ಕನ್ನಡಪ್ರಭ ವಾರ್ತೆ ಹಾಸನ

ಕಾರ್ಮಿಕರಿಗೆ ಸುಪ್ರೀಂ ಕೋರ್ಟ್‌ನ ಐತಿಹಾಸಿಕ ತೀರ್ಪಿನ ಅನ್ವಯ ವೈಜ್ಞಾನಿಕವಾಗಿ ಕನಿಷ್ಠ ₹36 ಸಾವಿರ ವೇತನ ನಿಗದಿಪಡಿಸಬೇಕು, ಗುತ್ತಿಗೆ ಕಾರ್ಮಿಕರನ್ನು ಖಾಯಂ ಮಾಡಬೇಕು ಹಾಗೂ ಕಾರ್ಮಿಕರ ಮೂಲಭೂತ ಹಕ್ಕುಗಳನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಮೇ 30ರಂದು ಹಾಸನದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸಿಐಟಿಯು ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಎಲ್ಲಾ ವಿಭಾಗದ ಕಾರ್ಮಿಕರಿಗೆ ವೈಜ್ಞಾನಿಕವಾಗಿ ಕನಿಷ್ಠ ವೇತನ ನಿಗದಿಪಡಿಸುವಂತೆ ಒತ್ತಾಯಿಸಿ ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿಗಳಿಗೆ ಮುತ್ತಿಗೆ ಹಾಕಲು ಸಿಐಟಿಯು ರಾಜ್ಯ ಸಮಿತಿ ಕರೆ ನೀಡಿದೆ. ರಾಜ್ಯಸರ್ಕಾರ ಮೇ ೨೨ರಂದು ಕನಿಷ್ಠ ವೇತನದ ಅಂತಿಮ ಅಧಿಸೂಚನೆ ಹೊರಡಿಸಿರುವುದನ್ನು ಸಿಐಟಿಯು ಸ್ವಾಗತಿಸುತ್ತದೆ. ಆದರೆ ಅದು ಸುಪ್ರೀಂಕೋರ್ಟ್‌ ಸೂಚಿಸಿರುವ ಮಾನದಂಡಗಳಿಗೆ ಅನುಗುಣವಾಗಿಲ್ಲ. ಇಂದಿನ ಬೆಲೆ ಏರಿಕೆ, ಮನೆ ಬಾಡಿಗೆ, ಮಕ್ಕಳ ಶಿಕ್ಷಣ, ವೈದ್ಯಕೀಯ ವೆಚ್ಚ ಹಾಗೂ ಜೀವನ ನಿರ್ವಹಣೆಯ ಖರ್ಚುಗಳನ್ನು ಪರಿಗಣಿಸಿದರೆ ಅಕುಶಲ ಕಾರ್ಮಿಕರಿಗೆ ಕನಿಷ್ಠ ೩೬ ಸಾವಿರ ವೇತನ ನಿಗದಿಯಾಗಬೇಕು ಎಂದು ಆಗ್ರಹಿಸಿದರು.

ಭಾರತದ ಸರ್ವೋಚ್ಚ ನ್ಯಾಯಾಲಯವು ೧೯೯೨ರ ‘ವರ್ಕ್‌ಮೆನ್ ವರ್ಸ್‌ಸ್ ರೆಪ್ಟಕೋಸ್ ಬ್ರೆಟ್ ಆಂಡ್ ಕಂಪನಿ’ ಪ್ರಕರಣದಲ್ಲಿ ಕನಿಷ್ಠ ವೇತನ ನಿಗದಿಗೆ ಆರು ಪ್ರಮುಖ ಮಾರ್ಗಸೂಚಿಗಳನ್ನು ನೀಡಿದೆ. ಕುಟುಂಬದ ಬಳಕೆ ಯೂನಿಟ್, ಆಹಾರ, ಬಟ್ಟೆ, ವಸತಿ, ಇಂಧನ ಹಾಗೂ ಇತರೆ ವೆಚ್ಚಗಳ ಜೊತೆಗೆ ಮಕ್ಕಳ ಶಿಕ್ಷಣ, ವೈದ್ಯಕೀಯ ಹಾಗೂ ಸಾಮಾಜಿಕ ಭದ್ರತೆಗೆ ಹೆಚ್ಚುವರಿ ೨೫ ಶೇಕಡಾ ವೆಚ್ಚವನ್ನು ಪರಿಗಣಿಸಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಆದರೆ ರಾಜ್ಯ ಸರ್ಕಾರದ ಪ್ರಸ್ತುತ ಅಧಿಸೂಚನೆ ಈ ಮಾನದಂಡಗಳಿಗೆ ಅನುಗುಣವಾಗಿಲ್ಲ ಎಂದು ದೂರಿದರು.

೨೦೨೫ರ ಏಪ್ರಿಲ್ ೧೧ರಿಂದ ಪೂರ್ವಾನ್ವಯವಾಗಿ ಪರಿಷ್ಕೃತ ವೇತನ ಜಾರಿಗೆ ತಂದು ಒಂದು ವರ್ಷದ ಅರಿಯರ್ಸ್‌ ನೀಡಬೇಕು. ಗಾರ್ಮೆಂಟ್ಸ್, ಪ್ಲಾಂಟೇಷನ್, ಕಾಫಿ ಕ್ಯೂರಿಂಗ್, ಬೀಡಿ, ಅಗರಬತ್ತಿ, ಕೈಮಗ್ಗ ಸೇರಿದಂತೆ ಅಧಿಸೂಚನೆಯಿಂದ ಹೊರಗಿಟ್ಟಿರುವ ಎಲ್ಲಾ ಕ್ಷೇತ್ರಗಳ ಕಾರ್ಮಿಕರಿಗೂ ಇದೇ ಕನಿಷ್ಠ ವೇತನ ಅನ್ವಯಿಸಬೇಕು. ಸ್ಕೀಂ ನೌಕರರನ್ನೂ ಕನಿಷ್ಠ ವೇತನ ವ್ಯಾಪ್ತಿಗೆ ತರಬೇಕು ಎಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕ ವಿರೋಧಿಯಾಗಿದ್ದು, ಕೆಲಸದ ಅವಧಿ ಹೆಚ್ಚಳ, ಸಾಮಾಜಿಕ ಭದ್ರತೆ ಕುಂಠಿತ, ಗುತ್ತಿಗೆ ಮತ್ತು ನಿಗದಿತ ಅವಧಿಯ ನೇಮಕಾತಿಗೆ ಉತ್ತೇಜನ ನೀಡುವ ಮೂಲಕ ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುತ್ತಿವೆ ಎಂದು ಆರೋಪಿಸಿದರು. ಮಾಲೀಕರ ವಿರುದ್ಧ ಕಾನೂನುಬದ್ಧ ಮುಷ್ಕರ ನಡೆಸುವ ಹಕ್ಕನ್ನೂ ಈ ಸಂಹಿತೆಗಳು ಕಸಿದುಕೊಳ್ಳುತ್ತಿವೆ. ಆದ್ದರಿಂದ ಕಾರ್ಮಿಕರ ಪರ ತಿದ್ದುಪಡಿ ಮಾಡದೇ ರಾಜ್ಯದಲ್ಲಿ ಈ ಸಂಹಿತೆಗಳನ್ನು ಜಾರಿಗೆ ತರಬಾರದು ಎಂದು ಸಿಐಟಿಯು ಒತ್ತಾಯಿಸಿದೆ ಎಂದರು.


ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಅತಿ ಕಡಿಮೆ ವೇತನಕ್ಕೆ ದುಡಿಯುತ್ತಿರುವ ಖಾಯಮೇತರ, ಗುತ್ತಿಗೆ ಹಾಗೂ ಹಂಗಾಮಿ ಕಾರ್ಮಿಕರನ್ನು ಖಾಯಂಗೊಳಿಸಬೇಕು. ಅಮಾನವೀಯ ಗುತ್ತಿಗೆ ಪದ್ಧತಿ ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಏಪ್ರಿಲ್ ೧೪ರಿಂದ ರಾಜ್ಯಾದ್ಯಂತ ಸಾಮೂಹಿಕ ಸಹಿ ಸಂಗ್ರಹ ಚಳವಳಿ ನಡೆಸಲಾಗುತ್ತಿದ್ದು, ಕಾರ್ಮಿಕರ ನ್ಯಾಯಯುತ ಬೇಡಿಕೆಗಳಿಗೆ ಸಾರ್ವಜನಿಕರ ಬೆಂಬಲ ಹೆಚ್ಚುತ್ತಿದೆ ಎಂದು ತಿಳಿಸಿದರು. ಮೇ ೩೦ರಂದು ಬೆಳಿಗ್ಗೆ ೧೦.೩೦ಕ್ಕೆ ಹಾಸನದ ಮಹಾರಾಜ ಪಾರ್ಕ್‌ನಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಯಲಿದ್ದು, ಜಿಲ್ಲೆಯ ಎಲ್ಲಾ ವಿಭಾಗದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಕರೆ ನೀಡಿದರು.ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಬಿ. ಪುಷ್ಪ, ಜಿಲ್ಲಾ ಖಜಾಂಚಿ ಅರವಿಂದ್, ಪ್ಲಾಂಟೇಷನ್ ಕಾರ್ಮಿಕರ ಸಂಘದ ಕಾರ್ಯದರ್ಶಿ ಸೌಮ್ಯ, ಗ್ರಾಮ ಪಂಚಾಯಿತಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಟಿ. ಹೊನ್ನೇಗೌಡ, ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುಳ, ಪೌರ ಮುನಿಸಿಪಲ್ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.