ಸಾರಾಂಶ
ಶಾಲೆ ಕಾಲೇಜು ಹಾಗೂ ಕಲ್ಯಾಣ ಮಂಟಪ ತೆರಿಗೆ ಕಟ್ಟಿಸಿಕೊಳ್ಳಬೇಕು ನಗರಸಭೆ ವ್ಯಾಪ್ತಿಯ ಅಂಗಡಿ ಮಳಿಗೆಗಳ ಬಾಕಿ ಇರುವ ಬಾಡಿಗೆ ವಸೂಲಿ ಮಾಡಬೇಕು. ಈಗಿನ ದರ ನಿಗಧಿ ಮಾಡಬೇಕು. ನಗರ ಸಭೆಯ ಸಿ.ಎ ನಿವೇಶನ ಉದ್ಯಾನವನ ಜಾಗಗಳಿಗೆ ತಂತಿ ಬೇಲಿ ಅಳವಡಿಸಬೇಕು.
ಕನ್ನಡಪ್ರಭ ವಾರ್ತೆ ಶಿಡ್ಲಘಟ್ಟ
ನಗರದಲ್ಲಿ ಸ್ಥಳೀಯ ನಗರಸಭೆಗೆ ನಿರ್ಮಾಣ ಮಾಡಲಾಗುತ್ತಿರುವ ನೂತನ ಕಟ್ಟಡವನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ನಗರಸಭಾ ಸದಸ್ಯರು ನಗರಸಭೆ ಅಧಿಕಾರಿಗಳಿಗೆ ಒತ್ತಾಯಿಸಿದರು.ಸೋಮವಾರ ನಗರಸಭೆ ಅಧ್ಯಕ್ಷ ಎಂ.ವಿ ವೆಂಕಟಸ್ವಾಮಿ ಅಧ್ಯಕ್ಷತೆಯಲ್ಲಿ ನಗರಸಭೆ ಸಭಾಂಗಣದಲ್ಲಿ ಮೊದಲ ಬಾರಿಗೆ ನಗರಸಭೆ ಸಾಮಾನ್ಯ ಸಭೆ ನಡೆಯಿತು. ಈ ವೇಳೆ ಸದಸ್ಯರು ನಗರಸಭೆ ಕಚೇರಿಗೆ ನಿರ್ಮಾಣ ಆಗುತ್ತಿರುವ ಕಟ್ಟಡ ವಿಳಂಬ ಆಗುತ್ತಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ತೆರಿಗೆ ಸಂಗ್ರಹಿಸಲು ಮನವಿ
ಈ ವೇಳೆ ಮಾತನಾಡಿದ ನಗರಸಭೆ ಅಧ್ಯಕ್ಷ ಎಂ.ವಿ.ವೆಂಕಟಸ್ವಾಮಿ, ವಿಶೇಷವಾಗಿ ನಗರಸಭೆ ಸದಸ್ಯರು ಕಡ್ಡಾಯವಾಗಿ ಸಾರ್ವಜನಿಕರ ಮನವೊಲಿಸಿ ನಗರಸಭೆಗೆ ಬರಬೇಕಾದ ತೆರಿಗೆಯನ್ನು ಕಟ್ಟಿಸಬೇಕೆಂದು ನಗರಸಭೆ ಸದಸ್ಯರಲ್ಲಿ ಮನವಿ ಮಾಡಿದರು. ಶಾಲೆ ಕಾಲೇಜು ಹಾಗೂ ಕಲ್ಯಾಣ ಮಂಟಪ ತೆರಿಗೆ ಕಟ್ಟಿಸಿಕೊಳ್ಳಬೇಕು ನಗರಸಭೆ ವ್ಯಾಪ್ತಿಯ ಅಂಗಡಿ ಮಳಿಗೆಗಳ ಬಾಕಿ ಇರುವ ಬಾಡಿಗೆ ವಸೂಲಿ ಮಾಡಬೇಕು. ಈಗಿನ ದರ ನಿಗಧಿ ಮಾಡಬೇಕು. ನಗರ ಸಭೆಯ ಸಿ.ಎ ನಿವೇಶನ ಉದ್ಯಾನವನ ಜಾಗಗಳಿಗೆ ತಂತಿ ಬೇಲಿ ಅಳವಡಿಸಬೇಕು. ನಗರಸಭೆಯ ವಿವಿಧ ಅನುದಾನಗಳು ಉಳಿಕೆ ಮೊತ್ತದಲ್ಲಿ ಕಚೇರಿಗೆ ಅವಶ್ಯವಿರುವ ಗಣಕಯಂತ್ರ ಪ್ರಿಂಟರ್ ಗಳು ಜೆರಾಕ್ಸ್ ಯಂತ್ರಗಳನ್ನು ಖರೀದಿಸಬೇಕು ಎಂಬುದು ಸೇರಿ ಅನೇಕ ವಿಷಯಗಳ ಬಗ್ಗೆ ಪ್ರಸ್ತಾಪನೆ ಮಾಡಿದರು .6ನೇ ವಾರ್ಡಿನ ನಗರಸಭೆ ಸದಸ್ಯ ಮುನಿರಾಜು ಮಾತನಾಡಿ ನಗರಸಭೆಗೆ ಸಂಬಂಧಿಸಿದ ನಗರದಲ್ಲಿ ಅನೇಕ ಕಟ್ಟಡಗಳು ಪರವಾನಿಗೆ ಇಲ್ಲದೆ ಅಕ್ರಮವಾಗಿ ಕಟ್ಟಡಗಳು ನಿರ್ಮಿಸುತ್ತಿದ್ದಾರೆ 4- 5 ಅಂತಸ್ತುಗಳ ಮನೆಗಳನ್ನು ಸಹ ನಿರ್ಮಿಸುತ್ತಿದ್ದರು ನಗರ ಸಭೆ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು. ಈ ಸಂದರ್ಭದಲ್ಲಿ ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಮತ್ತು ನಗರಸಭೆ ಸದಸ್ಯರು ಉಪಸ್ಥಿತರಿದ್ದರು.