ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದು, ಅವರನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಭಾಗದಲ್ಲಿ ‘ಫಿಲ್ಮ್ ಸಿಟಿ’ ನಿರ್ಮಾಣದ ಅಗತ್ಯವಿದೆ. ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆತರೆ ಉತ್ತರ ಕರ್ನಾಟಕವೂ ಚಿತ್ರರಂಗದ ಪ್ರಮುಖ ಕೇಂದ್ರವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ.

ಧಾರವಾಡ:

ಇಲ್ಲಿಯ ಆಲೂರು ಭವನದಲ್ಲಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಆಯೋಜಿಸಿದ್ದ ಎರಡು ದಿನಗಳ ‘ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಿರಿಯ ನಟ, ನಿರ್ದೇಶಕ ಸುರೇಶ್ ಹೆಬ್ಳೀಕರ್ ಅವರಿಗೆ ಜೀವಮಾನದ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮುಂದಿನ ದಿನಗಳಲ್ಲಿ ತಮ್ಮ ನೆಚ್ಚಿನ ಜಿಲ್ಲೆ ಧಾರವಾಡದಲ್ಲಿ ಸಿನಿಮಾಗಳನ್ನು ನಿರ್ದೇಶಿಸುವ ತಮ್ಮ ಹಂಬಲ ವ್ಯಕ್ತಪಡಿಸಿದ ಹೆಬ್ಲೀಕರ, ಸಿನಿಮಾ ಕೇವಲ ಮನರಂಜನೆಯ ಮಾಧ್ಯಮವಲ್ಲ, ಅದು ಒಂದು ಕಾಲಘಟ್ಟದ ಚರಿತ್ರೆಯನ್ನು ದಾಖಲಿಸುವುದರ ಜತೆಗೆ ಸಮಾಜದ ಸಾಂಸ್ಕೃತಿಕ ನೆಲೆ ಹಾಗೂ ಇತಿಹಾಸವನ್ನು ಪ್ರತಿಬಿಂಬಿಸುವ ಪ್ರಬಲ ಮಾಧ್ಯಮವಾಗಿದೆ ಎಂದರು.

ಚಿತ್ರೋತ್ಸವಕ್ಕೆ ಚಾಲನೆ ನೀಡಿದ ಸಂಸದ ಜಗದೀಶ ಶೆಟ್ಟರ್, ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಪ್ರತಿಭಾವಂತ ಕಲಾವಿದರಿದ್ದು, ಅವರನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಭಾಗದಲ್ಲಿ ‘ಫಿಲ್ಮ್ ಸಿಟಿ’ ನಿರ್ಮಾಣದ ಅಗತ್ಯವಿದೆ. ಸ್ಥಳೀಯ ಪ್ರತಿಭೆಗಳಿಗೆ ಸೂಕ್ತ ವೇದಿಕೆ ದೊರೆತರೆ ಉತ್ತರ ಕರ್ನಾಟಕವೂ ಚಿತ್ರರಂಗದ ಪ್ರಮುಖ ಕೇಂದ್ರವಾಗಿ ಬೆಳೆಯುವ ಸಾಮರ್ಥ್ಯ ಹೊಂದಿದೆ ಎಂದು ಆಶಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಸಿನಿಮಾ ನೈಜ ಜೀವನದ ಪ್ರತಿಬಿಂಬ. ಉತ್ತಮ ಸಿನಿಮಾಗಳು ಸಮಾಜದಲ್ಲಿ ಸನ್ಮಾರ್ಗದಲ್ಲಿ ನಡೆಯಲು ಪ್ರೇರಣೆ ನೀಡುತ್ತವೆ. ಸಿನಿಮಾ ಮತ್ತು ಸಮಾಜದ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುವಂತಹ ಪ್ರಯತ್ನಗಳಿಗೆ ಪ್ರೋತ್ಸಾಹ ನೀಡಬೇಕಾದ ಅಗತ್ಯವಿದೆ ಎಂದರು.

ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನದಲ್ಲಿ ನಟ ಅನಿರುದ್ ಜಟ್ಕರ್ ಭಾಗವಹಿಸಿ, ಈ ಭಾಗದ ಸಿನಿಮಾ ಹಾಗೂ ಕಲಾ ಕ್ಷೇತ್ರದ ಬೆಳವಣಿಗೆಗೆ ಸಹಕಾರ ಒದಗಿಸುವ ಭರವಸೆ ನೀಡಿದರು. ವಿಶೇಷ ಅತಿಥಿಯಾಗಿದ್ದ ಹಿರಿಯ ನಟಿ ಭವ್ಯಾ, ಧಾರವಾಡ, ಸಾಹಿತಿ-ಕಲಾವಿದರು ಹಾಗೂ ಗಾಯಕರು ಬೆಳೆದ ಪುಣ್ಯಭೂಮಿ ಎಂದರು. ಪತ್ರಕರ್ತರಾದ ರಾಧಾ ಹಿರೇಗೌಡರ, ಹರೀಶ ನಾಗರಾಜು ಇದ್ದರು. ಮಂಡಳಿಯ ಅಧ್ಯಕ್ಷ ಮಂಜುನಾಥ್ ಹಗೇದಾರ, ವಾಣಿಜ್ಯ ಮಂಡಳಿ ನಡೆದು ಬಂದ ಹಾದಿ, ಕೈಗೊಂಡಿರುವ ವಿವಿಧ ಕಾರ್ಯಕ್ರಮ ಹಾಗೂ ಸಾಧಿಸಿರುವ ಪ್ರಗತಿಯ ಕುರಿತು ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ರಾಹುಲ್ ದತ್ತಪ್ರಸಾದ್ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಕಲ್ಮೇಶ್ ಹಾವೇರಿಪೇಟ, ಪದಾಧಿಕಾರಿಗಳಾದ ಪ್ರಭು ಹಂಚಿನಾಳ್, ಅಶ್ಪಾಕ್ ಸೈಯದ್, ಪ್ರವೀಣಾ ಕುಲಕರ್ಣಿ, ಕಿರಣ ಸಿದ್ದಾಪೂರ, ಎನ್.ಎ. ದೇಸಾಯಿ ಇದ್ದರು.

ಚಿತ್ರೋತ್ಸವದ ವಿವಿಧ ವಿಭಾಗಗಳಲ್ಲಿ ಜ್ಯೂರಿಗಳು ಆಯ್ಕೆ ಮಾಡಿದ ಅತ್ಯುತ್ತಮ ಕೃತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅತ್ಯುತ್ತಮ ಕಿರುಚಿತ್ರ ವಿಭಾಗದಲ್ಲಿ ‘ಸಮಯ’, ಅತ್ಯುತ್ತಮ ಚಲನಚಿತ್ರ ವಿಭಾಗದಲ್ಲಿ ‘ರತ್ನಗರ್ಭ’, ಅತ್ಯುತ್ತಮ ಆಲ್ಬಂ ಸಾಂಗ್ ವಿಭಾಗದಲ್ಲಿ ‘ಮನಸೇ ಮನಸೇ’ ಹಾಗೂ ಅತ್ಯುತ್ತಮ ಟೆಲಿಫಿಲ್ಮ್ ವಿಭಾಗದಲ್ಲಿ ‘ಶ್ರೀಗಂಧ’ ಪ್ರಶಸ್ತಿಗೆ ಪಾತ್ರವಾದವು.