ಸಾರಾಂಶ
ದುರ್ಬಲ ಹಾಗೂ ಹಿಂದುಳಿದ ವರ್ಗದವರು ಹೆಚ್ಚು ಬೆಲೆಯ ಸಾರವರ್ಧಿತ ಆಹಾರ ಪದಾರ್ಥಗಳನ್ನು ಕೊಂಡು ಬಳಕೆ ಮಾಡುವ ಸಾಮರ್ಥ್ಯ ಹೊಂದಿಲ್ಲ.
ಕನ್ನಡಪ್ರಭ ವಾರ್ತೆ ಮೈಸೂರು
ಆಧುನಿಕ ಸಮಾಜದಲ್ಲಿ ಯಾರೂ ಪರಿಪೂರ್ಣ ಆಹಾರ ಸೇವಿಸುತ್ತಿಲ್ಲ ಎಂದು ನ್ಯಾಷನಲ್ ಇನ್ಸ್ ಟಿಟ್ಯೂಟ್ ಆಫ್ ನ್ಯೂಟ್ರಿಷನ್ ನಿವೃತ್ತ ನಿರ್ದೇಶಕ ಡಾ.ಬಿ. ಶಶಿಕಿರಣ್ ಕಳವಳ ವ್ಯಕ್ತಪಡಿಸಿದರು.ನಗರದ ಸಿ.ಎಫ್.ಟಿ.ಆರ್.ಐನಲ್ಲಿ ಶುಕ್ರವಾರ ನಡೆದ ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ನೀಗಿಸಲು ಪ್ರಯತ್ನ ಮತ್ತು ಪ್ರಗತಿ ಕುರಿತ ರಾಷ್ಟ್ರೀಯ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅದರಲ್ಲಿಯೂ ದುರ್ಬಲ ಹಾಗೂ ಹಿಂದುಳಿದ ವರ್ಗದವರು ಹೆಚ್ಚು ಬೆಲೆಯ ಸಾರವರ್ಧಿತ ಆಹಾರ ಪದಾರ್ಥಗಳನ್ನು ಕೊಂಡು ಬಳಕೆ ಮಾಡುವ ಸಾಮರ್ಥ್ಯ ಹೊಂದಿಲ್ಲ. ಇದು ಸಾರ್ವಜನಿಕ ಆರೋಗ್ಯ ಹಾಗೂ ದೇಶದ ಒಟ್ಟು ಆರ್ಥಿಕತೆ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತಿದೆ ಎಂದು ಹೇಳಿದರು.
ಪೋಷಕಾಂಶಗಳ ಕೊರತೆ ನೀಗಿಸಬೇಕಾದರೆ ಎಲ್ಲಾ ಆಹಾರ ಪದಾರ್ಥಗಳೂ ಸಾರ ವರ್ಧನೆಗೊಳ್ಳಬೇಕು. ಆದರೆ ಇದನ್ನು ಎಲ್ಲಾ ಕಂಪನಿಗಳು ತಯಾರಿಸಲು ಸಾಧ್ಯವಿಲ್ಲ. ಇದರ ಹಿಂದೆ ಅಡಗಿರುವ ವಿಜ್ಞಾನ- ತಂತ್ರಜ್ಞಾನವನ್ನು ಅರಿತು ನಾನಾ ಬದಲಾವಣೆ ತರುವ ಮೂಲಕ ಸಾರವರ್ಧಿತ ಆಹಾರ ಬಳಕೆ ಹೆಚ್ಚಿಸಬೇಕು ಎಂದು ಅವರು ಸಲಹೆ ನೀಡಿದರು.ಚಂಡೀಗಢದ ಪಿಜಿಐಎಂಇಆರ್ ಹೆಮಟಾಲಜಿ ವಿಭಾಗದ ಮುಖ್ಯಸ್ಥೆ ಪ್ರೊ. ರೀನಾ ದಾಸ್, ಕೇಂದ್ರ ಸರ್ಕಾರದ ತಾಯಿ ಮತ್ತು ಮಕ್ಕಳ ಆರೋಗ್ಯ ವಿಭಾಗದ ನಿವೃತ್ತ ಆಯುಕ್ತ ಡಾ. ಅಜಯ್ ಕುಮಾರ್ ಖೇರಾ, ಐಐಟಿಯ ಪ್ರೊ. ಜಿತೇಂದ್ರ ಕೆ. ಸಾದು, ಸಿ.ಎಫ್.ಟಿ.ಆರ್.ಐ ನಿರ್ದೇಶಕಿ ಡಾ. ಶ್ರೀದೇವಿ ಅನ್ನಪೂರ್ಣ ಸಿಂಗ್, ಡಾ.ಪಿ. ಗಿರಿಧರ್ ಮೊದಲಾದವರು ಇದ್ದರು.