ಚುಟುಕು ಸಾಹಿತ್ಯ ಬಹಳಷ್ಟು ವೇಗದಿಂದ ಬೆಳೆಯುತ್ತಲಿದೆ- ಮಾಜಿ ಸಚಿವ ಎಸ್.ಎಸ್. ಪಾಟೀಲ

| Published : Feb 25 2024, 01:48 AM IST

ಚುಟುಕು ಸಾಹಿತ್ಯ ಬಹಳಷ್ಟು ವೇಗದಿಂದ ಬೆಳೆಯುತ್ತಲಿದೆ- ಮಾಜಿ ಸಚಿವ ಎಸ್.ಎಸ್. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಇತ್ತೀಚಿನ ಕಾಲಘಟ್ಟದಲ್ಲಿ ಹನಿಗವನ, ಇನಿಗವನ, ಹಾಯ್ಕುಗಳು, ರುಬಾಯಿ, ಮುಕ್ತಕ, ಶಾಯಿರಿ ಮುಂತಾದ ಸಾಹಿತ್ಯ ಪ್ರಕಾರಗಳ ಜೊತೆಗೆ ಚುಟುಕು ಸಾಹಿತ್ಯ ಬಹಳಷ್ಟು ವೇಗದಿಂದ ಬೆಳೆಯುತ್ತಲಿದೆ.

ಮುಂಡರಗಿ: ಇತ್ತೀಚಿನ ಕಾಲಘಟ್ಟದಲ್ಲಿ ಹನಿಗವನ, ಇನಿಗವನ, ಹಾಯ್ಕುಗಳು, ರುಬಾಯಿ, ಮುಕ್ತಕ, ಶಾಯಿರಿ ಮುಂತಾದ ಸಾಹಿತ್ಯ ಪ್ರಕಾರಗಳ ಜೊತೆಗೆ ಚುಟುಕು ಸಾಹಿತ್ಯ ಬಹಳಷ್ಟು ವೇಗದಿಂದ ಬೆಳೆಯುತ್ತಲಿದೆ ಎಂದು 10ನೇ ಅಖಂಡ ಧಾರವಾಡ ಜಿಲ್ಲಾ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಮಾಜಿ ಸಚಿವ ಎಸ್.ಎಸ್. ಪಾಟೀಲ ಹೇಳಿದರು.

ಅವರು ಶನಿವಾರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಜರುಗಿದ ಅಖಂಡ ಧಾರವಾಡ ಜಿಲ್ಲಾ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಅಧ್ಯಕ್ಷೀಯ ಮಾತುಗಳನ್ನಾಡಿದರು. ಕನ್ನಡ ಸಾಹಿತ್ಯ ಸುಮಾರು 2000 ವರ್ಷಗಳ ಸುದೀರ್ಘ ಇತಿಹಾಸವನ್ನು ಹೊಂದಿದೆ. ಪೂರ್ವದ ಹಳೆಗನ್ನಡ, ನಡುಗನ್ನಡ, ಹೊಸಗನ್ನಡದೊಂದಿಗೆ ನವೋದಯ- ನವ್ಯವೆಂಬ ಹೆಸರು ಹೊಂದಿ ನಮ್ಮ ಉದಾತ್ತ ಪರಂಪರೆ ಮತ್ತು ಸಂಸ್ಕೃತಿಯ ಉತ್ಕರ್ಷ ವಾಹಿನಿಯಾಗಿದೆ. ಮಾತು-ಮಾತು ಮಥಿಸಿ ತೆಗೆದ ನವನೀತ ಈ ಚುಟುಕು ಸಾಹಿತ್ಯ. ಹಾಸ್ಯ-ವಿಡಂಬನೆ ಇದರ ತಾಳ ಸಂಗೀತ. ಕಾವ್ಯ ಕ್ಷೇತ್ರದ ಕಾಮನಬಿಲ್ಲು ಇದು. ಅಷ್ಟೇ ಅಲ್ಲ ಕಚ್ಚಿದರೆ ಕಬ್ಬಿನಂತೆ, ಹಿಂಡಿದರೆ ಜೇನಿನಂತೆ, ಮೂಸಿದರೆ ಹೂವಿನಂತೆ, ಬೀಸಿದರೆ ಬಾರೋಕೋಲಿನಂತೆ, ಗಾತ್ರದಲ್ಲಿ ಕಿರಿದಾದರೂ ಪಾತ್ರದಲ್ಲಿ ಹಿರಿದಾದುದು ಎಂದರು. ಕುಳ್ಳಗಿದ್ದರು ರೂಪವತಿ ಹೆಣ್ಣಿನಂತೆ ಎಂದು ಎಸ್‌.ವಿ. ರಂಗಣ್ಣವರ್ ಚುಟುಕನ್ನು ವಿಶ್ಲೇಷಿಸಿದ್ದಾರೆ. ರಾಷ್ಟ್ರಕವಿ ಕುವೆಂಪು ಚುಟುಕನ್ನು ಜೇನುನೊಣಕ್ಕೆ ಹೋಲಿಸಿದ್ದಾರೆ. ಜೇನುನೊಣದ ದೇಹ ಚಿಕ್ಕದು, ಮೈತುಂಬಾ ಮಧು, ಕೊನೆಗೊಂದು ಚುಚ್ಚು ಮುಳ್ಳು ಎಂದು ವಿಶ್ಲೇಷಿಸಿದ್ದಾರೆ. ಹೆಸರೇ ಸೂಚಿಸುವಂತೆ ಚುಟುಕು ಆಕಾರದಲ್ಲಿ ವಾಮನ, ಆದರೆ ಪ್ರಭಾವದಲ್ಲಿ ತ್ರಿವಿಕ್ರಮ. ತಿವಿದು ಹೇಳಿ ಚುರುಕು ಮುಟ್ಟಿಸುವುದು ಇದರ ಮೂಲ ಗುಣ, ಆಲೋಚನೆಗೆ ಹಚ್ಚುವುದು ಇದರೆ ಜಾಣತನ. ಪುಟ್ಟ ಪುಟ್ಟ ಸಾಲುಗಳ ಮೂಲಕ ಬದುಕನ್ನು ಕಟ್ಟಿಕೊಡುವ ಮನಮೋಹಕ ಸಾಹಿತ್ಯವಿದು ಎಂದು ಬಣ್ಣಿಸಿದರು.

ಚುಟುಕುಗಳು ಕೇವಲ ನವೋದಯದ ಕಾಲದ ಸೃಷ್ಟಿಯಲ್ಲ. ಶಾಸನ, ಹಳೆಗನ್ನಡ ಸಾಹಿತ್ಯದಲ್ಲೂ ಕಿರುಪದ್ಯವೆಂಬ ಹೆಸರಿನಿಂದ ಕಾಣಿಸಿಕೊಂಡಿವೆ. ಕ್ರಿ.ಶ. 700ರ ಕಪ್ಪೆಅರಭಟ್ಟನ ಶಾಸನದ ''''ಸಾಧುಗೆ ಸಾಧು; ಮಾಧುರ್ಯಂಗೆ ಮಾಧುರ್ಯಂ'''' ಎಂಬ ತ್ರಿಪದಿ ಸಾದೃಶ್ಯದ ಪದ್ಯವಾಗಲಿ, 9ನೇ ಶತಮಾನದ ಕವಿರಾಜಮಾರ್ಗದ ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಗಣಿತಮತಿಗಳ್ ಎಂಬ ಕಂದಪದ್ಯವಾಗಲಿ ಹೀಗೆ ಚುಟುಕು ಸಾದೃಶ್ಯದ ಕಿರುನುಡಿಗಳನ್ನು ಹಳೆಗನ್ನಡ ಕಾವ್ಯದುದ್ದಕ್ಕೂ ಕಾಣಬಹುದು. ಚುಟುಕು ಹನಿಗವನಗಳು ಇಂಗ್ಲಿಷಿನ ಲಿಮುರಿಕ್ ನಿಂದ ಹುಟ್ಟಿ ಬಂದಿದ್ದರೂ ಇದರ ಜೀವಾನುಭವಗಳನ್ನು ಶಿವಶರಣರ ವಚನಗಳಲ್ಲಿ, ಸರ್ವಜ್ಞೆನ ತ್ರಿಪದಿಯಲ್ಲಿ, ಜನಪದ ಗಾದೆ ಒಗಟುಗಳಲ್ಲಿ, ಹಿಂದುಸ್ತಾನಿ ಶಾಯರಿಗಳಲ್ಲೂ ಉಸಿರಾಡಿದ್ದುಂಟು ಎಂದು ಸಾಶಿ ಮರಳಯ್ಯನವರು ಹೇಳಿರುವುದನ್ನು ವಿವರಿಸಿದರು. ಭಾಷಣದುದ್ದಕ್ಕೂ ಅನೇಕ ಚುಟುಕುಗಳನ್ನು ಹೇಳಿ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿದರು.