ಬೆಂಗಳೂರು ವರ್ತುಲ ರೈಲು: ಡಿಪಿಆರ್‌ ಶೀಘ್ರ ರೈಲ್ವೇ ಮಂಡಳಿಗೆ

| Published : Mar 31 2024, 02:07 AM IST / Updated: Mar 31 2024, 05:40 AM IST

ಬೆಂಗಳೂರು ವರ್ತುಲ ರೈಲು: ಡಿಪಿಆರ್‌ ಶೀಘ್ರ ರೈಲ್ವೇ ಮಂಡಳಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ವರ್ತುಲ ರೈಲ್ವೆ (ರಿಂಗ್ ರೈಲ್ವೇ) ಯೋಜನೆ ಪೂರ್ಣಗೊಳ್ಳಲು ಕನಿಷ್ಠ 5-8 ವರ್ಷ ಬೇಕು. ಪ್ರಸ್ತುತ ಫೈನಲ್‌ ಲೋಕೇಶನ್‌ ಸರ್ವೇ, ಹಾಗೂ ಡಿಪಿಆರ್‌ ಕಾರ್ಯಗಳು ನಡೆಯುತ್ತಿದೆ ಎಂದು ನೈಋತ್ಯ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಮಯೂರ್‌ ಹೆಗಡೆ

  ಬೆಂಗಳೂರು :  ರಸ್ತೆ ಟ್ರಾಫಿಕ್‌ ನಿವಾರಣೆ, ರೈಲುಗಳ ಸುಗಮ ಕಾರ್ಯಾಚರಣೆ ದೃಷ್ಟಿಯಿಂದ ಮಹತ್ವ ಪಡೆದಿರುವ ನಗರದ ವರ್ತುಲ ರೈಲ್ವೆ (ರಿಂಗ್ ರೈಲ್ವೇ) ಯೋಜನೆಯ ವಡ್ಡರಹಳ್ಳಿ - ದೇವನಹಳ್ಳಿ ನಡುವಿನ ಮೊದಲ ಹಂತದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಿದ್ದು, ಶೀಘ್ರವೇ ರೈಲ್ವೇ ಮಂಡಳಿಗೆ ಸಲ್ಲಿಕೆ ಆಗಲಿದೆ.

ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್‌ ಈಚೆಗೆ ಈ ಯೋಜನೆ ಘೋಷಿಸಿದ್ದು, ದೇಶದಲ್ಲೇ ಅತೀ ಉದ್ದದ ವರ್ತುಲ ರೈಲು ಇದಾಗಲಿದೆ ಎಂದಿದ್ದರು. ಈ ಯೋಜನೆ ಪೂರ್ಣಗೊಳ್ಳಲು ಕನಿಷ್ಠ 5-8 ವರ್ಷ ಬೇಕು. ಪ್ರಸ್ತುತ ಫೈನಲ್‌ ಲೋಕೇಶನ್‌ ಸರ್ವೇ, ಹಾಗೂ ಡಿಪಿಆರ್‌ ಕಾರ್ಯಗಳು ನಡೆಯುತ್ತಿದ್ದು, ಇದು ಪೂರ್ಣವಾಗಲು ಎರಡು ವರ್ಷ ಬೇಕು ಎಂದು ನೈಋತ್ಯ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಸರ್ವೆ ಪೂರ್ಣ:  ಮೊದಲ ಹಂತರವಾಗಿ ವಡ್ಡರಹಳ್ಳಿ - ದೇವನಹಳ್ಳಿ ನಡುವಿನ 24ಕಿಮೀ ಸರ್ವೇ ಪೂರ್ಣಗೊಂಡಿದೆ. ಬೆಂಗಳೂರು ಮೂಲದ ಸಿ-ಕಾನ್‌ ಸಂಸ್ಥೆಯು ಸರ್ವೆ ಮುಗಿಸಿದ್ದು, ನೈಋತ್ಯ ರೈಲ್ವೇ ಮೂಲಕ ಶೀಘ್ರವೇ ರೈಲ್ವೇ ಮಂಡಳಿಗೆ ವರದಿ ಸಲ್ಲಿಕೆಯಾಗಲಿದೆ. ಎರಡನೇ ಹಂತದ 263ಕಿಮೀ ಎಫ್‌ಎಲ್‌ಎಸ್‌ನ್ನು ಹೈದ್ರಾಬಾದ್‌ ಮೂಲದ ಆರ್‌.ಸಿ.ಅಸೋಸಿಯೇಟ್ಸ್‌ ಕಂಪನಿ ನಡೆಸುತ್ತಿದೆ. ಪ್ರಾಥಮಿಕ ಕಾರ್ಯ ನಡೆಯುತ್ತಿದ್ದು, ಇನ್ನೆರಡು ತಿಂಗಳಲ್ಲಿ ತಳಮಟ್ಟದ ಸಮೀಕ್ಷೆ ಆರಂಭಿಸಲಿದೆ ಎಂದು ‘ಕನ್ನಡಪ್ರಭ’ಕ್ಕೆ ಬೆಂಗಳೂರು ವಿಭಾಗೀಯ ರೈಲ್ವೇ ಹಿರಿಯ ಅಧಿಕಾರಿಗಳು ವಿವರಿಸಿದರು.

ಕೆಐಎಡಿಬಿ, ಬಿಡಿಎ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ, ಬೆಂಗಳೂರು - ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಪ್ರದೇಶ ಯೋಜನೆ ಪ್ರಾಧಿಕಾರ, ನಮ್ಮ ಮೆಟ್ರೋ, ಬೆಂಗಳೂರು ಇಂಟರ್‌ನ್ಯಾಷನಲ್‌ ಪ್ಲಾನಿಂಗ್‌ ಅಥಾರಿಟಿ ಸೇರಿ ಇತರೆಲ್ಲ ನಿಗಮಗಳ ಜೊತೆ ಚರ್ಚಿಸಲಾಗುವುದು. ಅವರ ಮಾಸ್ಟರ್‌ ಪ್ಲಾನ್‌ಗಳನ್ನು ಅಧ್ಯಯನ ಮಾಡಿ, ಉಪನಗರ ರೈಲ್ವೇ ಸೇರಿ ಇತರೆ ಯೋಜನೆಗಳ ನಡುವೆ ತೊಂದರೆಗೆ ಅವಕಾಶ ಇಲ್ಲದಂತೆ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಸುಗಮ ಸಂಚಾರ:  ವರ್ತುಲ ರೈಲಿನಿಂದಾಗಿ ರಾಜಧಾನಿಗೆ ಬರುವ ಗೂಡ್ಸ್‌, ಪ್ರಯಾಣಿಕ ರೈಲಿನ ಸಂಚಾರದ ಅಡೆತಡೆ ನಿವಾರಣೆಯಾಗಲಿದೆ. ಹೊರ ಜಿಲ್ಲೆ, ರಾಜ್ಯದಿಂದ ನಗರಕ್ಕೆ ಬರುವ ಸಾಕಷ್ಟು ಪ್ರಯಾಣಿಕ ರೈಲುಗಳು, ಗೂಡ್ಸ್‌ ಹಾಗೂ ಇತರೆ ಪ್ರಯಾಣಿಕ ರೈಲುಗಳು ಮುಂದೆ ಹೋಗುವವರೆಗೆ ಐದು ನಿಮಿಷದಿಂದ ಮುಕ್ಕಾಲು ಗಂಟೆವರೆಗೆ ನಿಲುಗಡೆ ಆಗುತ್ತಿವೆ. ಹೈದ್ರಾಬಾದ್‌ನಿಂದ ಬರುವ ರೈಲು ತಮಿಳುನಾಡಿಗೆ ಹೋಗಬೇಕಾದರೆ ನಗರವನ್ನು ಸುತ್ತುಹೊಡೆದು ಹೋಗುವ ಸ್ಥಿತಿಯಿದೆ.

ಮೈಸೂರಿನಿಂದ ಚೆನ್ನೈ ಕಡೆಗೆ ಹೋಗುವ ಎಲ್ಲ ರೈಲುಗಳು ನಗರಕ್ಕೆ ಬಂದು ಹೋಗುವ ಅಗತ್ಯ ಇರಲಾರದು. ವರ್ತುಲ ರೈಲು ಆದಲ್ಲಿ ಗೂಡ್ಸ್‌ ರೈಲುಗಳು ನಗರ ಪ್ರವೇಶಿಸುವುದು ಬಹುತೇಕ ಕಡಿಮೆಯಾಗುವ ಸಾಧ್ಯತೆಯಿದೆ. ಇದರಿಂದ ಸರಕು ಎರಡು-ಮೂರು ದಿನ ಮೊದಲು ನಿಗದಿತ ಸ್ಥಳ ತಲುಪಬಹುದು. ಇಲ್ಲಿ ಮೆಮು (ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್) ರೈಲುಗಳ ಸಂಚಾರದಿಂದ ಸ್ಥಳೀಯ ಪ್ರಯಾಣಿಕರಿಗೂ ಹೆಚ್ಚು ಅನುಕೂಲವಾಗಲಿದೆ ಎಂದು ನೈಋತ್ಯ ರೈಲ್ವೇ ತಿಳಿಸಿದೆ.

ವರ್ತುಲ ರೈಲಿಗೆ ಎಷ್ಟು ಭೂಮಿ ಇಲಾಖೆ ಬಳಿ ಲಭ್ಯವಿದೆ. ಕೆರೆ ಅಥವಾ ಖಾಸಗೀ ಕಂಪನಿಯ ಭೂಮಿ ಅಡ್ಡವಿರುವ ವಿಚಾರ, ಎಷ್ಟು ಸೇತುವೆ ನಿರ್ಮಾಣ ಆಗಬೇಕು ಎಂಬೆಲ್ಲ ವಿಚಾರದ ಜೊತೆಗೆ ಜನತೆಗೆ ತೊಂದರೆ ಆಗದಂತೆ ಎಷ್ಟು ಕಡಿಮೆ ಭೂಸ್ವಾಧೀನ ಆಗಬೇಕು ಎಂಬುದು ಸೇರಿ ಎಲ್ಲ ಸಾಧಕ-ಬಾಧಕ ವರದಿಯನ್ನು ಸರ್ವೇ ಸಂಸ್ಥೆಯಿಂದ ಪಡೆಯಲಿದ್ದೇವೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ವರ್ತುಲ ರೈಲು: ನಿಡವಂದದಿಂದ ದೊಡ್ಡಬಳ್ಳಾಪುರ, ದೇವನಹಳ್ಳಿ, ಮಾಲೂರು ಹೀಲಲಿಗೆ, ಸೋಲೂರು ನಿಡವಂದ ಸಂಪರ್ಕಿಸುವ 287ಕಿಮೀ ಉದ್ದದ ಯೋಜನೆ ಇದು. ನಗರಕ್ಕೆ ಎಂಟು ಕಡೆಗಳಿಂದ ಸಂಪರ್ಕ ಹೊಂದಿರಲಿದೆ. ಈ ಯೋಜನೆಯ ಸರ್ವೆಗೆ ₹ 7 ಕೋಟಿ ಮೀಸಲಿಡುವುದಾಗಿ ಕೇಂದ್ರ ರೈಲ್ವೇ ಸಚಿವರು ತಿಳಿಸಿದ್ದರು.