ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಮಹಾತ್ಮ ಗಾಂಧಿ ಜಯಂತಿ ಪ್ರಯುಕ್ತ ನಗರದ ಹೇಮಾವತಿ ಪ್ರತಿಮೆ ಬಳಿ ಖಾದಿ ಮತ್ತು ಗ್ರಾಮೋದ್ಯೋಗ ಸಹಕಾರ ಸಂಘದಿಂದ ಹಾಕಲಾಗಿರುವ ಖಾದಿ ಮಹೋತ್ಸವ ಮಾರಾಟ ಮಳಿಗೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ಹಾಗೂ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಅವರು ಬುಧವಾರ ಖಾದಿ ಬಟ್ಟೆ ವ್ಯಾಪಾರ ಮಾಡುವುದರ ಮೂಲಕ ಉದ್ಘಾಟಿಸಿದರು.ನಂತರ ಪ್ರೀತಂ ಜೆ. ಗೌಡ ಮಾಧ್ಯಮದೊಂದಿಗೆ ಮಾತನಾಡಿ, ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿ ವಿಶೇಷ ದಿನದ ಅಂಗವಾಗಿ ನರೇಂದ್ರ ಮೋದಿ ಅವರು ಕರೆ ಕೊಟ್ಟಂತೆ ಗುಡಿ ಕೈಗಾರಿಕೆ ಮತ್ತು ಸ್ಥಳೀಯವಾಗಿ ನಡೆಯುವ ಎಲ್ಲಾ ಕೈಗಾರಿಕೆಗೆ ಉತ್ತೇಜನ ಕೊಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ನೇತೃತ್ವದಲ್ಲಿ ಹಾಸನದ ಪ್ರಮುಖ ರಸ್ತೆಯಲ್ಲಿ ಖಾದಿ ಬಂಡಾರದ ಮಳಿಗೆ ತೆರೆಯಲಾಗಿದೆ. ಜಿಲ್ಲೆಯ ಜನತೆ ಹೆಚ್ಚು ಖಾದಿ ಬಳಸುವ ಮೂಲಕ ಗುಡಿ ಕೈಗಾರಿಕೆಗೆ ಪ್ರೋತ್ಸಾಹ ಕೊಡುವಂತೆ ಕೋರಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ಮಾತನಾಡಿ, ಮಹಾತ್ಮ ಗಾಂಧಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜನ್ಮದಿನದ ಅಂಗವಾಗಿ ಈಗಾಗಲೇ ಸ್ವಚ್ಛತಾ ಅಭಿಯಾನವನ್ನು ಜಿಲ್ಲಾದ್ಯಂತ ಮಂಡಲವಾರು ಯೋಜನೆ ಹಾಕಿಕೊಂಡು ಸ್ಥಳೀಯವಾಗಿರುವ ದೇವಾಲಯಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಸ್ವಚ್ಛತೆಯನ್ನು ಮಾಡಲಾಗಿದೆ. ಎಲ್ಲೆಲ್ಲಿ ಗಾಂಧಿ ಪ್ರತಿಮೆಗಳಿವೆಯೋ, ಅಲ್ಲಿ ಮಾಲಾರ್ಪಣೆ ಮಾಡುತ್ತಾ ಬಂದಿದ್ದೇವೆ ಎಂದರು.
ಇದರ ಮುಂದುವರೆದ ಭಾಗವಾಗಿ ಖಾದಿ ಮಳಿಗೆಗೆ ಆಗಮಿಸಿ ಖಾದಿ ವಸ್ತುಗಳನ್ನು ಖರೀದಿ ಮಾಡುವ ಮೂಲಕ ಈ ಮಳಿಗೆಗೆ ಚಾಲನೆ ಕೊಡಲಾಗಿದೆ. ನಾಗರಿಕರೆಲ್ಲಾ ಇಲ್ಲಿಗೆ ಬಂದು ಸ್ವದೇಶಿ ವಸ್ತುಗಳ ಖರೀದಿಸಿ ಉತ್ತೇಜನ ಕೊಡುವಂತೆ ಮನವಿ ಮಾಡಿದರು.ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಮಿತ್ ಶೆಟ್ಟಿ, ನಗರಾಧ್ಯಕ್ಷ ಮಂಜು, ಮುಖಂಡರಾದ ಶೋಭನ್ ಬಾಬು, ಮಂಕಿಬಾತ್ ಜಿಲ್ಲಾ ಸಂಚಾಲಕ ಚೇತನ್, ಗುರುಪ್ರಸಾದ್, ಓಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜೀವ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷ ನೇತ್ರಾ ಮಂಜುನಾಥ್, ಮಾಜಿ ಅಧ್ಯಕ್ಷೆ ರತ್ನ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಅಂಬಿಕಾ, ಪ್ರೇಮಕುಮಾರ್ ಇತರರು ಉಪಸ್ಥಿತರಿದ್ದರು.