ಸಜ್ಜನರ ಭಾಗವಹಿಸಲಿದ್ದಾರೆ. ನಾಟಕದಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಕಲಾವಿದರು ಸೇರಿದಂತೆ ಅನೇಕ ಪ್ರಸಿದ್ಧ ಕಲಾವಿದರು ಅಭಿನಯಿಸಲಿದ್ದಾರೆ ಎಂದು ಮಂಜುನಾಥ ತಿಳಿಸಿದರು.